Skip to main content

ಯಶಸ್ವಿಯಾಗಿ ಆರು ವರ್ಷ ಮುಗಿಸಿದ ವಿಸ್ಮಯ ನಗರಿ!

ಬರೆದಿದ್ದುFebruary 3, 2013
9ಅನಿಸಿಕೆಗಳು

ಮೊದಲು ವಿಸ್ಮಯ ನಗರಿಯನ್ನು ಯಶಸ್ಸಿನ ಹಾದಿಯಲ್ಲಿ ನಡೆಸಿದ ಪ್ರತಿಯೊಬ್ಬ ವಿಸ್ಮಯ ಪ್ರಜೆಗಳು, ಬ್ಲಾಗ್ ಬರಹಗಾರರು, ಓದುಗರಿಗೆ ನನ್ನ ಅನಂತ ಧನ್ಯವಾದಗಳನ್ನು ಅರ್ಪಿಸ ಬಯಸುತ್ತೇನೆ. ನಿಜ ಈ ಆರು ವರ್ಷಗಳಲ್ಲಿ ಸಾವಿರಾರು  ಕನ್ನಡ ಬ್ಲಾಗ್ ತೆರೆದಿವೆ ಕೆಲವೊಮ್ಮೆ ಓದುಗರಿಲ್ಲದೇ ಇನ್ನೂ ಕೆಲವೊಮ್ಮೆ ಬ್ಲಾಗ್ ಬರೆಯುವವರು ಆಸಕ್ತಿ ಕಳೆದುಕೊಂಡಾಗ ಮುಚ್ಚಿವೆ. ಅದೇ ಈ ವಿಸ್ಮಯ ನಗರಿ ಅಂತಹ ತಾಣಗಳಲ್ಲಿ ಬ್ಲಾಗ್ ಮಾಡುವದರ ಲಾಭ. ಬ್ಲಾಗ್ ಬರೆಯುವವರು ಆಸಕ್ತಿ ಕಳೆದುಕೊಂಡು ನಿಲ್ಲಿಸಿದಾಗಲೂ ಅವರ ಲೇಖನ ಓದಲ್ಪಡುತ್ತಲೇ ಇರುತ್ತದೆ ಪ್ರತ್ಯೇಕ ಪಬ್ಲಿಸಿಟಿ ಅಗತ್ಯ ಇಲ್ಲ. ನನ್ನ ಆರು ವರ್ಷ ಹಳೆಯ ಲೇಖನದಲ್ಲಿ ಇದನ್ನೇ ಬರೆದಿದ್ದೆ.

ಈ ಏಳನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಹಿಂತಿರುಗಿ ನೋಡಿದಾಗ ಅನ್ನಿಸುತ್ತೆ, ಇದಕ್ಕಿಂತಲೂ ಚೆನ್ನಾಗಿ ವಿಸ್ಮಯ ನಡೆಸಬಹುದಿತ್ತಾ? ಅಂತಾ. ಆದರೆ ಕನ್ನಡ ಲಿಪಿಗೆ ಇರುವ ಮಾರುಕಟ್ಟೆಯ ಮಿತಿ ಹಾಗೂ ಬಳಕೆಯಲ್ಲಿ ಇರುವ ಕಡಿಮೆ ಆಸಕ್ತಿ ಕೈ ಕಟ್ಟಿ ಹಾಕಿ ಬಿಡುತ್ತದೆ.ಇಂದು ವಿಸ್ಮಯ ಕನ್ನಡ ತಾಣ ಆದ್ರೂ ಇದು ಸ್ಪರ್ದಿಸುತ್ತಿರುವದು ಫೇಸ್ ಬುಕ್, ಟ್ವಿಟ್ಟರ್, ಗೂಗಲ್ ಮೊದಲಾದ ಶತ ಕೋಟಿ ಗಳಿಕೆಯ ಲಕ್ಷಾಂತರ ಸರ್ವರ್ ಹೊಂದಿರುವ ತಾಣಗಳೊಂದಿಗೆ. ಇಂದು ಕನ್ನಡ ತಾಣ ಬಳಸುವ ಪ್ರತಿಯೊಬ್ಬ ಆಂಗ್ಲ ತಾಣದಷ್ಟೇ ಚೆನ್ನಾಗಿರಬೇಕು ಎಂದು ಬಯಸುತ್ತಾನೆ. ಅದಕ್ಕಿಂತ ಸ್ವಲ್ಪ ಕಡಿಮೆ ಗುಣಮಟ್ಟ ಇದೆ ಎಂದೆನಿಸಿದರೆ ಹೆಚ್ಚಿನವರು ಬಳಸುವದಿಲ್ಲ. ಆದರೆ ಕನ್ನಡದಲ್ಲಿ ಲಕ್ಷಾಂತರ ಅಥವಾ ಕೋಟ್ಯಂತರ ಹಣ ಸಾಲ ಮಾಡಿ ತಾಣ ನಿರ್ಮಿಸಿದರೆ ಅದನ್ನು ತೀರಿಸಲು ಸಾಧ್ಯವಿಲ್ಲ. ಇಂದು ಇದೇ ಮಿತಿ ಕನ್ನಡದಲ್ಲಿ ಹಲವು ಸೌಲಭ್ಯ ಇಂಗ್ಲೀಷ್ ನ ಮಟ್ಟಕ್ಕೆ ಮಾಡಲು ಸಾಧ್ಯವಾಗದಿರುವದು.

ಇರಲಿ ಈ ವಾಸ್ತವವನ್ನು ಬದಲಾಯಿಸುವದು ನನ್ನೊಬ್ಬನಿಂದ ಸಾಧ್ಯವಿಲ್ಲ. ವಿಸ್ಮಯ ನಗರಿಯನ್ನು ಈ ಮಿತಿಯಲ್ಲೇ ಬೆಳೆಸುವ ಪ್ರಯತ್ನ ಮಾಡುವ ಬರವಸೆ ನೀಡುತ್ತೇನೆ.

ಅಂತರ್ಜಾಲ ಕ್ರಾಂತಿ ನಡೆದು ದಶಕ ಕಳೆದರೂ ಕನ್ನಡದಲ್ಲಿ ಶಾಪಿಂಗ್, ಬಸ್ ಬುಕಿಂಗ್, ಮಾಹಿತಿ ಇನ್ನೂ ಬರದಿರುವದು ವಿಷಾದಕರ. ಇನ್ನು ವಿಡಿಯೋ ಗೇಮ್, ಮೊಬೈಲು ಅಪ್ಲಿಕೇಶನ್ ಕೇಳಲೇ ಬೇಡಿ. ವಿಂಡೋಸ್ ಕನ್ನಡದಲ್ಲಿದೆ. ಆದರೆ ಎಷ್ಟು ಜನ ಬಳಸುತ್ತಾರೆ? ಕನ್ನಡದಲ್ಲಿ  ವ್ಯಾಪಾರಿಕರಣ ಕ್ರಾಂತಿ ನಡೆದು ಕನ್ನಡಿಗ ಇವೆಲ್ಲವನ್ನೂ ಖರೀದಿಸುತ್ತಾನೆ ಎಂಬ ಬರವಸೆ ಬಂದರೆ ನಿರ್ಮಾಣವಾಗುತ್ತದೆ. ಆದರೆ ಉತ್ತಮ ಸೇವೆ, ಗುಣಮಟ್ಟದಲ್ಲಿ ಕನ್ನಡದಲ್ಲಿ ಬರದಿದ್ದರೆ ಕನ್ನಡಿಗ ಖರೀದಿಸುವದಿಲ್ಲ ಅಥವಾ ಬಳಸುವದಿಲ್ಲ. ಹೇಗಿದ್ದರೂ ಇಂಗ್ಲೀಷ್ ಅಲ್ಲಿ ಸಿಗುತ್ತಲ್ಲ! ಇದು ಒಂತರಾ ಕ್ಯಾಚ್-೨೨ ಪರಿಸ್ಥಿತಿ. ಇದು ಕನ್ನಡ ಒಂದರ ಪರಿಸ್ಥಿತಿ ಅಲ್ಲ. ಭಾರತೀಯ ಭಾಷೆಗಳ ದುಸ್ಥಿತಿ! 

ಕರ್ನಾಟಕದಲ್ಲಿ ನಗರ ಪ್ರದೇಶಗಳಲ್ಲಿ ಹೊಸ ಪೀಳಿಗೆಯಲ್ಲಿ  ಕನ್ನಡದ ಲಿಪಿಯ ಬಳಕೆ ಕೇವಲ ಅಂತರ್ಜಾಲ ಮಾತ್ರ ಅಲ್ಲ ಹಲವೆಡೆ ಕುಗ್ಗುತ್ತಿದೆ. ಕರ್ನಾಟಕದಲ್ಲಿ ನಗರ ಪ್ರದೇಶಗಳಲ್ಲಿ ಇಂಗ್ಲೀಷ್ ಲಿಪಿಯ ಬಳಕೆ ಹಲವು ಸಾವಿರ ಪ್ರತಿಶತ ಹೆಚ್ಚಿದೆ. ಸಂಶಯವೇ? ನಿಮ್ಮ ಸ್ಮಾರ್ಟ್ ಫೋನು, ಟ್ಯಾಬ್ಲೆಟ್, ಕಂಪ್ಯೂಟರ್, ಫೇಸ್ ಬುಕ್ ಪ್ರಾಫೈಲ್, ಟಿವಿ ರಿಮೋಟ್, ಡಿಟಿಎಚ್ ಮೆನು, ಹೊಟೆಲ್ ಮೆನು, ಬಸ್ /ಸಿನಿಮಾ ಟಿಕೆಟ್ ಬುಕಿಂಗ್, ಬ್ಯಾಂಕ್ ತಾಣ, ಎಟಿಎಂ, ಇನ್ಶುರನ್ಸ್ ವ್ಯವಹಾರ ಎಲ್ಲವನ್ನು ಕೂಲಂಕಶವಾಗಿ ಗಮನಿಸಿ. ನಿಮ್ಮ ಮನೆಯಲ್ಲಿ ಮಗುವಿದ್ದರೆ ಟಿವಿಯಲ್ಲಿ ಇಂಗ್ಲೀಷ್ ಅಲ್ಲಿ ನೋಡುತ್ತಾನೋ ಹಿಂದಿಯಲ್ಲಿ ನೋಡುತ್ತಾನೋ ಗಮನಿಸಿ! ಇದೇ ಲೇಖನ ಇಂಗ್ಲೀಷ್ ಅಲ್ಲಿದ್ದರೆ ಕನ್ನಡದಲ್ಲಿ ಓದುವದಕ್ಕಿಂತ ಹೆಚ್ಚು ಪಟ್ಟು ಕನ್ನಡಿಗರು ಓದುತ್ತಿದ್ದರು, ಅನಿಸಿಕೆ ವ್ಯಕ್ತ ಪಡಿಸುತ್ತಿದ್ದರು  ಎಂದು ಹೇಳಿದರೆ ಅದು ಅತಿಶಯೋಕ್ತಿ ಅಲ್ಲ! ಕಳೆದ ಹಲವು ದಶಕಗಳಲ್ಲಿ ನಡೆದ ತಂತ್ರಜ್ಞಾನ ಕ್ರಾಂತಿ ಇಂಗ್ಲೀಷ್ ಲಿಪಿ ಅನ್ನು ದಿನಬಳಕೆಯ ಅಗತ್ಯತೆ ಹೆಚ್ಚಿಸಿದೆ. ಇವು ಯಾವುದಕ್ಕೂ ಕನ್ನಡದಲ್ಲಿ ಪರ್ಯಾಯ ಆಯ್ಕೆ ಬರದಿರುವದು ಖೇದಕರ.

ನನ್ನ ಮನವಿ ಇಷ್ಟೇ. ಕನ್ನಡವನ್ನು ಸಾಧ್ಯವಿದ್ದಷ್ಟು ಕಡೆ ಬಳಸಿ. ಆಮಂತ್ರಣ ಪತ್ರಿಕೆ ಇರಬಹುದು ಅಥವಾ ಬರ್ತಡೇ ಪಾರ್ಟಿ ಇರಬಹುದು. ಮದುವೆ ಇರಬಹುದು. ನಿಮ್ಮ ಮನೆ ಎದುರಲ್ಲಿ ಬರೆದ ಹೆಸರಿರ ಬಹುದು. ಡೆಕೋರೇಶನ್ ಮಾಡುವವರ ಬಳಿ ಕನ್ನಡದಲ್ಲೇ ಬೇಕು ಎಂದು ಕಡ್ಡಿ ಮುರಿದಂತೆ ಹೇಳಿ. ಮಕ್ಕಳನ್ನು ಆಂಗ್ಲ ಮಾಧ್ಯಮ ಕಳಿಸಿದರೂ ಪರವಾಗಿಲ್ಲ ಆದ್ರೆ ಕನ್ನಡ ಮಾತು/ಬರಹ ಸರಿಯಾಗಿ ಕಲಿಸಿ. ಬಳಸಿ.

ಕನ್ನಡ ಲಿಪಿಗೆ ಕನ್ನಡ ಅಂಕಿಗೆ ಬಂದ ಗತಿ  ಎಂದೂ ಬಾರದಿರಲಿ ಎಂದು ಬಯಸುತ್ತಾ ವಿಸ್ಮಯ ನಗರಿಗೆ ನಿಮ್ಮ ಬೆಂಬಲ ಹೀಗೆ ಇರಲಿ ಎಂದು ಕೋರುವ

--ರಾಜೇಶ ಹೆಗಡೆ

ವಿಸ್ಮಯನಗರಿ.ಕಾಂ

 

ಲೇಖಕರು

ರಾಜೇಶ ಹೆಗಡೆ

ಕಂಡದ್ದು ಕಂಡ ಹಾಗೆ

ಸಾಫ್ಟವೇರ್ ಇಂಜನಿಯರ್. ಕನ್ನಡದಲ್ಲಿ ಸಾಫ್ಟವೇರ್ ತಯಾರಿಸುವದು ನನ್ನ ಹವ್ಯಾಸ. ಆಗಾಗ ಲೇಖನ ಬರೀತಿನಿ ಆದ್ರೆ ಅದರಲ್ಲಿ ಪಳಗಿದವನಲ್ಲ.

ಅನಿಸಿಕೆಗಳು

venkatb83 ಭಾನು, 02/03/2013 - 12:34

ರಾಜೇಶ್ ಅವರೇ ಮೊದಲಿಗೆ  ವಿಸ್ಮಯನಗರಿಯನ್ನು ಸ್ಥಾಪಿಸಿ -ಸರಳಗೊಳಿಸಿ-ಓದುಗರನ್ನು ಮುಟ್ಟುವ ತಟ್ಟುವ ಹಾಗೆ ಮಾಡಿ-ಮಾಡುತ್ತಾ  ಇನ್ನಸ್ಟು ಸರಳೀಕರಿಸುತ್ತ ಓದುಗರಿಗೆ ಪ್ರಿಯವಾಗುವ ರೀತಿಯಲ್ಲಿ  ಬದಲಿಸುತ  ಹಾಗೆಯೇ  ಓದುಗರಿಗೆ ವಯುಕ್ತಿಕವಾಗಿ  ಪ್ರತಿಕ್ರಿಯಿಸುತ್ತ  ವಿಸ್ಮಯನಗರಿಯನ್ನು ೬ನೆ ವರ್ಷಕ್ಕೆ ತಂದಿರುವಿರಿ..

ವಿಸ್ಮಯನಗರಿ ಹಿಂದಿರುವ ಇನ್ನಿತರ ತಂತ್ರಜ್ಞರು -ಪರಿಣಿತರು-ಹಿತೈಷಿಗಳು-ಕುರಿತುಹೆಚ್ಚಿನ ಮಾಹಿತಿ ಇಲ್ಲ...!!
ಅದ್ಯಾಗ್ಗೋಒ ಇದೆಲ್ಲ ನಿಮ್ಮ ಏಕಾಂಗಿ ಪ್ರಯತ್ನ ಎನ್ನಿಸುತ್ತಿದೆ...
ಕನ್ನಡ ಭಾಷೆ  ಉಳಿವಿ-ಬೆಳವಣಿಗೆ-ಸಾಧನೆಗೆ ನೀವ್ ಪಡುತ್ತಿರುವ ಕಷ್ಟ- ನಸ್ಟ ,ನನಗಿರುವ ಸಾಮಾನ್ಯ ಜ್ಞಾನಕ್ಕೆ ತೋಚಿದಂತೆ  -ಒಂದು ಜಾ ತಾಣ ತೆಗೆದು  ಅದನ್ನು ಜನಪ್ರಿಯಗೊಳಿಸುತ್ತ-ಸರಳೀಕರಣ ಮಾಡುತ್ತಾ ಹೆಹ್ಚೆಚ್ಚು ಓದುಗರನ್ನು ಸೆಳೆಯುವ ಅವರು ಬರೆಯುವ ಪ್ರತಿಕ್ರಿಯಿಸುವ ಹಾಗೆ -ಹಾಗೆಯೇ ಆ ಬರಹಗಳು ಶೇಖರಿಸಲು ಸರ್ವರ್ ಅಗತ್ಯ ಕಾಲಕಾಲಕ್ಕೆ ತಕ್ಕಂತೆ  ಹೆಚ್ಚುವ  ಬರಹಗಳು ಅವುಗಳಿಗೆ ಜಾಗ ಕಲ್ಪಿಸಿಸದಾ ಅವು ಮುಂದೆಯೂ ಸಿಕ್ಕುವ ಹಾಗೆ ಮಾಡುವುದು  ಹಣಕಾಸಿನ ಧ್ರುಸ್ಟಿಯಲ್ಲಿ  ಕಷ್ಟದ ಕೆಲಸ....
ಈ ಸಮಸ್ಯೆಗೆ ಕೊಂಚ ಪರಿಹಾರವಾಗಿ ಜಾಹೀರಾತುಗಳನ್ನು ವಿಸ್ಮಯನಗರಿಯಲಿ ಸೇರಿಸಿದಿರಿ .ಅದು ಎಷ್ಟರ  ಮಟ್ಟಿಗೆ ಸಹಾಯಕವಾಯ್ತೋ ನಾ ಅರಿಯೆ...!
ಇದೆ ಸಮಸ್ಯೆ ಈಗ ಸಂಪದವನ್ನು ಕಾಡುತ್ತಿದೆ -ಅಲ್ಲೀಗ ವಾರ್ಷಿಕ  ಅಜೀವ ಸದಸ್ಯರ  ಶುಲ್ಕ ಎಂದು ಮಾಡಿರುವರು -ಹಾಗೆ ಶುಲ್ಕ ಪಾವತಿಸಿ  ಸದಸ್ಯರಾಗುವವರಿಗೆ ಕೆಲವು  ವಿಶೇಷ ಸೌಲಭ್ಯಗಳೂ ಇವೆ..
ಕನ್ನಡವನ್ನು ಇನ್ನಸ್ಟು ಸರಳೀಕರಿಸಲು  ಓದುಗ ಪ್ರಿಯ ಮಾಡಲು ನೀವು ನೇರ ಕನ್ನಡ ಟೈಪಿಂಗ್ ಸೌಲಭ್ಯವನ್ನು ಇಲ್ಲಿ ಕಲ್ಪಿಸಿದಿರಿ.ಅದೂ ಬಹು ಉಪಯೋಗಕಾರಿ. ಮತ್ತು ನನಗೆ ತಿಳಿದ ಹಾಗೆ ನಾ ಉಪಯೋಗಿಸಿದ ಹಾಗೆ ನೆಟ್ನಲ್ಲಿ ಅತಿ ಆತ್ಯುತ್ತಮ  ಸರಳ ಕನ್ನಡ ಟೈಪಿಂಗ್ ವಿಧಾನ...
ವಿಸ್ಮಯನಗರಿಗೆ ಶುಭ ಹಾರೈಸುತ್ತ -ಇನ್ನಸ್ಟು ಮತ್ತಷ್ಟು  ಓದುಗರನ್ನು ತಲುಪಲಿ-ತಲುಪಿಸೋಣ ಎಂದು ಹೇಳುವೆ...
ಶುಭವಾಗಲಿ..
\।/
ರಾಜೇಶ ಹೆಗಡೆ ಸೋಮ, 02/04/2013 - 07:05

ತಮ್ಮ ಮೆಚ್ಚುಗೆಗೆ ಧನ್ಯವಾದಗಳು.

ನಿಜ. ವಿಸ್ಮಯ ನಗರಿಯ ಹಿಂದೆ ತಾಂತ್ರಿಕವಾಗಿ ಬೇರೆ ಯಾರೂ ಇಲ್ಲ. ನನಗೆ ಆ ತರಹದ ಟೀಂ ಮಾಡಿ ಅದನ್ನು ಮ್ಯಾನೇಜ್ ಮಾಡಲು ಸಮಯವಿಲ್ಲ. ಅದಕ್ಕೆ ತುಂಬಾ ಹಣ ಹಾಗೂ ಸಮಯ ಬೇಕು.  ನಾನು ಹೊಟ್ಟೆ ಪಾಡಿಗೆ ಬೇರೆ ಕಡೆ ದುಡಿಯಬೇಕು. ವಿಸ್ಮಯ ನಗರಿ ತಡ ರಾತ್ರಿ ಅಥವಾ ಬೆಳಿಗ್ಗೆ ಬೇಗ ಎದ್ದು  ಅಥವಾ ವಾರಾಂತ್ಯದಲ್ಲಿ ಮಾಡುವ ಹವ್ಯಾಸದ ಕೆಲಸ ಮಾತ್ರ.

ಜಾಹೀರಾತಿನಿಂದ ಇಲ್ಲಿಯವರೆಗೆ ವಿಸ್ಮಯ ಶೂನ್ಯ ಸಂಪಾದನೆ ನಡೆಸಿದೆ. ಹಿಂದಿನ ಜಾಹೀರಾತು ಕಂಪನಿ ೩ ವರ್ಷಗಳ ಕಾಲ ಜಾಹೀರಾತು ಹಾಕಿ ಹಣ ಕೊಡುವ ಸಮಯ ಬಂದಾಗ ಕೈ ಕೊಟ್ಟಿತು. ಆ ಪುಣ್ಯಾತ್ಮನ ಈ ಮೇಲ್ ವಿಳಾಸ ಬಿಟ್ಟು ಬೇರೆ ಮಾಃಇತಿ ಇಲ್ಲ. ಅದಕ್ಕೆ ಆತ ಉತ್ತರಿಸುತ್ತಿಲ್ಲ!!

ಅಜೀವ ಸದಸ್ಯತ್ವದಿಂದ ಹಣ ಪಡೆದು ಉತ್ತಮ ಸರ್ವರ್ ಗೆ ಅಪ್ ಗ್ರೇಡ್ ಮಾಡಬಹುದು. ಆದರೆ ಮುಂದೆ ಜನ ಹಣ ಕೊಡದಿದ್ದಾಗ ತಾಣವನ್ನು ಮುಚ್ಚಬೇಕಾದೀತು! ವಾರ್ಷಿಕ ವಾಗಿ ೨ ಲಕ್ಷ ಬಂದರೆ ಪರವಾಗಿಲ್ಲ. ಒಂದು ವರ್ಷ ಹಣ ಬರದಿದ್ದರೂ ಸಾಲ ಮಾಡಬೇಕು!!

ನಿಮ್ಮ ಹಾರೈಕೆಗೆ ಧನ್ಯವಾದಗಳು Smile

 

ಪಿಸುಮಾತು ಭಾನು, 02/03/2013 - 14:52

ರಾಜೇಶ್ ಅವರೆ,

ನಿಮ್ಮ ಪ್ರಯತ್ನ ಶ್ಲಾಘನೀಯ, ವಿಸ್ಮಯ ಈಗ ಮೊದಲಿಗಿಂತಲು ತುಂಬಾ ಸುಂದರವಾಗಿದೆ. ಪುಟಗಳು ಕೂಡಾ ಹೆಚ್ಚು ವೇಗವಾಗಿ ತೆರೆದುಕೊಳ್ಳುತ್ತವೆ. ಕನ್ನಡದ ತಾಣಗಳ ಅಭಿವೃದ್ದಿ ಕುಂಟಿತವಾಗಿರುವುದಕ್ಕೆ ಕಾರಣ ಅದನ್ನು ಉಪಯೋಗಿಸುವವರ ಕೊರತೆಯೇ ಆಗಿದೆ. ಇಲ್ಲಿ ಉಚಿತವಾಗಿ ನೀಡಿದರೂ ಉಪಯೋಗಿಸುವವರು ಕಡಿಮೆ, ಹಾಗಿರುವಾಗ ಹಣ ನೀಡಿ ಎಂದರೆ ಯಾರೂ ಈ ಕಡೆ ಮುಖ ಹಾಕುವುದಿಲ್ಲ. ಜಾಹೀರಾತುಗಳಿಗೆ ಸ್ಥಳ ಒದಗಿಸಿರುವುದು ಒಳ್ಳೆಯದು, ಆದರೆ ಅದರಿಂದ ಈ ತಾಣ ನಡೆಸುವಷ್ಟು ಆದಾಯ ಬರುವುದು ಕಷ್ಟ. ಕನ್ನಡಿಗರು ಹೆಚ್ಚು ಹೆಚ್ಚು ಕನ್ನಡದ ತಾಣಗಳನ್ನು ಉಪಯೋಗಿಸದ ಹೊರತೂ ಇದಕ್ಕೆ ಬೇರೆ ಮಾರ್ಗವಿಲ್ಲ. 

ಇಷ್ಟಾದರೂ ಕನ್ನಡ ಪ್ರೇಮಿಗಳಾದ ನಾವು ಏನಾದರೂ ಪ್ರಯತ್ನ ಮಾಡುತ್ತಲೇ ಇರಬೇಕು. ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು.

ರಾಜೇಶ ಹೆಗಡೆ ಮಂಗಳ, 02/05/2013 - 06:52

ನಮಸ್ಕಾರ ಶ್ರೀಪತಿ ಅವರೇ,

ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ವಿಸ್ಮಯ ಈಗ ಹೊಸತಾದ ಸಾಫ್ಟವೇರ್ ಜೊತೆಗೆ ಬೇರೆ ಹೋಸ್ಟಿಂಗ್ ಸಹ ಬಳಸುತ್ತಿದೆ. ಅದಕ್ಕೆ  ವೇಗ ಹೆಚ್ಚಿದೆ. Smile

ಹುಂ ನಿಜ ಕಡಿಮೆ ಜನ ಬಳಸುವದು ಕಾರಣ ಇರಬಹುದು. ಆದರೆ ಬಸ್ ಕಂಪನಿಗಳಾದ ವಿಆರ್ ಎಲ್, ಸುಗಮ, ಕೆ.ಎಸ್.ಆರ್.ಟಿಸಿ ಮೊದಲಾದವು ಬರಿ ಕನ್ನಡದಲ್ಲಿ ರಿಸರ್ವೇಶನ್ ಸಿಸ್ಟೇಮ್, ಪಿಯುಸಿ, ಎಸ್.ಎಸ್.ಎಲ್.ಸಿ ಫಲಿತಾಂಶ ಬರಿ ಕನ್ನಡದಲ್ಲಿ ಹೀಗೆ ಕೇವಲ ಕನ್ನಡದಲ್ಲಿ ನೀಡಿದ್ದರೆ ಜನ ಕನ್ನಡ ಲಿಪಿ ಕಲಿಯುವ, ವೇಗವಾಗಿ ಓದುವ ಅನಿವಾರ್ಯತೆಗೆ ಸಿಲುಕುತಿದ್ದರು, ಎಲ್ಲವನ್ನು ಇಂಗ್ಲೀಷ್ ಅಲ್ಲೇ ನೀಡುವದು ಅಥವಾ ಪ್ರತಿ ಕನ್ನಡದ ಸೌಲಭ್ಯದೊಂದಿಗೆ ಇಂಗ್ಲೀಷ್ ಅಲ್ಲಿ ನೀಡಿ ಕನ್ನಡ ಲಿಪಿಯ ಅನಿವಾರ್ಯತೆ ಕಡಿಮೆ  ಆಗಿದೆ. 

ಸರಿ ಬಂಡವಾಳ ಹಾಕಿ ಮಾಡಿದರೆ ಜನ ನೋಡುವಂತಹ ಕನ್ನಡ ವೃತ್ತಿಪರ ತಾಣ ನಿರ್ಮಿಸಬಹುದು. ಮಾರ್ಕೆಟಿಂಗ್ ಮಾಡಬಹುದು. ಆದರೆ ಅದನ್ನು ವಾಪಸ್ ಪಡೆಯುವ ಬಗೆ ಹೇಗೆ? ಅದೇ ಸಮಸ್ಯೆ.

ಜಾಹೀರಾತಿನಿಂದ ಕನ್ನಡ ತಾಣಗಳಲ್ಲಿ ಕವಡೆ ಕಾಸು ಹುಟ್ಟೂವದೂ ಕಷ್ಟ! ಇನ್ನು ಸರ್ವರ್ ಖರ್ಚು ಸಿಗುವದು ಕನಸಿನ ಮಾತು.

ಖಂಡಿತ ಎಲ್ಲಿಯವರೆಗೆ ಬಳಸುವ ಅಭಿಮಾನಿಗಳಾದರೂ ಇರುತ್ತಾರೋ ಅಲ್ಲಿಯವರೆಗೆ ಕನ್ನಡ ತಾಣಗಳು ಇದ್ದೇ ಇರುವವು. ನನ್ನ ಕನ್ನಡದಲ್ಲಿನ ಪ್ರಯತ್ನಗಳು ಮುಂದುವರಿಯುವದು.

 

venkatb83 ಧ, 02/06/2013 - 18:30

 

ಅಂತಾರ್ಜಾಲದಲ್ಲಿ ಕನ್ನಡ ಬಳಕೆ ಮಾಡುವ ಕುರಿತು ನೀವ್ ಹೇಳಿದ ಆ ಎಲ್ಲ ಕನ್ನಡ  ಕಂಪನಿಗಳು ಯೋಚಿಸಬೇಕು..ವಿ ಆರ್ ಎಲ್  ಇತ್ಯಾದಿಗಳಿಗೆ ಅದೇನೂ ಕಷ್ಟ ಅಲ್ಲ...
ನನಗನ್ನಿಸಿದ ಹಾಗೆ  ಗೂಗಲ್ ಇತ್ಯಾದಿ ವಿದೇಶಿ ಕಂಪನಿಗಳು  ಪ್ರಾಂತೀಯ ಭಾಷೆಗಳಿಗಾಗಿ  ಪ್ರಯತ್ನಿಸಿ  ಅವುಅಗಲ್ ಬಳಕೆ ಯಶಸ್ವಿಯಾಗುವ ಹಾಗೆ ಮಾಡಿವೆ.. ನಾ ಬರೆಯುವ ಪ್ರತಿಕ್ರಿಯಿಸುವ  ಈ ವಿಧಾನ ಅವರದೇ (ಗೂಗಲ್ ಟ್ರಾನ್ಸಿಲ್ತ್ರೆಟ್ )...

 

ಮರು ಪ್ರತಿಕ್ರಿಯೆಯಲ್ಲಿ ವಿಸ್ಮಯನಗರಿ ಹಿಂದಿನ ಶಕ್ತಿ ವ್ಯಕ್ತಿ ಕೇವಲ ನೀವ್ ಒಬ್ಬರೇ ಎಂದು ತಿಳಿದು  ಅಚ್ಚರಿ ಆಯ್ತು..ಹಾಗೆಯೆ  ನಿಮ್ಮ  ಪ್ರಯತ್ನ- ಅ ಜಾಹೀರಾತು  ವಿಷಯದಲ್ಲಿ ಆದ ಅನ್ಯಾಯ ಮೋಸ ಕೇಳಿ ವ್ಯಥೆ ಆಯ್ತು...

ನಿಮ್ಮ ಈ ಏಕಾಂಗಿ ಪ್ರಯತ್ನವನ್ನು ಕೇವಲ ಶಬ್ಧಗಳಲಿ ಹೊಗಳಿ -ಮೆಚ್ಚಿ ಪ್ರತಿಕ್ರಿಯಿಸಿದರೆ ಅದು ಮಾಮೂಲು ಆಗುವುದು...
ನಿಮಗೆ ಸಹಾಯ ಮಾಡಲು ನನಗೋ ಅಷ್ಟಾಗಿ  ತಾಂತ್ರಿಕ ಜ್ಞಾನ ಇಲ್ಲ ..ಆದರೆ ಮುಂದೊಮ್ಮೆ  ನೀವು  ವಿಸ್ಮಯನಗರಿಗೆ ದಾನಿಗಳ ನೆರವು ಕೇಳಬೇಕಾಗಿ  ಬಂದರೆ ಖಂಡಿತ ಸಹಾಯ ಮಾಡುವೆ .ಹಾಗೆಯೇ ಇನ್ನಿತರರೂ ಮಾಡುವರು ಎಂಬ ನಂಬಿಕೆ ಇದೆ..
ಈ ತರಹದ ಸಾಹಸ(ಜಾಲ ತಾಣ ನಿರ್ಮಾಣ-ನಿರ್ವಹಣೆ ) ಎಲ್ಲರೂ ಮಾಡಲು ಸಾಧ್ಯವಿಲ್ಲ -ಹಾಗೆ ಮಾಡುವ ನಿಮ್ಮಂಥವರ ಕೈ ಬಲಪಡಿಸಲೇಬೇಕು ..
ನಿಮ್ಮ ಈ ಪ್ರಯತ್ನ  ಯಶಸ್ವಿಯಾಗಲಿ ..
ನಿಮ್ಮೊಡನೆ ಸದಾ ನಾವಿರುವೆವು...
ಶುಭವಾಗಲಿ.
\।/
mmshaik ಮಂಗಳ, 02/05/2013 - 09:38

ಹೆಗಡೆ ಅವರಿಗೆ ವಂದನೆಗಳು.

ತಮ್ಮ ಪ್ರಯತ್ನ ಶ್ಲ್ಯಾಘನೀಯ.ಕನ್ನಡದ ಬಗೆಗಿರುವ ಪ್ರಾಮಾಣಿಕ ಕಾಳಜಿಗೆ ನನ್ನ ಒಂದು ಸಲಾಂ.ಕನ್ನಡವನ್ನು ನಾವೆಲ್ಲರೂ ಕೆಯ್ ಹಿಡಿದು ನಡೆಸೋಣ.ಶುಭಾವಾಗಲಿ.

ರಾಜೇಶ ಹೆಗಡೆ ಶನಿ, 02/09/2013 - 07:18

ಧನ್ಯವಾದಗಳು Smile

praveen.kulkarni ಶುಕ್ರ, 02/08/2013 - 22:41

ವಿಸ್ಮಯನಗರಿ ಆರು ವರುಷಗಳನ್ನು ಮುಗಿಸಿದ ಸುದ್ದಿ ನಿಜವಾಗಿಯೂ ನನ್ನನ್ನು ತುಂಬಾ ಸಂತೋಷಗೊಳಿಸಿದೆ.ಇದರ ಹಿಂದೆ ರಾಜೇಶ ಅವರೇ ನಿಮ್ಮ ಅಪಾರ ಶ್ರಮ ಹಾಗು ಕಳಕಳಿ
ಇದೆ.ಒಂದು ಕನ್ನಡ ತಾಣ ಆರು ವರುಷಗಳನ್ನು ಮುಗಿಸಿದ್ದು ಅಷ್ಟು ಸರಳವಲ್ಲಾ .ಕನ್ನಡ
ತಾಣವೆಂದರೆ ಮೂಗು ಮುರಿಯುವ ಜನರ ಮಧ್ಯೆ ಕನ್ನಡ ತಾಣವೊಂದು ಯಶಸ್ವಿಯಾಗಿ
ಮುಂದುವರೆಯುತ್ತಿರುವುದು ಅಭಿನಂದನೀಯ.ಸಂಪದದಲ್ಲಿ ಹಾಗು ನನ್ನದೆ ಆದ ಬ್ಲಾಗು
ಬರೆಯುತಿದ್ದ ನಾನು ಅಚಾನಕ್ಕಾಗಿ ಸಪ್ತಗಿರಿಯವರು ವಿಸ್ಮಯನಗರಿಯ ಬಗ್ಗೆ ಬರೆದದ್ದು
ನೋಡಿದೆ ಅಂದೇ ವಿಸ್ಮಯನಗರಿಯ ಪ್ರಜೆಯಾದೆ.ಅಂದಿನಿಂದ ಅಂದರೆ ಕಳೆದ ಒಂದೂವರೆ ವರ್ಷದಿಂದ ಇಲ್ಲಿಯವರೆಗೂ ವಿಸ್ಮಯನಗರಿಯಲ್ಲಿ
ಬರೆಯುತಿದ್ದೇನೆ.ಕನ್ನಡದಲ್ಲಿ ಬರೆಯಲು ಈ ತರಹದ ತಾಣಗಳಿರುವುದು  ನೋಡಿ ತುಂಬಾ ಖುಷಿ
ಎನಿಸಿತು..ಏಕೆಂದರೆ ನಾನು ಸಧ್ಯಕ್ಕೆ ಹೈದರಬಾದಿನಲ್ಲಿರುವುದರಿಂದ ಕನ್ನಡ ಜನರನ್ನ ಹಾಗು
ಭಾಷೆಯನ್ನ ತುಂಬಾ ಮಿಸ್ ಮಾಡಿಕೊಳ್ಳುತಿದ್ದೆ.ನಾ ಇರುವ ಏರಿಯಾದಲ್ಲಿ ಕನ್ನಡ ದಿನಪತ್ರಿಕೆ
ಕೂಡ ಸಿಗೋದಿಲ್ಲ.ಅಂತಹ  ಸಮಯದಲ್ಲಿ ಮರುಭೂಮಿಯಲ್ಲಿ ಓಯಸಿಸ್ ಹಾಗೆ ಈ ಎರಡು ತಾಣಗಳು ನನ್ನ ಸಾಹಿತ್ಯದ ಹಸಿವನ್ನು ನೀಗೀಸಿದವು.ನಾವು ದಿನನಿತ್ಯದ ಕೆಲಸ ಮುಗಿಸಿ ನಾಲ್ಕು ಸಾಲು ಬರೆಯೋಣವೆಂದರೆ  ರಮೇಶ್ ಕಾಮತ್ ಹೇಳಿರುವ ಹಾಗೆ ಮನಸು ವಿಚಲಿತಗೊಂಡಿರುತ್ತೆ ಅದು ಹೇಗೆ  ರಾಜೇಶ್ ಅವರು ಸಮಯ ತೆಗೆದು ವಿಸ್ಮಯನಗರಿಗಾಗಿ ಮಿಸಲಿಡುತ್ತಾರೆಯೋ?..ನಾನು ಹಲವು ಬಾರಿ ನೋಡಿದ್ದೇನೆ ಯಾರು ಲೇಖನ ಕವನ ಬರೆಯದೆ ವಿಸ್ಮಯನಗರಿ ಸಾಹಿತ್ಯಾಸಕ್ತರು ಇಲ್ಲದೆ ಇರುವ ಗಳಿಗಗಳು ಅವು
,ಆದರೆ ರಾಜೇಶ ಅವರು ಏನಾದರು ಬರೆಯುತ್ತಲೇ ಇದ್ದರು.ಮಾಹಿತಿಯೋ ಕೆಲವು ವಿಚಿತ್ರ
ಪ್ರಸಂಗಗಳನ್ನು ಹಂಚಿಕೊಳ್ಳುತ್ತ ವಿಸ್ಮಯನಗರಿಯನ್ನ ನಿಂತ ನೀರನ್ನಾಗಿರಲು ಬಿಡಲಿಲ್ಲ.ಅದರ
ಫಲವೇ ಇಂದು ಹಲವಾರು ಉದಯೋನ್ಮುಖ ಲೇಖಕರು ಕವಿಗಳು ತಮ್ಮ ತಮ್ಮ ಸಾಹಿತ್ಯವನ್ನು
ಹಂಚಿಕೊಳ್ಳುತ್ತ ವಿಸ್ಮಯನಗರಿಯನ್ನ ನದಿಯಿಂದ ಸಾಗರ ಮಾಡುವೆಡೆಗೆ
ಮುನ್ನುಗ್ಗುತಿದ್ದಾರೆ.ರಾಜೇಶ ಅವರೇ ಡಂಗುರ ವಿಭಾಗದಲ್ಲಿ ನಮ್ಮ ವಿಸ್ಮಯನಗರಿಯ
ಪ್ರಜೆಗಳಲ್ಲಿ ಯಾರಾದರು ತಮ್ಮ ಕವನ ಸಂಕಲನ ಅಥವಾ ಪುಸ್ತಕಗಳನ್ನ ಹೊರ ತಂದಿದ್ದರೆ
ಅವುಗಳನ್ನು ಆನ್ ಲೈನ್ ನಲ್ಲಿ ಕೊಂಡುಕೊಳ್ಳುವ ವ್ಯವಸ್ಥೆ ಮಾಡಿ.ಅದರಿಂದ ನಮ್ಮವರಿಗೆ
ತಮ್ಮ ಪುಸ್ತಕಗಳ ಪ್ರಚಾರ ಹಾಗು ಮಾರುಕಟ್ಟೆ ದೊರಕಿದಂತೆಯೂ ಆಗುತ್ತದೆ ಹಾಗು ಅದಕ್ಕೆ
ಇಂತಿಷ್ಟು ಅಂತ ಹಣ ಫಿಕ್ಸ್ ಮಾಡಿದರೆ ಅದನ್ನು ವಿಸ್ಮಯನಗರಿಯ ಕಾಮಗಾರಿಗೆ
ಬಳಸಿಕೊಳ್ಳಬಹುದು.ಹಾಗೆ ಇನ್ನೊಂದು ಮಾತು ಸರ್ ಯಾಕೆ ವಿಸ್ಮಯನಗರಿಯಿಂದ ಇಲ್ಲಿಂದಲೇ
ಕೆಲವು ಕವನ ಹಾಗು ಲೇಖನ,ಕಥೆಗಳನ್ನು ಆರಿಸಿ ಒಂದು ಪುಸ್ತಕ ಬಿಡುಗಡೆ ಮಾಡಬಾರದು.ಇವು ನನಗೆ ತೋಚಿದ ಕೆಲವು ವಿಚಾರಗಳು ಆದರೆ  ಇವು ಕಾರ್ಯರೂಪಕ್ಕೆ ಬರಲು ಬಹಳಷ್ಟು ಸಮಯ ಹಾಗು ತಾಂತ್ರಿಕ ವ್ಯವಸ್ಥೆ ಬೇಕಾಗಬಹುದು.ಆದರೂ ಒಂದು ಕೈ ನೋಡೋಣಾ.

ರಾಜೇಶ ಹೆಗಡೆ ಶನಿ, 02/09/2013 - 07:25

ಧನ್ಯವಾದಗಳು ಪ್ರವೀಣ್ ಅವರೇ,

ವಿಸ್ಮಯನಗರಿಯಲ್ಲಿ ಕನ್ನಡ ಶಾಪಿಂಗ್ ವಿಭಾಗ ತೆಗೆಯುವ ಯೋಜನೆ ಕಾರ್ಯರೂಪದಲ್ಲಿದೆ. ಕನ್ನಡದಲ್ಲೇ ಬಿಲ್, ಪ್ಯಾಕಿಂಗ್, ಸಂವಹನ ನಡೆಸಿ ಇದನ್ನು ನಡೆಸಬೇಕು ಅನ್ನುವದು ನನ್ನ ಉದ್ದೇಶ. ಅಲ್ಲಿ ಖಂಡಿತ ಉದಯೋನ್ಮುಖ ಬರಹಗಾರರಿಗೂ ಅವಕಾಶ ನೀಡಲಾಗುವದು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.