Skip to main content

ಕರ್ನಾಟಕದಲ್ಲೇ ಕನ್ನಡ ಬಳಸಲು ಒದ್ದಾಡಬೇಕೇ!!

ಬರೆದಿದ್ದುJanuary 27, 2013
3ಅನಿಸಿಕೆಗಳು

ಇಂದು ಬೆಳಿಗ್ಗೆ ಪ್ರಜಾವಾಣಿ ಪತ್ರಿಕೆ ಓದುತ್ತಿದ್ದಾಗ ನನ್ನ ಗಮನ ಸೆಳೆದಿದ್ದು ಮೊದಲ ಪುಟದ ಕೆಳಬಾಗದಲ್ಲಿ ಬಲ ಭಾಗದಲ್ಲಿರುವ ವರದನಾಯಕ + ಶಾಂಪೂ ಒಂದರ ಜಾಹೀರಾತು. ಜಾಹೀರಾತಲ್ಲಿ ಏನಿತ್ತು ಮೊದಲು ಹೇಳಿ ಬಿಡುತ್ತೇನೆ. ಜಾಹೀರಾತಿನ ಮೇಲ್ಬಾಗದಲ್ಲಿ ವರದನಾಯಕ ಚಿತ್ರದ ಪೋಸ್ಟರ. ಆ ಪೋಸ್ಟರ್ ಅಲ್ಲಿ ವರದನಾಯಕ ಎಂಬ ಸಿನಿಮಾ ಹೆಸರು ಒಂದನ್ನು ಬಿಟ್ಟರೆ ಇನ್ನೆಲ್ಲಾ ನಿರ್ಮಾಪಕರ, ನಾಯಕನ, ಮ್ಯೂಸಿಕ್ ಕಂಪನಿಯ ಹೀಗೆ ಎಲ್ಲರ ಹೆಸರು ಇಂಗ್ಲೀಷ್ ಲಿಪಿಯಲ್ಲಿ ಇತ್ತು. ಬರಿ ಸುಮಾರು ೧೫% -೨೦% ಪ್ರತಿಶತ ಕನ್ನಡ! ನೋಡಿದರೆ ಪಕ್ಕಾ ಇಂಗ್ಲೀಶ್ ಪತ್ರಿಕೆಗೆ ತಯಾರಿಸಿದ ಕನ್ನಡ ಚಿತ್ರದ ಪೋಸ್ಟರ್ ಕಾಪಿ ಮಾಡಿ ಹೆಸರನ್ನು ಮಾತ್ರ ಕನ್ನಡದಲ್ಲಿ ಬದಲಾಯಿಸಿದಂತಿತ್ತು.

ಸರಿ ಬಿಡಿ ಕೆಳಗೆ ನೋಡಿದರೆ ಒಂದೇ ಒಂದು ಸಾಲು ಕನ್ನಡದಲ್ಲಿ ನಂತರ ಕೆಳಗೆ ಇಂಗ್ಲೀಷ್ ಅಂಕಿಗಳು. ಇರಲಿ ಬಿಡಿ ಕನ್ನಡ ಅಂಕಿಗಳನ್ನು ನಾವು ಮುಖ್ಯವಾಹಿನಿಯ ಬಳಕೆಯಿಂದ ನಿಲ್ಲಿಸಿ ಜಮಾನಾ ಆಯ್ತು. ಅದು ಪರವಾಗಿಲ್ಲ. (ಇನ್ನೇನು ನಾನು ಹೇಳಲಿ?)

ಅದರ ಕೆಳಗೆ ಬರೆದದ್ದನ್ನು ನೋಡಿ ಮೈ ಉರಿದು ಹೋಯ್ತು. ಒಬ್ಬ ಶತ ಸೋಮಾರಿ ಕನ್ನಡಕ್ಕೆ ಭಾಷಾಂತರಿಸುವ ಗೋಜಿಗೆ ಹೋಗದೆ ಇಂಗ್ಲೀಷ್ ನಿಂದ ಕನ್ನಡಕ್ಕೆ ಲಿಪ್ಯಂತರೀಕರಣ ಗೊಳಿಸಿದ್ದ!

"ಡ್ಯಾಂಡ್ರಫ್ ವೋಂಟ್ ಕಮ್ ಬ್ಯಾಕ್" ಎಂದಿತ್ತು. ಬಹುಶಃ ಆತನಿಗೆ ಕನ್ನಡ ಸರಿಯಾಗಿ ಬರುತ್ತಿರಲಿಲ್ಲವೋ ಅಥವಾ ಡ್ಯಾಂಡ್ರಫ್ ಗೆ ಕನ್ನಡದಲ್ಲಿ ತಲೆಹೊಟ್ಟು ಅನ್ನುತ್ತಾರೆಂದು ಆತನಿಗೆ ಹೊಳೆಯಲಿಲ್ಲವೋ!

ಕನ್ನಡದಲ್ಲಿ ಇದನ್ನೇ "ತಲೆಹೊಟ್ಟು ವಾಪಸ್ ಬರದು" ಅಥವಾ "ತಲೆಹೊಟ್ಟು ಹಿಂತಿರುಗಿ ಬರದು" ಎಂದು ಬರೆದಿದ್ದರೆ ಆ ಶಾಂಪೂವನ್ನು ಜನ ಖರೀದಿ ಮಾಡುತ್ತಿರಲಿಲ್ಲವೇ?

ಇನ್ನು ಕೆಳಗೆ ಎಂದಿನಂತೆ ಶಾಂಪೂನ ವಿವರ ಸಂಪೂರ್ಣ ಇಂಗ್ಲೀಶ್ ಲಿಪಿಯಲ್ಲಿತ್ತು. ಶಾಂಪೂವಿನ ಫೋಟೋ ಬಗ್ಗೆ ಮಾತಾಡುವ ಅಗತ್ಯವಿಲ್ಲ. ಕರ್ನಾಟಕದಲ್ಲಿ ಎಲ್ಲ ಆಂಗ್ಲ ಭಾಷೆಯಲ್ಲೇ ಇರುವದು. ನಾವು ನಮ್ಮ ಕನ್ನಡ ಲಿಪಿಗೆ ಕೊಡುವ ಗೌರವ ಅದು. ಇಂದು ಏಳು ಕೋಟಿ ಕನ್ನಡಿಗರು ಇರುವ ಈ ರಾಜ್ಯದಲ್ಲಿ ಮಾರುವ ಎಲ್ಲ ವಸ್ತುಗಳು ಸಂಪೂರ್ಣ ಕನ್ನಡದಲ್ಲಿ ವಿವರ ಹೊಂದಿರಬೇಕು ಎಂಬ ನಿಯಮ ರೂಪಿಸಿದ್ದರೆ ಈ ಗತಿ ಬರುತ್ತಿರಲಿಲ್ಲ, ಎಲ್ಲ ವಸ್ತುಗಳು ಕನ್ನಡದಲ್ಲೇ ಹೆಸರು/ವಿವರ ಹಾಕಿಕೊಂಡು ಮಾರುಕಟ್ಟೆಗೆ ಬರುತ್ತಿದ್ದವು.

ನಿಜ ಇಂದು ಇಂಗ್ಲೀಷ್ ಅವಶ್ಯಕತೆ ಹಲವು ಉದ್ಯೋಗದಲ್ಲಿ ಇದೆ.  ಆದರೆ ಕನ್ನಡವನ್ನು ಬಳಸಬೇಕಾದ ಜಾಗದಲ್ಲೂ ಇಂಗ್ಲೀಷ್ ಗೆ ಮಣೆ ಹಾಕಿ ಕನ್ನಡಕ್ಕೆ ಕನಿಷ್ಟ ದರ್ಜೆ ನೀಡುವ ಅಗತ್ಯ ಇದೆಯೇ? ಅಗತ್ಯ ಮಾಹಿತಿಯನ್ನು ಕನ್ನಡದಲ್ಲಿ ಮಾಹಿತಿಯನ್ನು ನೀಡದೇ ಅದನ್ನು ಕೆಳಕ್ಕೆ ತೞುವ ಕೆಲ್ಸಕ್ಕೆ ಇದು ಒಂದು ಉದಾಹರಣೆ ಮಾತ್ರ. ಇನ್ನೂ ಅನೇಕ ಉದಾಹರಣೆ ನಮಗೆ ಪ್ರತಿದಿನ ಸಿಗುತ್ತದೆ. ಆದರೆ ಅದನ್ನು ಒಂದು ಚೂರು ವಿರೋಧಿಸದೇ ಸ್ವಾಗತಿಸುವ  ನಮ್ಮ ವಿಶಾಲ ಮನೋಭಾವ ಕನ್ನಡದ ವಿನಾಶಕ್ಕೆ ಬಧ್ರ ಬುನಾದಿ ಹಾಕುತ್ತಿದೆ.

ಹೀಗೆ ಮಾಹಿತಿ ಕನ್ನಡದಲ್ಲಿ ಸಂಪೂರ್ಣ ನೀಡದಿರಲು ವ್ಯಾಪಾರಿ ಕಾರಣ ಇರಬಹುದೇ? ಏಳು ಕೋಟಿ ಕನ್ನಡಿಗರಿದ್ದೂ ಜಾಹೀರಾತುಗಳನ್ನು ಸಿನಿಮಾ ಪೋಸ್ಟರ್ ಗಳನ್ನು ಕನ್ನಡ ಪತ್ರಿಕೆಯೊಂದರಲ್ಲಿಯೇ ಇಂಗ್ಲೀಷ್ ಬರೆಯುವ ಅಗತ್ಯ ಇದೆಯೇ? ಎಲ್ಲಾದರೂ ಇಂಗ್ಲೀಷ್ ಪತ್ರಿಕೆಯಲ್ಲಿ ಇಂಗ್ಲೆಂಡಿನಲ್ಲಿ/ಭಾರತದಲ್ಲಿ ಕನ್ನಡ ಪದೇ ಪದೇ ಬಂದಿದ್ದನ್ನು ನೋಡಿದ್ದೀರಾ? ನಮ್ಮ ಈ ಸೋಮಾರಿತನಕ್ಕೆ ಕಾರಣವೇನು? ನಮ್ಮ ಕನ್ನಡ ಭಾಷೆಯಲ್ಲಿ ಸಂಪೂರ್ಣ ಡಿಸೈನ್ ಮಾಡದಿದ್ದರೆ ಹೋಗಲಿ ಕನಿಷ್ಟ ಭಾಷಾಂತರಿಸಲು ಬಜೆಟ್ ಇರುವದಿಲ್ಲವೇ? ಇದೊಂದು ಯಕ್ಷ ಪ್ರಶ್ನೆ.

ನಾವು ಕನ್ನಡ ಉಳಿಯಬೇಕು ಬೆಳೆಯಬೇಕು ಎಂದು ಬಯಸುತ್ತೇವೆ. ಕನ್ನಡ ಸಾಹಿತ್ಯ ಮಾತ್ರ ಬೆಳೆದರೆ ಸಾಕು ಕನ್ನಡ ಉಳಿಯುತ್ತದೆ ಎಂಬ ಅಪನಂಬಿಕೆ ನಮಗಿದೆ. ಪ್ರತಿ ಕನ್ನಡದ ದುಸ್ಥಿತಿಗೆ ಸರಕಾರ ದೂರುವದು ನಮ್ಮ ಜಾಯಮಾನ. ಆದರೆ ಕನ್ನಡದ ದುಸ್ಥಿತಿಗೆ ನಮ್ಮಲ್ಲೇ ನಡೆಯುವ ಇಂತಹ ನೂರಾರು ಘಟನೆಗಳು ಕಾರಣ. ಇನ್ನು ಹೊಸ ತಂತ್ರಜ್ಞಾನಗಳಲ್ಲಿ ಕನ್ನಡದ ದುಸ್ಥಿತಿ ಬಗ್ಗೆ ಮಾತನಾಡುವದೇ ಬೇಕಿಲ್ಲ. ಅಲ್ಲಿ ಕನ್ನಡ ಇಲ್ಲವೇ ಇಲ್ಲ ಎಂದರೆ ಸೂಕ್ತ.

ಇದಕ್ಕೆ ನಿಮ್ಮ ಅನಿಸಿಕೆ ಏನು ತಿಳಿಸಿ.

ಅಟ್ಯಾಚ್ ಮಾಡಿರುವ ಚಿತ್ರದ ಕಳಪೆ ಗುಣಮಟ್ಟಕ್ಕೆ ಕ್ಷಮೆ ಇರಲಿ. ೨೭ ಭಾನುವಾರ ೨೦೧೩ರ ಪ್ರಜಾವಾಣಿ ದಿನಪತ್ರಿಕೆಯ ಮುಖಪುಟ ನೋಡಿ.

 

ಲೇಖಕರು

ರಾಜೇಶ ಹೆಗಡೆ

ಕಂಡದ್ದು ಕಂಡ ಹಾಗೆ

ಸಾಫ್ಟವೇರ್ ಇಂಜನಿಯರ್. ಕನ್ನಡದಲ್ಲಿ ಸಾಫ್ಟವೇರ್ ತಯಾರಿಸುವದು ನನ್ನ ಹವ್ಯಾಸ. ಆಗಾಗ ಲೇಖನ ಬರೀತಿನಿ ಆದ್ರೆ ಅದರಲ್ಲಿ ಪಳಗಿದವನಲ್ಲ.

ಅನಿಸಿಕೆಗಳು

Jagannatha R N ಸೋಮ, 01/28/2013 - 15:30

ಉತ್ತಮ ಬರಹ ರಾಜೇಶ್ ರವರೆ..ಇಂತಹ ವಿಚಾರಗಳ ಕಡೆಗೆ ಗಮನ ಹರಿಸಿಯು ಪ್ರಶ್ನಿಸಲಾರದೇ ಸುಮ್ಮನಾಗುತ್ತಿರುವ ಬೆಳವಣಿಗೆ ನಿಜಕ್ಕೂ ಆತಂಕಕಾರಿ..

ಇಂಥಹ ಜಾಹೀರಾತುಗಳನ್ನು ಪ್ರಕಟಿಸುವ ಮುನ್ನ ಪತ್ರಿಕೆಗಳು ಸ್ವಲ್ಪ ಎಚ್ಚರವಹಿಸಬೇಕು...

 

venkatb83 ಶುಕ್ರ, 02/01/2013 - 18:37

 

ರಾಜೇಶ್ ಅವರೇ 

ಕರುನಾಡಿನ ಬಹುತೇಕ ಪತ್ರಿಕೆಗಳು  ಪ್ರಕಟಿಸುವುದು ಹೀಗೆಯೇ-ನೀವು ಬಹುಷ ಈಗ ಗಮನಿಸಿರಬೇಕು...!! 

ನಾನಂತೂ ಪ್ರತಿವಾರ ಈ ತರಹದ್ದು ನೋಡುವೆ--
ಈ ವಿಚಾರದಲ್ಲಿ ಕನ್ನಡ ಪ್ರಭ ಮತ್ತು ಉದಯ ವಾಣಿ ಬಹು ಮುಂದೆ-...
ಆದರೂ ನೋಡಿ ಉದಾಸೀನ ಮಾಡದೆ ಈ ವಿಷಯವನ್ನು ಇಲ್ಲಿ ಹೇಳಿ  ಒಳ್ಳೇ  ಕೆಲ್ಸಾ ಮಾಡಿರುವಿರಿ...
ಈ ಪತ್ರಿಕೆಗಳು ಏನು ಹೇಗೆ ಹಾಕಿದರೂ ಓದುವರು ಎಂಬ ಭಾವ ಬಿಡಬೇಕು...
ಶುಭವಾಗಲಿ...
\।/

 

vikram desai ಶನಿ, 02/02/2013 - 22:14

ಸ್ನೇಹವೆಂದರೆ ಬರಿ ಮಾತಲ್ಲ,
ಪ್ರೀತಿ ಅಕ್ಕರೆಯುಳ್ಳ ಮಮತೆಯ ಗೂಡು,
ಶಾಂತ ರಾಗದಲ್ಲಿ ಹಾಡಿದ ಹೊಚ್ಚ ಹೊಸ ಹಾಡು,
ಗೆಳಯ ಗೆಳತಿಯರೊಡನೆಯ ಮಧುರ ಕ್ಷಣಗಳ ದಂಡು,
ಬೆಳಿಸಿದನು ಚಿರಕಾಲ ಎದೆ ತುಂಬಿ ಕೊಂಡು. 

ವಿಕ್ರಮ್ ದೆಸಾಯಿ

ಸಿಂಪಲ್ ಹುಡ್ಗ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.