Skip to main content

ಚಾರ್ ಧಾಮ್ ಯಾತ್ರೆ - ಬದರೀನಾಥ ಮತ್ತು ಮಾನಾ ಎಂಬ ಹಳ್ಳಿ

ಇಂದ shamala
ಬರೆದಿದ್ದುJuly 6, 2009
1ಅನಿಸಿಕೆ

http://www.vismayanagari.com/node/4669

ದರೀನಾರಾಯಣದ ದರ್ಶನದ ನಂತರ ನಾವು ಅಲ್ಲೇ ಒಂದು ಹೋಟೆಲ್ ನಲ್ಲಿ ತಿಂಡಿ ತಿನ್ನಲು ಹೋದೆವು. ಇಡ್ಲಿ, ದೋಸೆ, ಉಪ್ಪಿಟ್ಟು ಎಲ್ಲಾ ಇದೆ ಅಂದಾಗ, ಖುಷಿಯಾಗೋಯ್ತು. ಮೊದಲು ಉಪ್ಪಿಟ್ಟು ತಿಂದೆವು, ತುಂಬಾ ಚೆನ್ನಾಗಿತ್ತು (ಆದರೆ ೫ ಜನರಿಗೆ ೩ ತಟ್ಟೆ ಸಿಕ್ತು ಅಷ್ಟೆ). ಇಡ್ಲಿ, ದೋಸೆಯೆಲ್ಲಾ ನಮ್ಮ ಕರ್ನಾಟಕದ ರುಚಿ ಇರಲಿಲ್ಲ. ಇವರುಗಳು ಬಹುಶ: ಹೆಸರುಬೇಳೆ ನೆನೆಸಿ ತಿರುವಿ ಮಾಡುತ್ತಾರೆಂದು ಕಾಣತ್ತೆ... ರುಚೀನೇ ಇರೋಲ್ಲ. ಸಾಂಬಾರ್ ಅಂತೂ ಒಳ್ಳೆ ಗಟ್ಟಿಯಾಗಿ ಕೇಕ್ ಇದ್ದಹಾಗಿತ್ತು. ಅದನ್ನೇ ಸ್ವಲ್ಪ ತಿನ್ನಲೇಬೇಕಾದ ಅನಿವಾರ್ಯ ನಮಗೆ.... :-) ಏನೂ ಮಾಡೋಕಾಗೊಲ್ಲ... ನಮಗೆ ಊರಿಗೆ ಬಂದು, ನಮ್ಮ ಅನ್ನ ತಿಳಿಸಾರು ತಿಂದರೆ ಸಾಕು ಎನ್ನುವಂತಾಗಿತ್ತು.

ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ, ನಮ್ಮ ಕನ್ನಡದವರ ಒಂದು ಅಂಗಡಿ "ರುದ್ರಾಕ್ಷ ಎಂಪೋರಿಯಮ್ ", ಇಲ್ಲಿ ಎಲ್ಲಾ ಮುಖಗಳ ರುದ್ರಾಕ್ಷಿಗಳನ್ನೂ, ಬದರೀನಾರಾಯಣನ ಪಂಚಲೋಹದ ವಿಗ್ರಹಗಳನ್ನೂ, ಮತ್ತಿತರ ವಿಗ್ರಹಗಳನ್ನೂ ಮಾರುತ್ತಾರೆ. ಈ ಅಂಗಡಿ ವರ್ಷದಲ್ಲಿ ಬರಿಯ ಆರು ತಿಂಗಳು ಮಾತ್ರ, ಬೇರೆ ಸಮಯದಲ್ಲಿ, ಇವರು ಹರಿದ್ವಾರದಲ್ಲಿರುವ ತಮ್ಮ ಅಂಗಡಿಯನ್ನು ನೋಡಿಕೊಳ್ಳುತ್ತಾರೆ. ಹೋದವರ್ಷ ಬದರೀ ಯಾತ್ರೆ ಹೋಗಿದ್ದ ನಮ್ಮ ಸ್ನೇಹಿತರು, ಬದರೀನಾರಾಯಣನ ವಿಗ್ರಹ ತಂದಿದ್ದರಂತೆ, ಹಾಗಾಗಿ ಅವರು ನನ್ನತ್ತಿಗೆಯನ್ನು, ಮತ್ತೊಂದು ವಿಗ್ರಹ ತರುವಂತೆ ಕೇಳಿಕೊಂಡಿದ್ದರು. ಅಂಗಡಿಯ ಹೆಸರು ದೂರವಾಣಿ ಸಂಖ್ಯೆ ಎಲ್ಲಾ ಕೊಟ್ಟಿದ್ದರು. ನಾವು ಅಂಗಡಿಯಲ್ಲಿ, ಶ್ರೀ ಬದರೀನಾರಾಯಣನ ವಿಗ್ರಹ ನೋಡಿದಾಗ, ನಮಗೂ ಕೊಳ್ಳಬೇಕೆಂಬ ಸಹಜ ಆಸೆ ಮೂಡಿಬಿಟ್ಟಿತ್ತು, ಅಷ್ಟು ಚೆನ್ನಾಗಿದೆ. ಸರಿ ನಾವು ನಮ್ಮ ಮನೆಗೊಂದು ಮತ್ತು ನಮ್ಮ ಇನ್ನೊಬ್ಬ ಸ್ನೇಹಿತರಿಗೊಂದೆಂದು, ಎರಡು ವಿಗ್ರಹಗಳನ್ನು, ಒಂದೊಂದಕ್ಕೆ ರೂ.೪೦೦ ರಂತೆ ಕೊಟ್ಟು ಕೊಂಡೆವು. ಈಗ ನಿತ್ಯವೂ ದೇವರ ಮನೆಯಲ್ಲಿ, ಆ ವಿಗ್ರಹ ನೋಡಿದಾಗ, ಮನಸ್ಸು ಏನೋ ಒಂಥರಾ ಅರಳುತ್ತದೆ.

ನಾವು ಇಲ್ಲಿಂದ ’ಮಾನ’ ಎಂಬ ಹಳ್ಳಿಗೆ ಹೊರಟೆವು. ಇದು ಭಾರತ - ಟಿಬೇಟ್ ಗಡಿ. ಆದರೆ ಇಲ್ಲಿ ನಮಗೆ ಗಡಿ ರೇಖೆ ಏನೂ ಕಾಣೊಲ್ಲ, ನಿಜವಾಗಿ ಗಡಿ ಈ ಹಳ್ಳಿಯಿಂದ ಇನ್ನೂ ೪೫ ಕಿ.ಮೀ ದೂರ ಇದೆಯಂತೆ. ಇದು ಭಾರತದ ಗಡಿಯಲ್ಲಿರುವ ಕೊನೆಯ ಹಳ್ಳಿ. ಇಲ್ಲಿಂದ ಮುಂದೆ ಸಾರ್ವಜನಿಕರಿಗೆ ಪ್ರವೇಶ ಇಲ್ಲ, ಸೈನ್ಯದ ಪರಿಮಿತಿಗೆ ಒಳಪಟ್ಟಿದೆ. ನಾವು ಹೋಗಿರುವ ನಮ್ಮ ಗಾಡಿಗಳು ೨ ಕಿ.ಮೀ ಹಿಂದೆಯೇ ನಿಲ್ಲಿಸಿಬಿಡುತ್ತಾರೆ ಮತ್ತು ನಾವು ಅಲ್ಲಿಂದ ಸ್ವಲ್ಪ ಮೇಲಕ್ಕೆ ೧.೩೦ / ೨ ಕಿ.ಮೀ ಗಳಷ್ಟು ಹತ್ತಿ ಹೋಗಬೇಕು. ನಮಗೆ ಇಲ್ಲಿ ಶ್ರೀ ವೇದವ್ಯಾಸರ ಗುಹೆ, ಭೀಮನ ಕಲ್ಲು, ಗಣೇಶನ ಗುಹೆ, ಸರಸ್ವತಿ ನದಿಯ ಉಗಮ ಸ್ಥಾನ, ಎಲ್ಲಾ ಸಿಗತ್ತೆ. ಇನ್ನು ಮುಂದಕ್ಕೂ ಸ್ವಲ್ಪ ಚಾರಣ ಮಾಡಿ ಹೋಗಬಹುದಾಗಿದೆ, ಆದರೆ ನಾವು ಸಮಯದ ಅಭಾವ, ಮತ್ತು ಸುಸ್ತಿನಿಂದಾಗಿ ಹೋಗುವ ಆಲೋಚನೆಯನ್ನೇ ಮಾಡಲಿಲ್ಲ.

ವೇದವ್ಯಾಸರ ಮಹಾಭಾರತದ ರಚನೆ ಇಲ್ಲಿಯೇ ಕುಳಿತು ಮಾಡಿದರೆಂಬುದು, ಪುರಾಣದ ಕಥೆ. ವಿಘ್ನೇಶ್ವರನನ್ನು ಕಥೆ ದಾಖಲಿಸೆಂದು ಕೇಳಿದಾಗ, ಮಧ್ಯೆ ಎಲ್ಲೂ ನಿಲ್ಲಿಸದೆ ಒಂದೇ ಸಮನೆ ಹೇಳಿದರೆ ಮಾತ್ರ ದಾಖಲಿಸುತ್ತೇನೆ, ನಿಲ್ಲಿಸಿದರೆ ನಾನೂ ನಿಲ್ಲಿಸಿಬಿಡುತ್ತೇನೆಂಬ ಸವಾಲು ಶ್ರೀ ವೇದವ್ಯಾಸರಿಗೆ, ಒಡ್ಡಿದಾಗ, ಅವರು ಒಪ್ಪಿಕೊಂಡು, ಕಥೆ ಹೇಳಲು ಶುರು ಮಾಡಿದರಂತೆ. ಈ ವ್ಯಾಸರ ಗುಹೆ ಸುಮಾರು ೫,೧೦೦ ವರ್ಷಗಳಷ್ಟು ಹಳೆಯದು ಇರುವ ಜಾಗ ಹಾಗೂ ಗಣೇಶನ ಗುಹೆ ಇರುವ ಜಾಗ ಎರಡೂ ತೀರಾ ಹತ್ತಿರ ಏನಿಲ್ಲ..... ಮಹಾಭಾರತದ ದಾಖಲಾತಿ ಶುರುವಾಗಿ ನಿರ್ವಿಘ್ನವಾಗಿ ಮುಂದುವರೆಯುತ್ತಿರುವಾಗ, ಮಧ್ಯದಲ್ಲಿ, ಸರಸ್ವತಿ ಭೋರ್ಗರೆಯಲಾರಂಭಿಸುತ್ತಾಳೆ. ಇದರಿಂದ ಸಿಟ್ಟಿಗೆದ್ದ ವ್ಯಾಸರು, ನೀನು ಗುಪ್ತಗಾಮಿನಿಯಾಗು ಎಂದು ಶಾಪಕೊಟ್ಟರಂತೆ. ಆದ್ದರಿಂದ, ನಾವು ಇಲ್ಲಿ, ಸರಸ್ವತಿಯ ಉಗಮಸ್ಥಾನ ಎಂದು ಚಿಕ್ಕದಾಗಿದ್ದರೂ, ಆರ್ಭಟಿಸುವ, ಸರಸ್ವತಿಯನ್ನು ನೋಡಬಹುದೇ ಹೊರತು, ಅಲ್ಲಿಂದ ಮುಂದೆ ಅವಳ ದಾರಿ ನಮಗೆ ಕಾಣಿಸುವುದಿಲ್ಲ. ಈ ವ್ಯಾಸ ಗುಹೆಯನ್ನು, ಒಂದೆರಡು ವರ್ಷಗಳ ಹಿಂದಷ್ಟೇ, ಚೆನ್ನೈ ನ ವ್ಯಾಪಾರಿಯೊಬ್ಬರು, ಮೂಲ ರೂಪಕ್ಕೆ ಏನೇನೂ ಧಕ್ಕೆ ಬರದಂತೆ, ಬಂಡೆಗಳ ಮಧ್ಯದ ಜಾಗಗಳನ್ನು ತುಂಬಿಸಿ, ಪೂರ್ಣ ಗುಹೆಯನ್ನಾಗಿ ಮಾರ್ಪಡಿಸಿದ್ದಾರೆ ಮತ್ತು ಶ್ರೀ ವೇದವ್ಯಾಸರ ದೊಡ್ಡದಾದ ಮೂರ್ತಿಯನ್ನೂ ಪ್ರತಿಷ್ಠಾಪಿಸಿದ್ದಾರೆ. ಜೊತೆಗೆ ಮುಂಚೆ ಇದ್ದ ಚಿಕ್ಕ ಮೂರ್ತಿಯೂ ಇದೆ. ಗುಹೆಯ ಹೊರಗಡೆಯ ಬಂಡೆಯ ಮೇಲೆ ನಮ್ಮ ಬರೆಯುವ ಪುಸ್ತಕಳಲ್ಲಿ ಗೆರೆಗಳನ್ನು ಹಾಕಿದಂತೆ ಕಾಣುತ್ತದೆ. ಅವರು ಪ್ರಪಂಚಕ್ಕೇ ಗುರುಗಳು, ಆದ್ದರಿಂದ ಅವರ ಗುಹೆ ವಿದ್ಯೆಯ ಅಥವಾ ಪುಸ್ತಕದ ಸ್ವರೂಪ ಎಂಬಂತೆ ಗುಹೆಯ ಹೊರಗಿನ ಬಂಡೆ ಹಾಗೆ ಗೆರೆಗಳಂತೆ, ಪ್ರಕೃತಿಯ ಮಾಡಲ್ಪಟ್ಟಿದೆಯೆಂಬ ಕಥೆ ಅಲ್ಲಿಯ ಸ್ಥಳೀಯರು ಹೇಳುತ್ತಾರೆ. ಗುಹೆಯ ಒಳ ಹೊಕ್ಕು ಕುಳಿತರೆ, ತಣ್ಣಗಿರುತ್ತದೆ, ಅಲ್ಲಿ ಕುಳಿತಿರುವ ಪೂಜಾರಿಗಳು ನಮಗೆ ತೀರ್ಥ ಕೊಟ್ಟು, ಕಥೆಯನ್ನೂ ಹೇಳುತ್ತಾರೆ. ತಲೆಬಗ್ಗಿಸಿಕೊಂಡು ಒಳಗೆ ನಡೆಯಬೇಕು. ವ್ಯಾಸರ ಮೂರ್ತಿ ತುಂಬಾ ಚೆನ್ನಾಗಿದೆ. ಇದಕ್ಕಿಂತ ಸ್ವಲ್ಪ ಕೆಳಗೆ ಇರುವ ಗಣೇಶನ ಗುಡಿ ನೆಲ ತುಂಬಾ ತಣ್ಣಗಿರುವುದರಿಂದ, ಇಲ್ಲಿ, ದಾರದಲ್ಲಿ ಕೈಯಲ್ಲೇ ತಯಾರಿಸಿದ ಕುಳಿತುಕೊಳ್ಳುವ ಚಿಕ್ಕ ಚಿಕ್ಕ ಚಾಪೆಗಳಂತಹುದನ್ನು ಹಾಕಿರುತ್ತಾರೆ.

ನಾವು ಹಾಗೇ ಮುಂದುವರೆದು ಅಲ್ಲಿಂದ "ಭೀಮನ ಕಲ್ಲು" ನೋಡಲು ಬಂದೆವು. ಇದಕ್ಕೂ ಮಹಾಭಾರತಕ್ಕೂ ಸಂಬಂಧವಿದೆಯೆಂದು ಇಲ್ಲಿನವರು ಒಂದು ಕಥೆಯನ್ನು ಹೇಳುತ್ತಾರೆ. ಕುರುಕ್ಷೇತ್ರ ಯುದ್ಧದ ನಂತರ, ಪಾಂಡವರು ತಮ್ಮ ಪಾಪ ಪರಿಹಾರಕ್ಕಾಗಿ ಶಿವನನ್ನು ಹಿಂಬಾಲಿಸುತ್ತಾ ಬರುತ್ತಿದ್ದಾಗ, ಈ ಸರಸ್ವತಿ ನದಿಯನ್ನು ದಾಟಬೇಕಾದ ಪ್ರಸಂಗ ಬರುತ್ತದೆ. ಸರಸ್ವತಿ ಸ್ತ್ರೀ ಮತ್ತು ಅವಳ ಮಡಿಲಲ್ಲಿ ಪಾದ ಊರುವ ಪಾಪ ಬೇಡವೆಂದು, ಪಾಂಡವರು ಯೋಚಿಸಿದಾಗ, ಭೀಮ ಅಲ್ಲಿದ್ದ ದೊಡ್ಡದಾದ ಒಂದು ಬಂಡೆಯನ್ನು ಎತ್ತಿ ಸರಸ್ವತಿಗೆ ಅಡ್ಡವಾಗಿ ನಿಲ್ಲಿಸಿದನಂತೆ. ಭೀಮನ ಕೈ ಬೆರಳುಗಳ ಗುರುತುಗಳು ಎಂದು, ಚಿಕ್ಕ ಸೇತುವೆಯಂತೆ ನಿಂತಿರುವ ಒಂದು ದೊಡ್ಡದಾದ ಬಂಡೆಯನ್ನು ತೋರಿಸುತ್ತಾರೆ. ಈ ಸೇತುವೆ ದಾಟಿ ಹೋದರೆ ನಮಗೆ ಇಲ್ಲಿ ಇನ್ನೊಂದು ಅಂಗಡಿ ಸಿಗುತ್ತದೆ. ಇದು ಭಾರತದ ಕೊನೆಯ ಅಂಗಡಿ ಎಂಬ ಫಲಕ ಹೊತ್ತಿದೆ. ಇಲ್ಲಿಯೇ ಸರಸ್ವತಿ ಮಾತೆಯ ಚಿಕ್ಕ ಗುಡಿಯೂ ಇದೆ. ಇಲ್ಲಿಂದ ನಾವು ತಡೆಗೋಡೆಯಂತೆ ಕಟ್ಟಿರುವ ಚಿಕ್ಕದಾದ ಸೇತುವೆಯನ್ನು ಹತ್ತಿ ಬಗ್ಗಿ ನೋಡಿದರೆ ನಮಗೆ ಆರ್ಭಟಿಸುತ್ತಿರುವ ಸರಸ್ವತಿಯ ಕಾಣಸಿಗುತ್ತಾಳೆ. ಇಲ್ಲಿಂದ ಮುಂದೆ ಹೋಗಲು ದಾರಿಯು ಇಲ್ಲ ಮತ್ತು ಅನುಮತಿಯೂ ಇಲ್ಲ. ಇಲ್ಲಿ ನಿಂತು ಸುತ್ತಲೂ ನೋಡಿದರೆ, ಬರೀ ಬೆಟ್ಟ ಗುಡ್ಡಗಳ ಸಾಲು ಸಾಲು.... ಒಂದರ ಹಿಂದೆ ಒಂದರ ಥರ ಕಾಣುವ ಅನೇಕ ಸಾಲುಗಳು - ಹಲವು ಹಸಿರು ತೇಪೆಗಳ ಸೌಂದರ್ಯ ದೇವತೆಗಳಾದರೆ, ಕೆಲವು ಕಂದು ಬಣ್ಣದ ಬೋಳು ಗುಡ್ಡಗಳು. ಕೆಳಗೆ ದೂರದಲ್ಲಿ ಕಾಣುವ ನದಿಯ ದೊಡ್ಡ ಪಾತ್ರದಲ್ಲಿ, ಸಣ್ಣದಾದ, ತೆಳ್ಳಗಿನ ಬಳುಕುವ ಬಳ್ಳಿಯಂತೆ ನದಿ...... ಒಟ್ಟಿನಲ್ಲಿ ವರ್ಣಿಸಲಸಾಧ್ಯವಾದ ಸೌಂದರ್ಯ ನಮ್ಮ ಮಾತು ಮರೆಸಿ ಮುಗ್ದರನ್ನಾಗಿಸುತ್ತದೆ.

ನಾವು ಮತ್ತೆ ಅಲ್ಲಿಂದ ೨ ಕಿ.ಮೀ ವಾಪಸ್ಸು ಬಂದು, ನಮ್ಮ ಗಾಡಿ ಹುಡುಕಿ ಹೊರಟೆವು. ದಾರಿಯಲ್ಲಿ ೧೪ ಕಿ.ಮೀ ಮೇಲೆ ಹತ್ತಿದರೆ, ನಾವು ಭಾರತದ ಸ್ವಿಟ್ಝರ್ ಲ್ಯಾಂಡ್ ಎಂದು ಕರೆಯಲ್ಪಡುವ "ಔಲಿ" ಎಂಬ ಗಿರಿಧಾಮ ನೋಡಲು ಹೋದೆವು. ಇಲ್ಲಿ ಕೆಳಗಿನಿಂದ ಮೇಲೆ ಹೋಗಲು ಕೇಬಲ್ ಕಾರ್ ನ ವ್ಯವಸ್ಥೆ ಇದೆ. ಮೇಲೆ ಇನ್ನೂ ಕಟ್ಟಡ ನಿರ್ಮಾಣದ ಕೆಲಸ ನಡೆಯುತ್ತಿರುವುದರಿಂದ, ಕೇಬಲ್ ವ್ಯವಸ್ಥೆ ಸ್ಥಗಿತಗೊಂಡಿತ್ತು. ನಾವು ನಮ್ಮ ಇನೋವಾದಲ್ಲೇ ಹೋಗಿದ್ದೆವು. ಹಚ್ಚ ಹಸಿರು ಎಲ್ಲೆಲ್ಲೂ ಕಂಗೊಳಿಸತ್ತೆ ಮತ್ತು ಎತ್ತರದ ಗಿರಿ ಶಿಖರದಲ್ಲಿ, ಹೋಟೆಲ್ ಮತ್ತು ತಂಗಲು ಚಿಕ್ಕ ಚಿಕ್ಕ ಗುಡಿಸಲುಗಳಂತೆ ಕಟ್ಟಿರುವ ವ್ಯವಸ್ಥೆ ಇದೆ. ಕೆಲಸಗಳು ಇನ್ನೂ ನಡೆಯುತ್ತಿರುವುದರಿಂದ, ನಮಗೆ ತಿನ್ನಲು ಏನೂ ಸಿಗಲಿಲ್ಲ. ಬರಿಯ ಟೀ ಕುಡಿದು, ಅನೇಕ ಚಿತ್ರಗಳನ್ನು ತೆಗೆದುಕೊಂಡು, ಕೆಳಗಿಳಿದು ಬಂದೆವು. ಪ್ರಕೃತಿಪ್ರಿಯರಿಗೆ ಅತ್ಯಂತ ಇಷ್ಟವಾಗುವಂತಹ ಜಾಗ. ನಿಶ್ಯಬ್ದ ವಾತಾವರಣ, ಹಸಿರ ಹಿನ್ನೆಲೆಯಲ್ಲಿ ಬಣ್ಣ ಬಣ್ಣದ ಹೂವುಗಳು ಮನಸ್ಸನ್ನು ಉಲ್ಲಾಸಗೊಳಿಸುತ್ತದೆ.

ಇಲ್ಲಿಗೆ ನಮ್ಮ ಚಾರ್ ಧಾಮ್ ನ ಯಾತ್ರೆ ಮುಗಿದು, ನಮ್ಮ ಪ್ರಯಾಣ ವಾಪಸ್ಸು ಪೀಪಲ್ ಕೋಟಿಯ ಕಡೆ ಸಾಗಿತು. ದಾರಿಯುದ್ದಕ್ಕೂ ನಮ್ಮನ್ನು ಅಚ್ಚರಿಗೊಳಿಸುವ ವಿವಿಧ ಆಕಾರದ ಬೆಟ್ಟಗಳು, ನಮ್ಮನ್ನು ಮಾತು ಮರೆತು ನೋಟ ಇನೋವಾದ ಕಿಟಕಿಯಿಂದ ಹೊರಗೇ ಇರುವಂತೆ ಮಾಡಿತು. ವಿಚಿತ್ರ ವಿಚಿತ್ರವಾದ ಆಕಾರಗಳು ನಮ್ಮನ್ನು ಒಂದು ಕಲ್ಪನಾ ಲೋಕಕ್ಕೇ ಕರೆದುಕೊಂಡು ಹೋಗಿ ಬಿಟ್ಟಿತ್ತು. ಒಂದೊಂದು ಕೋನದಲ್ಲಿ, ಒಂದೊಂದು ಆಕಾರ ಕಾಣುವ ಬೃಹತ್ತ್ ಬೆಟ್ಟಗಳು, ನಮ್ಮ ಒಳಗೆಲ್ಲೋ ಅಡಗಿ ಕುಳಿತಿರುವ ಕಲಾವಿದನನ್ನು ಹೊಡೆದೆಬ್ಬಿಸಿ ಬಿಡುತ್ತವೆ. ಒಟ್ಟಿನಲ್ಲಿ, ನಾವೆಲ್ಲರೂ ಮಾತಿಲ್ಲದೆ, ಮೌನಕ್ಕೆ ಶರಣು ಹೋಗಿ, ಬರೀ ನಮ್ಮ ಕಣ್ಣಿಗೂ ನಮ್ಮ ಕ್ಯಾಮೆರಾದ ಕಣ್ಣಿಗೂ ಕೆಲಸ ಕೊಟ್ಟೆವು. ಸಾಯಂಕಾಲ ಢಾಬಾದಲ್ಲಿ ರೊಟ್ಟಿ ತಿಂದು, ಬೆಳಿಗ್ಗೆ ಹರಿದ್ವಾರಕ್ಕೆ ಹೊರಡುವುದೆಂದು, ಇಲ್ಲಿಯ ತನಕ ಆದ ಅನುಭವಗಳನ್ನು ಮೆಲುಕುತ್ತಾ ಮಲಗಿದೆವು.
http://www.vismayanagari.com/node/4779

ಲೇಖಕರು

shamala

ನಾನೊಬ್ಬ ಕನ್ನಡತಿ, ಭಾಷೆಯ ಬಗ್ಗೆ ಅತಿಯಾದ ಅಭಿಮಾನ ಉಳ್ಳವಳು. ನನ್ನ ಪರಿಚಯಕ್ಕೆ ಇಷ್ಟೇ ಸಾಕು.
http://antharangadamaathugalu.blogspot.com/

ಅನಿಸಿಕೆಗಳು

N PRAVEEN KUMAR ಗುರು, 02/02/2012 - 19:56

ಉತ್ತಮವಾದ ಲೇಖನ....ತಮ್ಮ ಅನುಭವದ ಪ್ರವಾಸಿ ಕಥನದೊಂದಿಗೆ ನಮ್ಮನ್ನು ಜೊತೆಗೆ ಕರೆದೊಯ್ದಿದ್ದಿರಿ...! ನಾನಂತು ಇದನ್ನು ಅನುಭವಿಸಿದ್ದೆನೆ...! ತಮ್ಮ ಈ ಲೇಖನ ಮುಂದೊಂದು ದಿನ ನನಗು ಸಹಕಾರಿಯಾಗಲಿದೆ..! ನಿಮಗೆ ಧನ್ಯವಾದಗಳು...! 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.