Skip to main content

ಚಾರ್ ಧಾಮ್ ಯಾತ್ರೆ - ಋಷಿಕೇಶ ಮತ್ತು ಹರಿದ್ವಾರ (ಕೊನೆಯ ಭಾಗ)

ಇಂದ shamala
ಬರೆದಿದ್ದುJuly 16, 2009
4ಅನಿಸಿಕೆಗಳು

http://vismayanagari.com/node/4713
ಚಾರ್ ಧಾಮ್ ಯಾತ್ರೆ - ಋಷಿಕೇಶದ ಮೂಲಕ ಹರಿದ್ವಾರಕ್ಕೆ............(ಕೊನೆಯ ಭಾಗ)

ಬೆಳಿಗ್ಗೆದ್ದು ನಾವು ನಮ್ಮ ಕೊನೆಯ ಹಂತದ ಪ್ರಯಾಣ ಮುಂದುವರೆಸಿದೆವು. ನಾವು ಚಾರ್ ಧಾಮ್ ಯಾತ್ರೆಗಾಗಿ ಹೊರಟ ಸ್ಥಳ ಹರಿದ್ವಾರಕ್ಕೆ ವಾಪಸ್ಸು ಹೊರಟಿದ್ದೆವು. ನಾವು ಹೋಗುವಾಗ ಋಷಿಕೇಶದಲ್ಲಿ ಬರಿಯ ವಾಹನದ ಪರವಾನಿಗಿ ತೆಗೆದುಕೊಂಡಿದ್ದೆವು ಸ್ಥಳ ನೋಡಿರಲಿಲ್ಲ. ಆದ್ದರಿಂದ ಈಗ ಋಷಿಕೇಶದ ಲಕ್ಷಮಣನ ದೇವಸ್ಥಾನ ಮತ್ತು ಲಕ್ಷ್ಮಣ ಜೂಲ, ಗೀತಾ ಮಂದಿರ್, ಸ್ವಾಮಿ ಶಿವಾನಂದರ ಆಶ್ರಮ ಎಲ್ಲಾ ನೋಡುವ ಅವಕಾಶ ಮಾಡಿಕೊಂಡಿದ್ದೆವು. ದಾರಿಯಲ್ಲಿ ಒಂದು ಚಿಕ್ಕ ಉಪಹಾರ ಮಂದಿರದಲ್ಲಿ, ಬೆಳಗಿನ ಉಪಹಾರ ಮಾಡಿ, ನಾವು ಋಷಿಕೇಶಕ್ಕೆ ಬಂದು ತಲುಪಿದಾಗ ಆಗಲೇ ೨ ಘಂಟೆಯ ಹತ್ತಿರವಾಗಿತ್ತು. ಪರ್ವತ ಪ್ರದೇಶದಿಂದ ಹಿಂತಿರುಗಿದ್ದ ನಮಗೆ, ಋಷಿಕೇಶದ ಬಿಸಿಲು ಅಸಾಧ್ಯ ಅನ್ನಿಸಿತು. ಊಟಕ್ಕಾಗಿ ನಮ್ಮ ಹುಡುಕಾಟ ನಡೆಯುತ್ತಿದ್ದಾಗ, ನಮಗೆ ಒಬ್ಬ ಮಾರ್ಗದರ್ಶಿ ಸಿಕ್ಕಿದ.

ಈ ಸ್ಥಳದಲ್ಲಿ ಮಾರ್ಗದರ್ಶಿಗಳಿಲ್ಲದೆ ನಾವೇ ಸುತ್ತಿ ನೋಡಲು ನಮಗೆ ಸ್ಥಳದ ಬಗ್ಗೆ ಚೆನ್ನಾಗಿ ತಿಳಿದಿರಬೇಕು. ಎಲ್ಲೂ ನಮಗೆ ಊಟಕ್ಕೆ ಅನ್ನ ಸಿಕ್ಕಲಿಲ್ಲವೆಂದಾಗ, ಆ ಮಾರ್ಗದರ್ಶಿ ನಮ್ಮನ್ನು ಒಂದು ಕಡೆ ಕರೆದುಕೊಂಡು ಹೋದರು. ಅಲ್ಲಿ, ಸ್ವಲ್ಪ (ಬಿರುಸಾಗಿತ್ತು) ಅನ್ನ ಮತ್ತು ಮೊಸರು ಸಿಕ್ಕಿತು. ತಿಂದು ನಾವು ನೇರವಾಗಿ ಲಕ್ಶ್ಮಣ ಜೂಲದ ಹತ್ತಿರ ಹೋದೆವು. ಸೇತುವೆಯ ಮೇಲೆ ಈಗ ದ್ವಿಚಕ್ರ ವಾಹನಗಳನ್ನೂ ಕೂಡ ಓಡಿಸುತ್ತಾರಾದ್ದರಿಂದ, ತುಂಬಾ ಗಿಜಿಗುಟ್ಟುತ್ತಿರುತ್ತದೆ. ಅಲ್ಲಿ ನಿಂತು ಒಂದೇ ಒಂದು ಚಿತ್ರ ತೆಗೆದುಕೊಳ್ಳುವಷ್ಟರಲ್ಲಿ, ನಮಗೆ ಸಾಕು ಸಾಕಾಗಿತ್ತು. ನಾವು ಜೂಲ ದಾಟಿ, ಗೀತಾ ಮಂದಿರ, ರುದ್ರಾಕ್ಷಿ ಮರ, ಅತಿ ದೊಡ್ಡದಾದ ಈಶ್ವರನ ವಿಗ್ರಹ ಎಲ್ಲಾ ನೋಡಿಕೊಂಡು, ವಾಪಸ್ಸು ಬಂದು, ಶ್ರೀ ಲಕ್ಶ್ಮಣನ ದೇವಸ್ಥಾನ ನೋಡಿದೆವು. ಇಲ್ಲಿ ಬಿಟ್ಟರೆ, ಲಕ್ಶ್ಮಣನ ದೇವಸ್ಥಾನ ಇನ್ನೆಲ್ಲೂ ಇಲ್ಲವಂತೆ. ನಾವು ನಮ್ಮ ವಾಹನದಲ್ಲೇ ಕುಳಿತು, ನದಿ, ರಾಮ ಜೂಲ ನೋಡುತ್ತಿರುವಾಗ, ನಮಗೆ ಪಕ್ಕದಲ್ಲೇ ಶ್ರೀ ಶಿವಾನಂದ ಆಶ್ರಮದ ಫಲಕ ಕಾಣಿಸಿತು. ಅಷ್ಟುಹೊತ್ತಿಗಾಗಲೇ, ೬ ಘಂಟೆಯ ಸಮಯ. ಸರಿ ನಾವು ಆಶ್ರಮದೊಳಗೆ ಹೋದ ತಕ್ಷಣ, ಆರತಿ ಶುರುವಾಯಿತು. ಆಶ್ರಮ ಅತ್ಯಂತ ಶುದ್ಧವಾಗಿ, ಶಾಂತವಾಗಿ,, ಸುಂದರವಾಗಿದೆ. ವಿಧ ವಿಧವಾದ ಆರತಿಗಳನ್ನು, ರಾಗವಾಗಿ, ಮಂತ್ರ ಹೇಳುತ್ತಾ, ಮಾಡುವಾಗ ನೋಡುವುದೇ ಒಂದು ವೈಭೋಗ ಅನ್ನಿಸಿತು. ನಾವು ಪ್ರದಕ್ಷಿಣೆ ಹೋದಾಗ, ಪಕ್ಕದಲ್ಲಿ, ಶ್ರೀ ಶಂಕರಾಚಾರ್ಯರ ತುಂಬಾ ಮುದ್ದಾದ ಮೂರ್ತಿಯನ್ನು ನೋಡಿದೆವು. ಅಷ್ಟು ಸುಂದರವಾಗಿ, ಜೀವಕಳೆಯಿರುವ ಮೂರ್ತಿ ನಮ್ಮನ್ನು ಸ್ವಲ್ಪ ಹೊತ್ತು ಮೈ ಮರೆಯುವಂತೆ ಮಾಡಿತು. ಹೊರಗಡೆ ಬರುವ ಬಾಗಿಲಿನಲ್ಲಿ ನಮಗೆ ಹೆಸರು ಕಾಳಿನ ಉಸಳಿ, ಬೂದುಕುಂಬಳ ಕಾಯಿಯ ಮೊರಬ್ಬ, ಹೆಸರು ಬೇಳೆ ಮತ್ತು ಅಕ್ಕಿ ಬೇಯಿಸಿ ತಯಾರಿಸಿದ, ಹುಗ್ಗಿ ಯನ್ನು ಪ್ರಸಾದದ ರೂಪದಲ್ಲಿ ಕೊಟ್ಟರು. ರುಚಿಯಾಗಿತ್ತು. ಹೊರಗೆ ಬಂದು ಹತ್ತು ಹೆಜ್ಜೆ ಪಕ್ಕಕ್ಕೆ ನಡೆದರೆ ಶ್ರೀ ಶಿವಾನಂದರ ಸಮಾಧಿ ಸ್ಥಳ ಮತ್ತು ಧ್ಯಾನ ಕೇಂದ್ರ ಇದೆ. ಅಲ್ಲಿ ಒಳಗೆ ಕಾಲಿಟ್ಟಾಕ್ಷಣ ನಮ್ಮನ್ನು ಒಂಥರಾ ನೆಮ್ಮದಿ ಆವರಿಸಿಕೊಂಡು ಬಿಡತ್ತೆ. ಅನೇಕರು ಮೌನವಾಗಿ ಕುಳಿತು ಧ್ಯಾನಿಸುತ್ತಿರುತ್ತಾರೆ. ಕೆಳಗೆ ಕುಳಿತುಕೊಳ್ಳಲಾಗದವರಿಗಾಗಿ, ಕೆಲವು ಕುರ್ಚಿಗಳನ್ನೂ ಹಾಕಿದ್ದಾರೆ. ಉದ್ದನೆಯ ಕೊಠಡಿ ಮತ್ತು ಒಳಗಿನ ತುದಿಯಲ್ಲಿ, ಶ್ರೀ ಸ್ವಾಮೀಜಿಗಳ ಸಮಾಧಿ. ನಾವು ಅಲ್ಲಿ ಬರೆದು ಹಾಕಿದ್ದ ಸ್ವಾಮೀಜಿಗಳ ನುಡಿಮುತ್ತುಗಳನ್ನು ಓದಿದೆವು ಮತ್ತು ಸಮಾಧಿಗೆ ನಮಸ್ಕರಿಸಿದೆವು. ಅಮೃತಶಿಲೆಯಲ್ಲಿ ಮಾಡಿರುವ ಸಮಾಧಿಯ ಮೇಲುಗಡೆ ಸ್ವಾಮಿಗಳ ಪಾದಗಳಿವೆ. ಒಂದು ಸುತ್ತು ಬಂದು, ಪಾದಮುಟ್ಟಿ ನಮಸ್ಕರಿಸಬಹುದು. ನಾವೂ ನಮಿಸಿ, ಮೌನವಾಗಿ ಆಚೆ ಬಂದೆವು. ಅಲ್ಲಿ ಕಳೆದ ಒಂದು ೧೦ ನಿಮಿಷದ ಅವಧಿ, ನಮ್ಮ ಮನಸ್ಸಿಗೆ ನೆಮ್ಮದಿ ಕೊಟ್ಟಿತ್ತು. ನಾವು ಆಶ್ರಮದಲ್ಲಿ ಆರತಿ ನೋಡಲು ಹೋಗಿದ್ದರಿಂದ, ಗಂಗಾನದಿಯಲ್ಲಿಯ ಆರತಿ ನೋಡಲಾಗಲಿಲ್ಲ, ಆದರೆ ಆಚೆ ದಡದಲ್ಲಿ ನಿಂತು, ದೀಪಗಳನ್ನು ಹಚ್ಚಿ, ತೇಲಿ ಬಿಡುತ್ತಿದ್ದುದನ್ನು ನೋಡಿದೆವು. ನೇರವಾಗಿ ಹರಿದ್ವಾರ ತಲುಪಿ, ಹೋಟೆಲ್ ಕಿಂಗ್ಸ್ ಇನ್ ನಲ್ಲಿ ಇಳಿದು, ಬಿಸಿ ನೀರಿನ ಸ್ನಾನ ಮುಗಿಸಿ, ಊಟ ಬೇಡವೆಂದು, ಹಾಲು ಕುಡಿದು ಮಲಗಿ ಬಿಟ್ಟೆವು.

ಬೆಳಿಗ್ಗೆ ಎದ್ದು ಹರಿದ್ವಾರದ ದೇವಸ್ಥಾನಗಳನ್ನು ನೋಡಲು ಹೊರಟೆವು. ಎದುರು ಬದುರಿನಲ್ಲಿರುವ ಎರಡು ಗುಡ್ಡಗಳಲ್ಲಿ ದೇವಿಯ ದೇವಸ್ಥಾನಗಳಿವೆ. ಎರಡೂ ಕಡೆ ಮೇಲೆ ಹೋಗಲು ಕೇಬಲ್ ಕಾರ್ಗಳಿವೆ. ನಮಗೆ ಒಂದು ಕಡೆ ಹೋಗಿ ಬರುವುದರೊಳಗೇ ಹೊತ್ತಾಗಿಹೋಯಿತು. ಅದೂ ಅಲ್ಲದೆ ಕಳೆದ ೧೦-೧೨ ದಿನಗಳಿಂದ ಆದ ಆಯಾಸ, ಹರಿದ್ವಾರದ ಬಿಸಿಲ ಜೊತೆಗೆ ನಮ್ಮನ್ನು ತುಂಬಾ ಸುಸ್ತು ಮಾಡುತ್ತಿತ್ತು. ಸರಿಯಾದ ದ್ರಾವಣದ ಸರಬರಾಜಿಲ್ಲದೆ, ನಮ್ಮ ದೇಹಗಳು ಆಯಾಸಗೊಂಡಿದ್ದವು. ನಾವು ಕೆಳಗಿಳಿದು ಬಂದಾಗ ಅಲ್ಲಿ ಮೂಸಂಬಿ ರಸ ಎರಡೆರಡು ಲೋಟ ಕುಡಿದು, ನೇರವಾಗಿ ಹೋಟೆಲ್ ಗೆ ಬಂದು, ಊಟ ಮಾಡಿ ಚೆನ್ನಾಗಿ ನೀರು ಕುಡಿದು ಮಲಗಿಬಿಟ್ಟೆವು. ಮತ್ತೆ ೪ ಘಂಟೆಗೆ ಎದ್ದು, ಮಾನಸ ದೇವಿ ದೇವಸ್ಥಾನಕ್ಕೆ ಹೋದೆವು. ಇಲ್ಲಿ ನಾವು ಸರತಿ ಸಾಲಿನಲ್ಲಿ ನಿಂತಿದ್ದಾಗ, ಬೊಂಬೆಯ ಕುಣಿತ ನಡೆಯುತ್ತಿತ್ತು. ಒಬ್ಬ ಚಿಕ್ಕ ೮-೧೦ ವರ್ಷದ ಹುಡುಗ ಹಿಂದಿ ಹಾಡುಗಳನ್ನು ಹಾಡುತ್ತಿದ್ದ, ಅವನ ತಂದೆ ಡೋಲಕ್ ನುಡಿಸುತ್ತಿದ್ದರು ಮತ್ತು ಇನ್ನೊಬ್ಬ ವ್ಯಕ್ತಿ, ಬೊಂಬೆಗಳ ದಾರ ಹಿಡಿದು ಪರದೆಯ ಹಿಂದಿನಿಂದ ಹಾಡಿನ ಗತಿಗೆ ತಕ್ಕಂತೆ ಬೊಂಬೆಗಳನ್ನು ಆಡಿಸುತ್ತಿದ್ದರು. ಸಾಲಿನಲ್ಲಿ ಕಾಯುವ ಬೇಸರ ಕಳೆದು, ಎಲ್ಲರನ್ನೂ ಆ ಹುಡುಗ ತನ್ನ ವಿಶಿಷ್ಟ ಶೈಲಿಯ ಹಾಡುಗಾರಿಕೆಯಿಂದ ಸೆಳೆಯುತ್ತಿದ್ದ. ನಾವು ದೇವಿಯ ದರ್ಶನ ಮಾಡಿ ವಾಪಸ್ಸು ಬಂದು ಹರೀ ಕಿ ಪೌರಿಗೆ ಗಂಗೆಯ ಆರತಿ ನೋಡಲು ಹೋದೆವು. ಹರಿದ್ವಾರದಲ್ಲಿ ಈ ಗಂಗಾಮಾಯಿಯ ಆರತಿ ಅತ್ಯಂತ ಜನಪ್ರಿಯವಾಗಿದೆ. ನಾವು ಮೇಲೆ ಮಾನಸಾದೇವಿಯ ದೇವಸ್ಥಾನದಲ್ಲಿ ಇದ್ದಾಗಲೇ ಸಿಕ್ಕಾಪಟ್ಟೆ ಗಾಳಿ ಶುರುವಾಗಿತ್ತು. ಇಡೀ ಹರಿದ್ವಾರ ಮೋಡದಲ್ಲಿ ಮುಸುಕಿ ಮಳೆಯ ಮುನ್ಸೂಚನೆ ಕೊಡುತ್ತಿತ್ತು. ನಾವು ಹರೀ ಕಿ ಪೌರಿ ಹತ್ತಿರ ಬರುವ ಹೊತ್ತಿಗಾಗಲೇ ಅಲ್ಲಿ ಸಾವಿರಾರು ಜನರು ಸೇರಿದ್ದರು. ಸ್ವಲ್ಪ ಕತ್ತಲಾಗುತ್ತಿದ್ದಂತೆಯೇ ಧ್ವನಿವರ್ಧಕದಲ್ಲಿ "ಓಂ ಗಂಗೇ ಮಾಯಿ....", ನಾವು ಓಂ ಜೈ ಜಗದೀಶ ಹರೇ ಎಂದು ಹಾಡುವ ರಾಗದಲ್ಲಿ ಶುರುವಾಗುತ್ತಿದ್ದಂತೆ, ಗಂಗಾನದಿಯ ತಟದಲ್ಲಿರುವ ಎಲ್ಲಾ ಚಿಕ್ಕ ದೊಡ್ಡ ದೇವಸ್ಥಾನಗಳಲ್ಲೂ ಆರತಿ ಶುರುವಾಯಿತು. ಕತ್ತಲಾಗುತ್ತಿದ್ದ ಹಿನ್ನೆಲೆಯಲ್ಲಿ, ಈ ಆರತಿಯ ಬೆಳಕು ಮತ್ತು ಭಕ್ತರು ಗಂಗೆಯಲ್ಲಿ ತೇಲಿಬಿಟ್ಟ ಚಿಕ್ಕ ಚಿಕ್ಕ ದೀಪಗಳು ಎಲ್ಲವೂ ರೋಮಾಂಚನಗೊಳ್ಳುವಂತೆ ಮಾಡತ್ತೆ. ಸುಮಾರು ೨೦ ನಿಮಿಷದ ತನಕ ನಡೆಯುವ ಈ ಆರತಿ ನಿಜವಾಗಿ ಒಮ್ಮೆ ನೋಡಿದರೇ ನಮಗೆ ಅದರ ಆನಂದ ಅರ್ಥವಾಗುವುದು. ಜೊತೆ ಜೊತೆಯಲ್ಲಿ ಕ್ಲಿಕ್ಕಿಸುತ್ತಿದ್ದ ಕ್ಯಾಮೆರಾ ಬೆಳಕು ಒಂದು ಬೇರೆಯದೇ ಆದ ವಾತಾವರಣವನ್ನು ಸೃಷ್ಟಿಸಿತ್ತು. ಮಳೆ ಹನಿಗಳು ಶುರುವಾದಾಗ, ನಾವು ದೌಡಾಯಿಸಿ ನಮ್ಮ ಇನೋವಾ ಏರಿ ಹೋಟೆಲ್ ಗೆ ವಾಪಸ್ಸು ಬಂದೆವು. ಬೆಳಿಗ್ಗೆ ನಮಗಾಗಿ ವಿಶೇಷವಾಗಿ (ಅಕ್ಕಿ ಅಂಗಡಿಯಿಂದ ತರಿಸಿ) ಮಾಡಿದ್ದ ಮೊಸರನ್ನ, ಚಟ್ನಿ, ಆಲೂಗಡ್ಡೆ ಪಲ್ಯ ತಿಂದು ಮಲಗಿದರೆ ನಮ್ಮ ಕೈ ಕಾಲುಗಳು ನಮ್ಮ ವಿರುದ್ಧ ಮುಷ್ಕರ ಹೂಡಿ, ರಂಪ ಆರಂಭಿಸಿಬಿಟ್ಟಿದ್ದವು. ಕೊನೆಗೆ ತಡೆಯಲಾರದೆ ಮಾತ್ರೆ ನುಂಗಿ ನಿದ್ದೆ ಮಾಡಿದೆವು, ಏಕೆಂದರೆ ಬೆಳಿಗ್ಗೆ ಮತ್ತೆ ನಾವು ಇನೋವಾದಲ್ಲಿ ೭ - ೮ ಘಂಟೆಗಳ ಕಾಲ ಕುಳಿತು, ೩ ಘಂಟೆಯ ಒಳಗೆ ದೆಹಲಿಯ ವಿಮಾನ ನಿಲ್ದಾಣ ತಲುಪಬೇಕಿತ್ತು.

ನಮ್ಮ ಇನೋವಾ ಸಾರಥಿ ಪೂರನ್ ಸಿಂಗ್ ನಮ್ಮನ್ನು ಈ ಬಾರಿ ರಾಷ್ಟ್ರೀಯ ಹೆದ್ದಾರಿಯಲ್ಲೇ ಕರೆದುಕೊಂಡು ಬಂದರು. ನಾವು ಪತಂಜಲಿಯವರ ಆಶ್ರಮದಲ್ಲಿ ಬೆಳಗಿನ ಉಪಹಾರ ತಿಂದೆವು ಮತ್ತು ಸುಮಾರು ೨.೩೦ಗೆ ದೆಹಲಿ ವಿಮಾನ ನಿಲ್ದಾಣ ತಲುಪಿದೆವು. ದೆಹಲಿಯ ವಾಹನ ದಟ್ಟಣೆಯ ಬಗ್ಗೆ ತಿಳಿದಿದ್ದ ನನ್ನವರು, ನಮ್ಮನ್ನು ಬೆಳಿಗ್ಗೆ ಬೇಗನೆ ಹೊರಡುವಂತೆ ಮಾಡಿದ್ದರಿಂದ, ನಾವು ಸರಿಯಾದ ಸಮಯಕ್ಕೆ ತಲುಪಿದ್ದೆವು. ನಮ್ಮ ಪ್ರಯಾಣ ಬೆಂಗಳೂರಿಗೆ, ಸ್ಪೈಸ್ ಜೆಟ್ ನಲ್ಲಿ ೫.೩೦ ಘಂಟೆಯ ವಿಮಾನದಲ್ಲಿ ಕಾಯ್ದಿರಿಸಲಾಗಿತ್ತು. ವಿಮಾನ ಹೊರಡುವ ೧೫ ನಿಮಿಷಗಳ ಮೊದಲು ಶುರುವಾದ ಗಾಳಿ ನಮ್ಮ ಪ್ರಯಾಣವನ್ನು ೧.೩೦ ಘಂಟೆ ತಡಮಾಡಿತ್ತು, ಪರಿಣಾಮ ನಾವು ಬೆಂಗಳೂರಿನಲ್ಲಿ ಇಳಿದಾಗ ರಾತ್ರಿ ೯.೩೦ ಘಂಟೆಯಾಗಿ ಹೋಗಿತ್ತು. ನಮ್ಮ ಲಗ್ಗೇಜ್ ನಲ್ಲಿ ನನ್ನ ಸೂಟ್ಕೇಸ್ ಬರದೇ, ನಾವು ಅದಕ್ಕಾಗಿ ಕಾದು, ದೂರು ಬರೆದುಕೊಟ್ಟು ವಿಮಾನ ನಿಲ್ದಾಣದಿಂದ ಆಚೆ ಬಂದಾಗ, ರಾತ್ರಿ ೧೧ ಘಂಟೆಯಾಗಿತ್ತು. ಹೊಟ್ಟೆ ತಾಳ ಮದ್ದಲೆಗಳನ್ನು ಆರಂಭಿಸಿ ಆಗಲೇ ತುಂಬಾ ಹೊತ್ತಾಗಿತ್ತು. ನಮಗಾಗಿ ಬಂದಿದ್ದ ಗಾಡಿಯಲ್ಲಿ ಕುಳಿತು, ಬೆಂಗಳೂರಿನ ಎಲ್ಲಾ ಹೋಟೆಲ್ ಗಳನ್ನೂ ನೋಡುತ್ತಾ ಬಂದಾಗ, ನಮಗೆ ಎಲ್ಲೂ ತಿನ್ನಲು ಏನೂ ಸಿಗದೆ, ಕೊನೆಗೆ ಸಜ್ಜನರಾವ್ ವೃತ್ತದ ಬಳಿ, ತೆಗೆದಿದ್ದ ಒಂದೇ ಒಂದು ಕಡೆ ಬಿಸಿ ಇಡ್ಲಿ ಮತ್ತು ಚಿತ್ರಾನ್ನ ಸಿಕ್ಕಿತು. ಅದನ್ನೇ ಪರಮಾನ್ನವೆಂದು ತಿಂದು, ನಮ್ಮ ಮನೆಗೆ ಬಂದು ಇಳಿದಾಗ, ನನ್ನವರು ನನಗೊಂದು ಶಾಕ್ ಕೊಟ್ಟರು...... "ನನ್ನ ಕೈಚೀಲ ಇಲ್ಲವೆಂದು". ಅದರಲ್ಲಿ ನಮ್ಮ ವೀಡಿಯೋ ಕ್ಯಾಮೆರಾ ಮತ್ತು ಕಾಗದಗಳು ಇದ್ದವು. ಸರಿ ನಮ್ಮನ್ನು ಬಿಟ್ಟು ಅವರು ಮತ್ತದೇ ಕಾರಿನಲ್ಲಿ ವಿಮಾನ ನಿಲ್ದಾಣಕ್ಕೆ ಹೋದರು. ದೇವರ ದಯೆಯಿಂದ ಅಲ್ಲಿಯ ಸಿಬ್ಬಂಧಿ ಹುಡುಗ ಅದನ್ನು ತಪಾಸಣೆ ಕಿಟಕಿಯಲ್ಲಿ ಕೊಟ್ಟಿದ್ದ. ಆ ಜಾಗದಲ್ಲಿ ಸಿ ಸಿ ಟಿವಿಗಳನ್ನು ಅಳವಡಿಸಿರುವುದರಿಂದ ಯಾವುದೇ ವಸ್ತು ಕಳ್ಳತನ ಆಗುವುದಿಲ್ಲವೆಂದು ತಿಳಿಯಿತು. ನಮ್ಮಂತೇ ಇನ್ನೂ ಕೆಲವರ ವಸ್ತುಗಳು ಆ ಕಿಟಕಿಯಲ್ಲಿ ಇಡಲ್ಪಟ್ಟಿದ್ದವಂತೆ. ಇವರ ಚೀಲ ಅದರ ಒಡೆಯನಿಲ್ಲದೇ ಅನಾಥವಾಗಿ ಟ್ರಾಲಿಯಲ್ಲಿ ಕುಳಿತಿತ್ತಾದ ಕಾರಣ, ನನ್ನವರು ಅಲ್ಲಿಗೆ ತಲುಪುವಷ್ಟರಲ್ಲಿ ಬಾಂಬ್ ದಳದವರು ಬಂದು ಅದನ್ನು ಪರೀಕ್ಷೆ ಮಾಡಿ, ಎಲ್ಲಾ ಅವಾಂತರವೂ, ಸಂಭ್ರಮವೂ ಮುಗಿದಿತ್ತು!!!!!!. ಆದರೆ ಅದನ್ನು ಹುಡುಕುತ್ತಾ ಹೋದ ನನ್ನವರ ಹತ್ತಿರ ತನ್ನ ಗುರುತು ಹೇಳಲು ಏನೂ ಇರಲಿಲ್ಲ. ಒಳಗೆ ನನ್ನ ಸೂಟ್ಕೇಸ್ ಗಾಗಿ ದೂರು ಸಲ್ಲಿಸಿದಾಗ, ಅದರ ಕರಡು ಪ್ರತಿಯ ಜೊತೆ ಅವರ ಬೋರ್ಡಿಂಗ್ ಪಾಸ್ ನನ್ನ ಹತ್ತಿರ ಬಂದು ಬಿಟ್ಟಿತ್ತು. ಅಂತೂ ಇಂತೂ ಅಲ್ಲಿನ ಅಧಿಕಾರಿಗಳನ್ನು ತೃಪ್ತಿಪಡಿಸಿ, {ಬೇಕಾದರೆ ವೀಡಿಯೋ ಕ್ಯಾಮೆರಾ ತೆಗೆದು ನೋಡಿ, ನನ್ನ ಚಿತ್ರ ಇದೆ, ಈಗ ಸಧ್ಯಕ್ಕೆ ನನ್ನ ಹತ್ತಿರ ಇರುವ ಗುರುತು ಅದೊಂದೇ ಎಂದು ಹೇಳಿದರಂತೆ.. :-) } ಚೀಲ ತೆಗೆದುಕೊಂಡು ಮನೆಗೆ ಬಂದು ಸೇರಿದಾಗ ಮಧ್ಯರಾತ್ರಿಯ ೩ ಘಂಟೆಯಾಗಿತ್ತು. ನಮ್ಮ ಊರಿನಿಂದ ದೂರದಲ್ಲಿ ಏನೂ ತೊಂದರೆಯಾಗದೆ, ಮನೆಗೆ ವಾಪಸ್ಸು ಬಂದಾಗ ಇಷ್ಟೆಲ್ಲಾ ಫಜೀತಿ ಅನುಭವಿಸುವಂತಾಯಿತು. ಮಾರನೆಯ ದಿನ ಸಾಯಂಕಾಲದ ವೇಳೆಗೆ, ನನ್ನನ್ನು ಬಿಟ್ಟು, ಗೋವಾಗೆ ಸುತ್ತಲು ಹೋಗಿದ್ದ ನನ್ನ ಸೂಟ್ಕೇಸ್ ಕೂಡ, ನಮ್ಮ ಮನೆ ಹುಡುಕಿಕೊಂಡು ಬಂದು ಸೇರಿತ್ತು.

ಜೀವನದಲ್ಲೇ ಮರೆಯಲಾಗದ, ಅತ್ಯಂತ ಮಧುರವಾದ ನೆನಪುಗಳನ್ನೊಳಗೊಂಡ ನಮ್ಮ ಚಾರ್ ಧಾಮ್ ಯಾತ್ರೆ ಯಶಸ್ವಿಯಾಗಿ ಮುಗಿದಿತ್ತು. ದೇಹಕ್ಕೆ ಆಗಿದ್ದ ಆಯಾಸದಿಂದ ನಾನು, ಇನ್ನು ಯಾತ್ರೆ ಮಾಡುವ ಸಾಹಸವೇ ಬೇಡವೆಂದು ನಿರ್ಧರಿಸಿದ್ದೆ. ಆದರೆ ಈ ಅನುಭವಗಳನ್ನು ಬರೆದು ಮುಗಿಸುವ ವೇಳೆಗಾಗಲೇ, ಕಳ್ಳ ಮನಸ್ಸು ಮತ್ತೆಲ್ಲಾದರೂ ಹೋಗೋಣವಾ ಎನ್ನುವ ಕನಸು ಕಾಣುತ್ತಿದೆ.........

ತಾಳ್ಮೆಯಿಂದ ನನ್ನೀ ಅನುಭವಗಳನ್ನು ಓದಿ, ಪ್ರೋತ್ಸಾಹಿಸಿದ ನನ್ನ ಎಲ್ಲಾ ಅಂತರ್ಜಾಲ ಸ್ನೇಹಿತರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು.

ಲೇಖಕರು

shamala

ನಾನೊಬ್ಬ ಕನ್ನಡತಿ, ಭಾಷೆಯ ಬಗ್ಗೆ ಅತಿಯಾದ ಅಭಿಮಾನ ಉಳ್ಳವಳು. ನನ್ನ ಪರಿಚಯಕ್ಕೆ ಇಷ್ಟೇ ಸಾಕು.
http://antharangadamaathugalu.blogspot.com/

ಅನಿಸಿಕೆಗಳು

ಶಿವಕುಮಾರ ಕೆ. ಎಸ್. ಶುಕ್ರ, 07/17/2009 - 15:44

ಕೆಲವರಿಗೆ ಉದ್ದುದ್ದ ಅನಿಸಿದರೂ, ನಿಮ್ಮ ಚಾರ್-ಧಾಮ ಯಾತ್ರೆಯ ಬರಹ ಚೆನ್ನಾಗಿ ಮೂಡಿಬಂತು. ಎಲ್ಲ ವಿವರಗಳನ್ನೊಳಗೊಂಡ, ಬೋರಾಗದ ವಸ್ತು-ನಿಷ್ಠ ಪ್ರವಾಸ ಕಥನ ಇದು.

ಇನ್ನೊಂದು ಪಿಸುಮಾತು ಮಾಡಿ ಈ ಪ್ರವಾಸ ಕಥನದಲ್ಲಿ ಉಲ್ಲೇಖಗೊಂಡ ಕೆಲವು ಮುಖ್ಯ ಸ್ಥಳಗಳ ಫೋಟೋಗಳನ್ನು ಹಾಕಿದರೆ ಪರಿಪೂರ್ಣ!

ವಂದನೆಗಳೊಂದಿಗೆ

shamala ಶುಕ್ರ, 07/17/2009 - 17:52

ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ಶಿವಕುಮಾರ್...

ಚಿತ್ರಗಳನ್ನು ಹಾಕಲು ಮೊದಲೂ ಪ್ರಯತ್ನಿಸಿದ್ದೆ, ಆದರೆ ಏಕೋ ನನಗೆ ಬರಲಿಲ್ಲ. ಮತ್ತೆ ಪ್ರಯತ್ನಿಸಿ ನೋಡುತ್ತೇನೆ.

ಶ್ಯಾಮಲ

ವಿನಯ್_ಜಿ ಶುಕ್ರ, 07/17/2009 - 18:10

ಶ್ಯಾಮಲರವರೆ,
ವಿಸ್ಮಯನಗರಿಯ 'ಚಿತ್ರಶಾಲೆ" option ನಲ್ಲಿ "ಹೊಸ ಚಿತ್ರ" ನ click ಮಾಡಿ ಹಾಕಬಹುದು. ನಿಮ್ಮ ಚಾರ್ ಧಾಮ್ ಪ್ರವಾಸದ ಚಿತ್ರಗಳು ನಿಮ್ಮ ಲೇಖನಗಳಂತೆ ಚೆನ್ನಾಗಿರುತ್ತವೆ ಎಂದು ನಂಬಿರುತ್ತೇನೆ.. :) ದಯವಿಟ್ಟು ಬೇಗನೆ ಫೋಟೊಗಳನ್ನು upload ಮಾಡಬೇಕಾಗಿ ವಿನಂತಿ :)

Hemanth V (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 07/18/2009 - 17:50

nave hogi banda anibhavavaaguttade
dhanyavaada shyaamalaavare............ ;)

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.