Skip to main content

ವಿಸ್ಮಯ ಢಂಗುರ ಕನ್ನಡ ಕ್ಲಾಸಿಫೈಡ್ ತಾಣಕ್ಕೆ ವಿದಾಯ ಹೇಳುತ್ತಾ...

ಬರೆದಿದ್ದುMay 13, 2013
3ಅನಿಸಿಕೆಗಳು

ವಿಸ್ಮಯ ಢಂಗುರ ಎಂಬ ಕನ್ನಡದಲ್ಲಿ ಕ್ಲಾಸಿಫೈಡ್ ತಾಣ ಮಾಡುತ್ತೇನೆಂದು ಸ್ನೇಹಿತರ ಬಳಿ ಹೇಳಿದಾಗ ಅವರೆಲ್ಲ ಕೇಳಿದ ಮಾತು ಒಂದೇ. ಇಂಗ್ಲೀಷ್ ಅಲ್ಲಿ ಮಾಡಿ ಸಾರ್. ನನ್ನ ಪ್ರಕಾರ ಇಂಗ್ಲೀಷ್ ಅಲ್ಲಿ ಸುಲೇಖಾ.ಕಾಂ, ಓಎಲ್ ಎಕ್ಸ್.ಕಾಂ ಒಂದೇ ಎರಡೇ ಹಲವು ತಾಣಗಳಿವೆ. ಅದೂ ಕೋಟ್ಯಂತರ ಬಂಡವಾಳ ಹೂಡಿಕೆಯ ಆಧಾರದ ಮೇಲೆ. ಅವರ ಜೊತೆ ಸ್ಪರ್ಧಿಸುವದು ಕಷ್ಟ. ಕನ್ನಡದಲ್ಲಿ ಒಂದೂ ಇಲ್ಲ. ಇಲ್ಲಿ ಮಾಡಿದರೆ ಕನಿಷ್ಟ ಜನ ಖುಷಿಯಿಂದ ಬಳಸುತ್ತಾರೆಂಬ ಭ್ರಮೆ ನನ್ನದಾಗಿತ್ತು. ಅವರ ಮಾತನ್ನು ನಿರಾಕರಿಸಿ ಕನ್ನಡದಲ್ಲೇ ಮಾಡಲು ನಿರ್ಧರಿಸಿದೆ.


ಹಗಲು ರಾತ್ರಿ ಕುಳಿತು ಓಪನ್ ಸೋರ್ಸ್ ಸಾಫ್ಟವೇರ್ ಗಳನ್ನು ಡೌನ್ ಲೋಡ್ ಮಾಡಿ ಹೋಲಿಕೆ ಮಾಡಿ ಒಂದನ್ನು ಆಯ್ಕೆ ಮಾಡಿ ಅದರ ಕಸ್ಟಮೈಜೇಶನ್ ಆರಂಭಿಸಿದೆ. ಕನ್ನಡಕ್ಕೆ ಅನುವಾದ ಕೂಡಾ ಮಾಡಿದ್ದಾಯ್ತು. ಹಲವು ತಿಂಗಳ ಶ್ರಮದ ನಂತರ ತಾಣ ಲೈವ್ ಕೂಡಾ ಹೋಯ್ತು. ಮೊದ ಮೊದಲು ಒಂದೇ ವಾರದಲ್ಲಿ ಅನೇಕ ಆಸಕ್ತರು ಜಾಹೀರಾತು ಹಾಕಿದರಾದರೂ ನಂತರ ೧೩ ಜಾಹೀರಾತಿನ ನಂತರ ನಿಂತೇ ಹೋಯ್ತು.


ಅಷ್ಟರಲ್ಲಿ ವಿಸ್ಮಯ ನಗರಿಯ ಸರ್ವರ್ ಅವಧಿ ಮುಗಿಯುತ್ತಾ ಬಂದು ಹೊಸ ಸರ್ವರ್ ಗೆ ಮೈಗ್ರೇಟ್ ಮಾಡುವ ಪರಿಸ್ಥಿತಿ ಬಂತು. ಅದರ ಕೆಲಸದ ನಡುವೆ ವಿಸ್ಮಯ ಢಂಗುರಕ್ಕೆ ಪ್ರಚಾರ ನೀಡಲಾಗಲಿಲ್ಲ. ಹಾಗೂ ಹೀಗೂ ಒಂದು ವರ್ಷ ಕಳೆಯಿತು. ಇತ್ತೀಚೆಗೆ ವಿಸ್ಮಯಡಂಗುರ.ಕಾಂ ಡೋಮೈನ್ ಅವಧಿ ಮುಗಿದ ಬಗ್ಗೆ ಈಮೇಲ್ ಬಂತು. ಹಣ ನೀಡಿ ನವೀಕರಿಸಬೇಕಿತ್ತು. ತುಂಬಾ ವಿಚಾರ ಮಾಡಿದ ಮೇಲೆ ಅದನ್ನು ಕ್ಯಾನ್ಸಲ್ ಮಾಡುವ ನಿರ್ಧಾರಕ್ಕೆ ಬಂದೆ.


ಈ ವಿಫಲತೆಗೆ ಹಲವು ಕಾರಣಗಳಿವೆ. ಒಂದು ನಾನು ಅಂಗಡಿ ಅಂಗಡಿ ಅಲೆದು ಜಾಹೀರಾತು ಸಂಗ್ರಹಿಸಲು ಸೇಲ್ಸ್ ಮನ್ ಇಡದಿರುವದು, ಐಪ್ಯಾಡ್/ಐಫೋನ್ ಎಂದು ಬಹುಮಾನದ ಆಸೆ ತೋರಿಸದಿರುವದು, ಪ್ರಚಾರದ ಕೊರತೆ, ಸಾಫ್ಟವೇರ್ ಅನ್ನು ಇನ್ನೂ ಚೆನ್ನಾಗಿ ಡೆವೆಲೊಪ್ ಮಾಡದಿರುವದು, ಮೊಬೈಲ್, ಟ್ಯಾಬ್ಲೆಟ್ ಗಳಿಗೆ ಅಪ್ಲಿಕೇಶನ್ ಮಾಡದಿರುವದು, ಪತ್ರಿಕೆಗಳಲ್ಲಿ ಜಾಹೀರಾತು ನೀಡದಿರುವದು ಹಾಗೂ ಕೊನೆಯದಾಗಿ ಕನ್ನಡದಲ್ಲಿ ಸುಲಲಿತವಾಗಿ ಟೈಪಿಂಗ್ ಮಾಡುವ ವ್ಯವಸ್ಥೆ ಇರದಿರುವದು.ಇವೆಲ್ಲ ಮಾಡಬೇಕು ಅಂದರೆ ಎಂದರೆ ಲಕ್ಷಾಂತರ ರೂ ಬೇಕು. ಹಾಗೆ ಖರ್ಚು ಮಾಡಿ ಕೊಟ್ಟರೂ ಅದನ್ನು ವಾಪಸ್ ಪಡೆಯುವದು ಸುಲಭದ ಮಾತಲ್ಲ. ಇವೆಲ್ಲ ವ್ಯಯಕ್ತಿಕ ಮಟ್ಟದಲ್ಲಿ ಆಗುವ ಕೆಲಸವಲ್ಲ.


ಇನ್ಯಾರಾದರೂ ದೊಡ್ಡ ಕಂಪನಿ ಬಂಡವಾಳ ಹೂಡಿ ಕನ್ನಡದಲ್ಲಿ ಕ್ಲಾಸಿಫೈಡ್ ತಾಣ ಮಾಡಲಿ ಎಂದು ಬಯಸುತ್ತಾ ನನ್ನ ಪ್ರಯತ್ನ ನಿಲ್ಲಿಸುತ್ತಿದ್ದೇನೆ. ಇದರ ಜೊತೆಗೆ ವಿಸ್ಮಯ ಶಾಪಿಂಗ್ ತಾಣದ ಪ್ರಯತ್ನ ಕೂಡಾ ನಿಲ್ಲಿಸುತ್ತಿದ್ದೇನೆ. ಕಾರಣ ಇಷ್ಟೇ ಅಕಸ್ಮಾತ್ ಹಲವು ಲಕ್ಷ ಬಂಡವಾಳ ಹಾಕಿ ತಾಣದ ಕಾರ್ಯ ಆರಂಭಿಸಿ ಬಳಸದೇ ನಷ್ಟವಾದರೆ? ಆ ತರಹದ ನಷ್ಟ ಹೋರಲು ನನ್ನ ಬಳಿ ಸಧ್ಯಕ್ಕೆ ಸಾಧ್ಯವಾಗದು. ಇದೊಂದು ತರಾ ಬೇಡಿಕೆಯ ನಿಯಮದ ಆಟ. ಬೇಡಿಕೆ ಇಲ್ಲದಿದ್ದರೆ ಪೂರೈಕೆ ಮಾಡ ಹೊರಟರೆ ನಷ್ಟ ಖಚಿತ.


ಏನೇ ಇರಲಿ ಕನ್ನಡದಲ್ಲಿ ಇನ್ನೂ ಹಲವು ತಾಣಗಳು ಬರಲಿ ಎಂದು ಬಯಸುತ್ತಾ ಈ ಲೇಖನವನ್ನು ಮುಗಿಸುತ್ತೇನೆ. 

ಲೇಖಕರು

ರಾಜೇಶ ಹೆಗಡೆ

ಕಂಡದ್ದು ಕಂಡ ಹಾಗೆ

ಸಾಫ್ಟವೇರ್ ಇಂಜನಿಯರ್. ಕನ್ನಡದಲ್ಲಿ ಸಾಫ್ಟವೇರ್ ತಯಾರಿಸುವದು ನನ್ನ ಹವ್ಯಾಸ. ಆಗಾಗ ಲೇಖನ ಬರೀತಿನಿ ಆದ್ರೆ ಅದರಲ್ಲಿ ಪಳಗಿದವನಲ್ಲ.

ಅನಿಸಿಕೆಗಳು

prasadbshetty ಶುಕ್ರ, 05/17/2013 - 16:10

ಮುಂದುವರಿಸಿ...ನಾವಿದ್ದೇವೆ...ಅಣ್ಣ...

 

with u alway's...with love....Smile

ರಾಜೇಶ ಹೆಗಡೆ ಶನಿ, 05/18/2013 - 08:54

ಧನ್ಯವಾದಗಳು ನಿಮ್ಮ ಹುರಿದುಂಬಿಸುವ ಮಾತುಗಳಿಗೆ ಪ್ರಸಾದ್ ಅವರೇ,

ವಿಸ್ಮಯ ಢಂಗುರದ ಬಗ್ಗೆ ತೀರ್ಮಾನಕ್ಕೆ ತುಂಬಾ ಯೋಚಿಸಿ ಬಂದಿದ್ದೇನೆ ಪ್ರಸಾದ್. ಅದನ್ನು ನಾನು ಅಂದು ಕೊಂಡ ಮಟ್ಟಕ್ಕೆ ನಡೆಸಬೇಕಾದರೆ ತುಂಬಾ ರಿಸೋರ್ಸ್ ಬೇಕು. ವ್ಯಾಪಾರೀಕರಣದ ಮೂಲಕ ಮಾತ್ರ ನಿಭಾಯಿಸಲು ಸಾಧ್ಯ. ಕನ್ನಡದಲ್ಲಿ ಜಾಹೀರಾತು ಅಥವಾ ಇನ್ಯಾವುದೇ ಮಾರ್ಗದ ಮೂಲಕ ಧನ ಕ್ರೋಡಿಕರಿಸುವದು ಸುಲಭದ ಮಾತಲ್ಲ. ಖಂಡಿತ ಮುಂದೊಮ್ಮೆ ಅವಕಾಶ ಬಂದಾಗ ಹೊಸ ಕನ್ನಡ ಪ್ರಾಜೆಕ್ಟ್ ಆರಂಭಿಸುತ್ತೇನೆ. ಸಧ್ಯಕ್ಕೆ ನನ್ನ ಮುಂದಿರುವದು ವಿಸ್ಮಯ ನಗರಿ ತಾಣ ಹಾಗೂ ಪ್ರಕಾಶನ ಮಾತ್ರ. ಇನ್ಯಾರಾದರೂ ಕನ್ನಡದಲ್ಲಿ ಕ್ಲಾಸಿಫೈಡ್ ಅಥವಾ ಶಾಪಿಂಗ್ ತಾಣ ಮಾಡಲು ಮುಂದೆ ಬಂದರೆ ಅವರಿಗೆ ಸಲಹೆ / ಮಾರ್ಗದರ್ಶನ ನೀಡಬಲ್ಲೆ ಅಷ್ಟೇ.

 

Nanjunda Raju Raju ಶುಕ್ರ, 06/07/2013 - 19:06

ಮಾನ್ಯರೇ, ಕನ್ನಡಕ್ಕಾಗಿ ಹೊರಾಡುತ್ತಿದ್ದೀರಿ. ಮೊದಲಿಗೆ ಸೋತಿದ್ದೀರಿ. ಸೋಲೇ ಗೆಲುವಿನ ಮೆಟ್ಟಿಲು ಎನ್ನುತ್ತಾರೆ. ಕಾಲಾವಕಾಶ ಕೂಡಿ ಬರಲಿ. ಕಾಯಬೇಕು ಅಷ್ಟೆ. ನಿಮ್ಮ ಪ್ರಯತ್ನಕ್ಕೆ ನಮ್ಮ ಸಹನುಭೂತಿ ಇದೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.