Skip to main content

ಪಿಸು ಮಾತು : ಕಳೆದು ಹೋದ ಬಾಲ್ಯ ಶ್ರೀಮಂತಿಕೆ..

ಬರೆದಿದ್ದುMay 5, 2013
1ಅನಿಸಿಕೆ

ಆಧುನಿಕತೆಯಲ್ಲಿ ಕಳೆದುಹೋಗುತ್ತಿರುವ ಬಾಲ್ಯದ ಶ್ರೀಮ0ತಿಕೆ
( ಒಂದೇ ಒಂದು ಮಗು ಇವತ್ತು ನಮ್ಮ ಸಮಕಾಲೀನರಷ್ಟು ಪ್ರಭುದ್ಧವಾಗಿ ಆ ಹಳೆಯ ಕಥೆಗಳನ್ನು ಹೇಳಬಲ್ಲವಾ..? )
ತುಂಬಾ ದಿನ ಹಿಂದೇನಲ್ಲ. ಕೇವಲ ಒಂದೂವರೆ ದಶಕದ ಹಿಂದೆ ಶಾಲೆಗಳು, ಅವುಗಳ ಸ್ವರೂಪ ಹೇಗಿದ್ದವು ಕೊಂಚ ಫ್ಲಾಶ್ ಬ್ಯಾಕಿಗೇ ಹೋಗಿ. ಇವತ್ತಿಗೂ ನನ್ನ ಕಣ್ಣ ಮುಂದೆ ಆ ಹಳ್ಳಿಯ ಶಾಲೆ, ಅದರಾಚೆಗಿನ ಬಯಲು, ಸ್ಕೂಲಿನ ಮೇಷ್ಟ್ರು, ಬುಡಕ್ಕೆ ಕುರ ಆಗಿ ಶಾಲೆಗೆ ಹೋಗದೆ ಮೂರು ತಿಂಗಳು ಕಳೆದಾಗ ಮನೆಗೆ ಬಂದು ಪಾಠ ಮಾಡಿ " ನಮ್ಮ ಹುಡುಗಾ.. ಹುಶಾರ ಅದಾನು, ಪಾಸ್ ಮಾಡ್ಲಿ " ಎಂದು ಕಕ್ಕುಲಾತಿ ತೋರುತ್ತಿದ್ದ ನಾಯಕ ಮಾಸ್ತರರು, ಇವತ್ತಿಗೂ ನನ್ನ ನೆನಪಿನ ಗರಣಿಗಳಿಲ್ಲಿ ಗಿರಿಗಿಟ್ಲೆಯಾಡುತ್ತವೆ. ಅದಕ್ಕಿಂತಲೂ ಹೆಚ್ಚಾಗಿ ನನಗೆ ಅರಿವು ಮೂಡುತ್ತಿದ್ದಾಗಿನಿಂದಲೂ ದಿನವೂ ರಾತ್ರಿ ನಮ್ಮನೆಯ ಎದುರಿನ ದೊಡ್ಡ ಕಲ್ಲಿನ ಮೇಲೆ ಕುಳಿತು ನಮ್ಮ ಅಪ್ಪ ಮೇಲಿನ ಆಕಾಶ ತೋರಿಸುತ್ತಾ ದಿನಕ್ಕೊಮ್ಮೆ ಕಥೆ ಹೇಳುತ್ತಾ ಇರುತ್ತಿದ್ದರೆ ನನ್ನ ಕಣ್ಗಳೆದುರು ರಾಶಿ ರಾಶಿ ನಕ್ಷತ್ರಗಳು, ಅವುಗಳ ಮೇಲೆ ಅದ್ಭುತ ಕಥಾನಾಯಕರುಗಳು ನಿಂತಿರುತ್ತಿದ್ದರು.ಆ ಅರ್ಜುನ, ಭೀಮ ಬಂಡಿಯ ಕಥೆ, ಕೌರವನ ನೀರಿನೊಳಗಿನ ಸೆಣಸಾಟ, ನಕುಲ ಸಹದೇವರಿಗಾಗಿ ತನ್ನ ತಮ್ಮಂದಿರನ್ನೇ ಬಿಟ್ಟುಕೊಡುವ ಧರ್ಮರಾಯ, ಮೀನಿನ ಕಣ್ಣಿಗೆ ಬಾಣ ಬೀಡುವ ಅರ್ಜುನ, ಹೆದೆ ಏರಿಸುವ ರಾಮ, ಕಾಡಿನಲ್ಲಿ ಜಟಾಯು ಸಾಯುವ ದೃಶ್ಯ, ಲಕ್ಷ್ಮಣ ಸತ್ತಾಗ ಹನುಮಂತ ಬೆಟ್ಟವನ್ನೇ ಹೊತ್ತು ತರುವ ಅದ್ಬುತ ಸಾಹಸ... ಅಬ್ಬಬ್ಬಾ ಒಂದೇ ಎರಡೇ ಎಲ್ಲವೂ ಆಗೆಲ್ಲಾ ಅದ್ಭುತ ಕಥಾನಕಗಳು. ನನ್ನ ಕಣ್ಣೆದುರಿನಲ್ಲಿ ತರಹೇವಾರಿ ನಾನಾ ರೂಪಿ ಆಕೃತಿಗಳು ಮೈದಳೆದು ಆವತ್ತಿನಿಂದ ಇವತ್ತಿನವರೆಗೂ ಮಾಹಾಭಾರತ ರಾಮಾಯಣಗಳು ನನ್ನ ಮನಸ್ಸಿನಲ್ಲಿ ಆದೆಷ್ಟು ಅಚ್ಚುಕಟ್ಟಾಗಿ ಕುಳಿತಿವೆ ಎಂದರೆ ಈಗಲೂ ಯಾವುದೇ ದೃಶ್ಯದ ಮೇಲೆ ನಾನು ಗಂಟೆಗಟ್ಟಲೇ ಮಾತಾಡಬಲ್ಲೆ. ಯಾಕೆಂದರೆ ಆಗಿನ ಕಾಲಕ್ಕೆ ಕಥೆಗಳಲ್ಲಿ ಅಗ್ರಪಾಲು ಸಲ್ಲುತ್ತಿದ್ದುದೇ ಈ ಮಹಾಕಾವ್ಯಗಳಿಗೆ.


ಅದೆಲ್ಲಕ್ಕಿಂತಲೂ ಅಚ್ಚರಿ ಮತ್ತು ಅದ್ಭುತ ಎಂದರೆ ಆವತ್ತಿಗೂ ಈವತ್ತಿಗೂ ಈ ಕಾವ್ಯಗಳು ಅದೆಷ್ಟು ಉತ್ತಮ ಕಥಾನಕವನ್ನು ಹೊಂದಿದ್ದಾವೆಂದರೆ ಈಗಲೂ ಅವು ಅಷ್ಟೆ ಜನಪ್ರಿಯ. ಎಷ್ಟು ಬಾರಿ ಕೇಳಿದರೂ ಮತ್ತೇ ಮತ್ತೇ ಕೇಳೋಣ ಎನ್ನಿಸುವಷ್ಟರ ಮಟ್ಟಿಗೆ ಅದ್ಭುತವನ್ನು ಉಂಟು ಮಾಡುತ್ತಿದ್ಡವು ಈ ಕಥೆಗಳು. ಅದರೊಂದಿಗೆ ರಾಜಾವಿಕ್ರಮವರ್ಮ ಶನಿಮಾಹಾರಾಜ, ಶಂಕರನ ಕಥೆಗಳು, ವಿಷ್ಣುವಿನ ಹತ್ತು ಹಲವು ರೂಪಗಳು, ಇಂದ್ರನ ಲೋಲುಪತೆ, ವಿಶ್ವಾಮಿತ್ರ ಮೇನಕೆಯ ಪ್ರಸಂಗ, ನಂತರ ಬಂದ ದುಶ್ಯಂತ ಮಾಹಾರಾಜ, ಶಿಬಿ ಚಕ್ರವತರ್ಿ, ಒಬ್ಬರಾ... ಇಬ್ಬರಾ... ಅದೆಷ್ಟು ಕಥೆಗಳು ಮಕ್ಕಳಿಗೆ ಹೇಳಲು ಕುಳಿತರೆ ಅದೆಂದಿಗೂ ಮುಗಿಯದ ಭಂಡಾರ. ಅದರೊಂದಿಗೆ ಅಲ್ಲಲ್ಲಿಯ ಜನಪದ ಮತ್ತು ಸಂಸ್ಕೃತಿಯನ್ನು, ಸ್ಥಳ ಮಾಹಾತ್ಮೆಯನ್ನು ಸಾರುವ ಉದಾ. ಕೋಟಿ ಚೆನ್ನೆಯ್ಯ, ರಾಯಣ್ಣರಂಥ ಅದ್ಭುತ ಸ್ಥಳೀಯ ನಾಯಕರ ಕತೆಗಳು. ಅದ್ಯಾವತ್ತಿಗಿದ್ದರೂ ಎರಡ್ಮೂರಲ್ಲ ನಾಲ್ಕಾರು ಬಾರಿಯಾದರೂ ಕೇಳೋಣ ಎನ್ನಿಸುವ ಮಜ ನೀಡುವ ಕಥಾನಕಕ್ಕೆ ಇಂದಿಗೂ ನನಗೆ ಅಚ್ಚರಿ ಮೂಡಿಸುತ್ತಿದೆ.


ಯಾಕೆಂದರೆ ನಂತರದ ದಿನಗಳಲ್ಲಿ ಒಂದೇ ಒಂದಾದರೂ ಅಂತಹ ಕಥೆಗಳು ಹುಟ್ಟಿಕೊಂಡಿವೆಯಾ...? ನಮ್ಮ ಮಕ್ಕಳಿಗೆ ನನ್ನ ಅಪ್ಪ, ಮಾವಂದಿರು, ಅಜ್ಜಿಯರು ಹೇಳಿದ ಕಥೆಯನ್ನು ಹೊರತು ಪಡಿಸಿ ಯಾವುದೇ ಹೊಚ್ಚ ಹೊಸ ಮಹಾ ಕಾವ್ಯಗಳಷ್ಟು ಅದ್ಭುತ ಅಥವಾ ನಮ್ಮ ಹಳೆಯ ಜನಪದೀಯ ಕತೆಯನ್ನುವಷ್ಟು ಅದ್ಭುತ ಕಥಾನಕವನ್ನು ತನ್ನಿ ನೋಡೋಣ. ಉಹೂಂ ಆಂದಿನಿಂದ ಇಂದಿನವರೆಗೂ ಈ ಗುಚ್ಛವೇ ಅಮರ. ಹಾಂ... ಅಮರ ಎನ್ನುತ್ತಿದ್ದಂತೆ ನೆನಪಾಗುತ್ತದೆ. ಅಮರ ಕಥಾ ಕೋಶದಲ್ಲಿ ಬರುತ್ತಿದ್ದ ಕಥೆಗಳು, ಬಹುಶ: ಈಗಲೂ ಮತ್ತೊಮ್ಮೆ ಓದಲು ಪ್ರಸ್ತುತವೇ. ಆದರೆ ತುಂಬಾ ಹೀನಾತಿ ಹೀನ ಮತ್ತು ದುರದೃಷ್ಟಕರವೆಂದರೆ ನಮಗೆ ಇವತ್ತಿನ ದಿನದಲ್ಲಿ, ಇತ್ತಿಚಿನ ದಶಕದಲ್ಲಿ ಒಂದೇ ಒಂದು ಅಂತಹ ಕಥಾನಕ ನಮ್ಮೆದುರಿನಲ್ಲಿ ಇಲ್ಲ. ಟಿ.ವಿ.ಯಲ್ಲಿ ಬಿ.ಆರ್. ಛೋಪ್ರಾನ ಮಾಹಾಭಾರತ ಎಂಬ ಸೀರಿಯಲ್ಲು ಬರುತ್ತಿದ್ದರೆ ಮನೆ ಮನೆಗಳು ಸ್ಟ್ರೈಕ್ ಮಾಡಿದಂತೆ ತಣ್ಣಗಾಗಿ ಬಿಡುತ್ತಿದ್ದವು. ಜನಗಳು ಹಳ್ಳಿಗಳಲ್ಲಿ ಥಿಯೇಟರ್ನಿಂದ ಹೊರಬಂದಂತೆ ಹೊರಬಂದು ಹೋಗುತ್ತಿದ್ದನ್ನು ನಾನು ಈಗಲೂ ನೆನಪಿಸಿಕೊಳ್ಳುತ್ತೇನೆ.
ಅದಕ್ಕೂ ಮೊದಲು ಪ್ರಕಟವಾದ ರಮಾನಂದ ಸಾಗರ ರಾಮಾಯಣ ಯಾವ ಮೋಡಿ ಮಾಡಿತೋ ಮಾಹಾಭಾರತ ಕೂಡಾ ಹಾಗೇ ವಿಜೃಂಭಿಸುತ್ತಲೇ ಹೋಯಿತು. ಅದ್ಯಾವ ಪರಿಯಲ್ಲಿ ಮಹಾಭಾರತ ನಮ್ಮನ್ನು ಆಡಿಕ್ಟ ಮಾಡಿತ್ತೆಂದರೆ ಆ ಹೊತ್ತಿಗೆ ಬಹುಶ: ಭಾರತಾದ್ಯಂತ ಹೆಚ್ಚು ಕಡಿಮೆ ಕಾಲ ಚಲಿಸದೇ ನಿಂತು ಬಿಡುತ್ತಿತ್ತು. ತೀರ ಎಸೆನ್ಶಿಯಲ್ ಸರ್ವೀಸ್ ಬಿಟ್ಟು ಬೇರಾವುದೇ ರಂಗದಲ್ಲಿ ಜನರು ಆ ದಿನಗಳಲ್ಲಿ ಕೆಲಸವನ್ನು ಆ ಸಮಯದ ಆಚೀಚೆಗೆ ಹೊ0ದಿಸಿಕೊಳ್ಳುತ್ತಿದ್ದರೆ, ವಿನ: ಯಾವತ್ತೂ ಮಾಹಾಭಾರತ ನೋಡದೆ ಹೊರಡುತ್ತಿರಲಿಲ್ಲ. ಅಷ್ಟು ಗಾಢವಾಗಿ ಸೆಳೆದು ನಿಲ್ಲಿಸುವ ಶಕ್ತಿ, ಕಥಾನಕ, ತನ್ಮಯತೆ, ಕಥಾ ಹಂದರ ಹಾಗಿದ್ದವು. ಒಂದೊಂದು ಪಾತ್ರವೂ ಪ್ರತ್ಯೇಕವಾಗಿ ನೆನಪಿಸಿಕೊಳ್ಳುವಂತಹ ಅದ್ಭುತಗಳು.


ಈಗ ಏನಾಗಿದೆ ನೋಡಿ...? ಒಂದೇ ಒಂದು ಮಗು ಇವತ್ತು ನಮ್ಮ ಸಮಕಾಲೀನರಷ್ಟು ಪ್ರಭುದ್ಧವಾಗಿ ಈ ಹಳೆಯ ಕಥೆಗಳನ್ನು ಹೇಳಬಲ್ಲವಾ..? ಮೊದಲಾದರೆ ನಮ್ಮ ಮೇಷ್ಟ್ರುಗಳೂ ಅದ್ಭುತವಾಗಿ ಈ ಕಥೆಗಳನ್ನು ಅದರ ನೀತಿಗಳನ್ನು ವಿವರಿಸಿ.. ಛೇ ಬಿಡಿ ಎಲ್ಲಿ ಬಂದಾವು ಆ ದಿನಗಳು. ಮಳೆಗಾಲದಲ್ಲಿ ಅಗ್ಗಿಷ್ಟಿಗೆಯ ಮುಂದೆ ಕುಳಿತು ಹಲಸಿನ ಬೀಜ ಸುಡುತ್ತಲೋ.. ಗೇರು ಬೀಜ ಸುಡುತ್ತಲೋ ಹಲಸಿನ ಹಪ್ಪಳ ಸುಟ್ಟು ಕೊಬ್ಬರಿ ಎಣ್ಣೆ ಬಿಟ್ಟುಕೊಂಡು ಕುರುಕುತ್ತಾ ಅಜ್ಜಿಯ ಹತ್ತಿರ ಬೈಸಿಕೊಳ್ಳುತ್ತಲೇ ಕಥೆ ಕೇಳುವ ಮಜವೇ ಬೇರೆ. ಈಗಿನವಕ್ಕೆ ಎಲ್ಲಿ ಗೊತ್ತು ಆ ಆಮೋದ ಆ ಮಜ. ಈಗ ಏನಿದ್ದರೂ ಟಾಮ್ ಆಂಡ್ ಜರಿ, ಮಿಕ್ಕಿ ಆಂಡ್ ಡೊನಾಲ್ಡ್, ಎದ್ದರೆ ಬಿದ್ದರೆ ಪೊಗೊ ಚಾನೆಲ್ಲು, ಕಾಟರ್ೂನ್ ನೆಟ್ ವಕರ್ು, ಟೂನ್ ಡಿಸ್ನೆ, ಹಂಗಾಮ, ಅದರ ಚಿನ್ ಚಾನು ಅವೆಲ್ಲವನ್ನು ಮೀರಿ ದೊಡ್ಡವರನ್ನೂ ಸಣ್ಣವರನ್ನು ಸೇರಿಯೇ ಸೆಳೆಯುವ ಚೆಡ್ಡಿ ಇದ್ದರೂ ಇಲ್ಲದಿದ್ಡರೂ ನಟನೆಯೊಂದಿಗೆ ತನ್ನ ಬಾಡಿ ಲ್ಯಾಂಗ್ವೇಜ್ನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಮಿ.ಬೀನ್.


ಹೇಳಿ. ಇದರಲ್ಲಿ ಯಾವ ಕಥೆಯನ್ನು ನಾವು ನೆನಪಿಟ್ಟು ಮತ್ತೆ ಅದನ್ನು ಮುಂದಿನವರಿಗೆ ತಲುಪಿಸಲು ಸಾಧ್ಯವಿದೆ. ಯಾವ ಟಾಂ, ಯಾವ ಬಿನ್, ಯಾವ ಕಾರ್ಟೂನ್, ಇವತ್ತು ಅಷ್ಟು ರಸವತ್ತಾಗಿ ವಿವರಿಸಬಲ್ಲ ಪಾತ್ರಗಳಾಗಿ ನಮ್ಮನ್ನು ರಂಜಿಸಬಲ್ಲವು. ಬಹುಶ: ಅಂತಹದ್ದೊಂದು ಬಾಲ್ಯವನ್ನು ಪಡೆದುದರಿಂದಲೇ ಇ0ದು ನಮಗೆ ಈ ಮಟ್ಟದಲ್ಲಿ ಒಂದು ಹಂತದವರೆಗೆ ಅದ್ಭುತ ಎನ್ನುವ ಶಿಕ್ಷಣ ದೊರೆಯದಿದ್ದರೂ ಬೆಳಯಲು ಸಾಧ್ಯವಾಯಿತಾ...? ಬಹುಶ: ಹೌದೆನ್ನಿಸುತ್ತದೆ. ಯಾಕೆಂದರೆ ಕಳೆದ ವಾರವಷ್ಟೆ ನಾನು ???????????? ಮಾತಾಡಲು ಕುಳಿತಾಗ ಹೀಗೆ ಬಾಲ್ಯವನ್ನು ನೆನಪು ಹಾಕಿಕೊಂಡು ಹಲ್ಕಿರಿದುಕೊಂಡು ನೆಗೆಯಾಡಿದ್ದೇವು. ಬಾರದ ದಿನಗಳನ್ನು ಮತ್ತೆ ಹಸಿರಾಗಿಸಿಕೊಂಡಿದ್ದೇವು. ಆ ಮಟ್ಟಿಗೆ ನಮ್ಮ ಮಕ್ಕಳು ದುರದೃಷ್ಟವಂತರಾ...? ಗೊತ್ತಿಲ್ಲ. ಆದರೆ ನಮಗಿಲ್ಲದ ಕಂಪ್ಯೂಟರು ಅವರ ಕೈಗೆ ಸಿಕ್ಕಿದೆ. ಅದಕ್ಕೂ ಮಿಗಿಲಾದ ಇಂಟರ್ನೆಟ್ಟು, ನಾನು ಕನಸಲ್ಲೂ ಊಹಿಸಲಾಗದ ವೈಜ್ಞಾನಿಕ ಅವಿಷ್ಕಾರಗಳು ಅವರ ಕೈಯ್ಯಲ್ಲಿ ಹರಿದಾಡುತ್ತಿವೆ. ಅದು ಅವರ ಅದೃಷ್ಟ. ಇರಲಿ ಬಿಡಿ. ಕಾಲ ಕಾಲಕ್ಕೂ ಬದಲಾಗುದೇ ನಿಯಮ ಅಲ್ವಾ..?


 

ಲೇಖಕರು

SANTOSHKUMAR M…

mounada mathugalu

Like to have good and lively freinds.
like to be with them when they really need...

ಅನಿಸಿಕೆಗಳು

ರಾಜೇಶ ಹೆಗಡೆ ಶನಿ, 05/11/2013 - 09:20

ತುಂಬಾ ಉತ್ತಮ ಲೇಖನ, ನಾನೂ ಕೂಡಾ ಚಿಕ್ಕವನಿದ್ದಾಗ ರಾಮಾಯಣ, ಮಹಾಭಾರತ, ತೆನಾಲಿ ರಾಮ, ವಿಕ್ರಂ ಬೇತಾಳ್ ಹೀಗೆ ಹಲವು ಹಿಂದಿ ದಾರಾವಾಹಿ ನೋಡಿ ಹಾಗೂ ಕನ್ನಡ ಅಮರ ಚಿತ್ರಕಥೆ ಓದಿ  ಬೆಳೆದವನು. ಎಲ್ಲಾ ನೆನಪು ಮತ್ತೊಮ್ಮೆ ಉಕ್ಕಿ ಬಂತು. ಅದೇ ರೀತಿ ಹತ್ತು ಹಲವು ಕಥೆ ಕೇಳಿ ಬೆಳೆದವನು. ಇಂದು ಖಾಸಗಿ ಶಾಲೆಗಳಲ್ಲಿ ಮಗುವನ್ನು ಆಧುನಿಕ ಸಮಾಜಕ್ಕೆ ತಕ್ಕಂತೆ ಬೆಳೆಯುವಂತೆ ಮಾಡುವ ಭರದಲ್ಲಿ ಇವೆಲ್ಲ ಮೂಲೆಗುಂಪಾಗಿವೆ. ಕಾರ್ಟೂನ್ ನೆಟವರ್ಕ್ ಹಾಗೂ ಪೋಗೋ ಮೊದಲಾವು ತೋರಿಸುವ ಅತಿರಂಜಿತ ಕಾರ್ಟೂನುಗಳೇ ಇಂದಿನ ಮಕ್ಕಳಿಗೆ ಆದರ್ಶ ವಾಗಿದೆ.

ಅಪ್ಪನ ಸ್ಮಾರ್ಟ್ ಫೋನಲ್ಲಿ ಅಥವಾ ಟ್ಯಾಬ್ಲೆಟ್ ಅಲ್ಲಿ ಆಂಗ್ರಿ ಬರ್ಡ್ಸ್, ಇಂಗ್ಲೀಷ್ ರೈಮ್ಸ್ ನೋಡಿ ಕುಣಿದಾಡುವದೇ ಮೋಜಾಗಿದೆ. ಇದು ತಪ್ಪೋ ಒಪ್ಪೋ ಆದರೆ ಕಾಲಮಾನಕ್ಕೆ ತಕ್ಕಂತೆ ಬಂದ ಬದಲಾವಣೆ.

ನಾವು ಓದುತ್ತಿದ್ದ ಕನ್ನಡ ಅಮರಚಿತ್ರ ಕಥೆಗಳು ಈಗ ಇಂಗ್ಲೀಷ್ ಅಲ್ಲಿ ಮಾತ್ರ ಬರುತ್ತಿವೆ. ಬಹುಶಃ ನನ್ನ ಮಗ ಅದನ್ನೇ ಓದಬೇಕು. ಇದು ಕಾಲನ ಮಹಿಮೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.