ಓ ಅಮ್ಮಾ....!
ಮುಪ್ಪು ಆವರಿಸಿ ದೇಹದ ಶಕ್ತಿ ಕಳೆದುಹೋಗಿ
ಮೈಯ್ಯ ಚರ್ಮ ಸುಕ್ಕಾಗಿ ಕಣ್ಗಳು ಮಂಜಾಗಿ
ಹಲ್ಲು ಹೋಗಿ ಬೆನ್ನು ಬಾಗಿ ಕುಳಿತಲ್ಲಿ ಕುಳಿತವಳಾಗಿ
ಮಲಗಿದರೆ ಮಗ್ಗುಲು ಬದಲಿಸಲೂ ಬಲು ಕಷ್ಟವಾಗಿ
ಮತ್ತೆ ಮಗುವಿನ ಹಾಗೆ ತನ್ನವರ ಸಹಾಯ ಬೇಕಾಗಿ
ನಿನ್ನ ನೀನೆ ಶಪಿಸಿದ್ದೆ ನಿನ್ನಾ ಸ್ಥಿತಿಗಾಗಿ
ಬೇರೆಯವರಿಗೆ ಭಾರವಾಗಬಾರದು ಎಂದು
ಆಶಿಸಿದೆ ಈ ಭೂಮಿಯ ಮೇಲೆ ಇರಬಾರದೆಂದು.
ಆದರೆ ಓ ಅಮ್ಮಾ.....!
ನಿನ ಕರುಳ ಬಳ್ಳಿಯ ನಾಳದಿ ಹರಿದ ಹನಿ ಹನಿ ನೆತ್ತರ
ಮಾಂಸದ ತುಣುಕುಗಳ ಕಣ ಕಣವ ಎನಗೆ ಉಣಿಸಿಲ್ಲವೇ...?
ಕ್ಷಣ ಕ್ಷಣವು ಬೆಳೆವಂತೆ ಉದರದೊಳು ನನ ಪೋಷಿಸಿ
ಒಂಬತ್ತು ತಿಂಗಳು ಹೊತ್ತು ಎಲ್ಲ ನೋವ ಸಹಿಸಿಲ್ಲವೇ...?
ಹೆತ್ತು ಈ ಧರೆಗಿಳಿಸಿ ನನ ಹೊತ್ತು ಸಾಕು ಸಲಹಿದೆ
ನಿನಗಿಲ್ಲದಿದ್ದರೂ ನನಗೇನೂ ಕೊರತೆ ಮಾಡದೆ
ಬಿದ್ದು ಒದ್ದಾಡಿ ಎದ್ದು ಓಡಾಡಿ ನನ ನಡೆವಂತೆ ಮಾಡಿದೆ
ಸಾಕಿ ಸಲಹಿ ಓದು ಬರಹ ಕಲಿಸಿ ದೊಡ್ದವನಾಗಿ ಮಾಡಿದೆ
ನಿನ್ನಿಚ್ಛೆಯಂತೆ ಸಂಗಾತಿಯ ಸೇರಿ ನಾ ಸಂಸಾರಿಯಾದೆ.
ಈ ಎಲ್ಲ ಸಮಯದಲು ನೀ ನನ್ನೊಳಿತ ಬಯಸಲಿಲ್ಲವೇ..?
ನನ ಚಂದಕಾಗಿ ಗಂಧದಂತೆ ನಿನ ಜೀವ ತೇದು ಸವೆಸಲಿಲ್ಲವೇ..?
ಇಷ್ಟೆಲ್ಲ ಇರುವಾಗ ನಾ ನಿನಗೆ ಬೇರೆಯವ ಹೇಗಾಗುವೆ...?
ನಿನ ರಕ್ತ-ಮಾಂಸಗಳ ತುಣುಕುಗಳೆ ನಾನಲ್ಲವೇ..?
ಕಡೆಗಣಿಸೆ ಕುಡಿದಹಾಲ ಋಣವ ತೀರಿಸಿದಂತಾಗುವುದೇ..?
ನಿನ್ನೊಲುಮೆಯೆ ನನಗೆ ಸದಾ ದಾರಿ ದೀವಿಗೆಯಲ್ಲವೆ
ನಿನ ಸೇವೆಯೆ ಪರಮಾತ್ಮನ ಪೂಜೆಯೆಂದರಿತಿರುವೆ
ಕನಿಕರಿಸಿ ನನ ಸೇವೆಯ ಸ್ವೀಕರಿಸು ಓ ಅಮ್ಮಾ
ಹರಸು ನೀ ಎಂದೂ ಸಾರ್ಥಕವಾಗಲಿ ನಮ ಜನ್ಮ…!
ಸಾಲುಗಳು
- Add new comment
- 564 views
ಅನಿಸಿಕೆಗಳು
ನೀಮ್ಮ ಈ ಲೇಖನ ನಿಜವಾಗಿಯೂ
ನೀಮ್ಮ ಈ ಲೇಖನ ನಿಜವಾಗಿಯೂ ಅದ್ಭುತವಾದ ಕವನವಾಗಿದೆ. ನಿಮಗೆ ನನ್ನ ಸೆಲ್ಯುಟ್
ತುಂಬಾ ತುಂಬಾ ಧನ್ಯವಾದಗಳು ರಾಜೇಶ್
ತುಂಬಾ ತುಂಬಾ ಧನ್ಯವಾದಗಳು ರಾಜೇಶ್ ಅವರೇ... ಕವನವನ್ನು ಓದಿ ತಮ್ಮ ಮೆಚ್ಚುಗೆಯ ನುಡಿಗಳನ್ನು ಬರೆದು ತಿಳಿಸಿದ್ದಕ್ಕೆ. ಸಹಕಾರ ಹೀಗೇ ಮುಂದುವರೆಯಲಿ. -ತ್ರಿನೇತ್ರ.