ಮರೆಯಾಗುತ್ತಿರುವ ಕನ್ನಡ ಶಿಶು ಗೀತೆಗಳು....
ಮಗಳಿಗೆ ಎರಡುವರೆ ವರ್ಷವಾಗುತ್ತಿದ್ದಂತೆ ಮಡದಿಯ ಗೊಣಗಾಟದ ಅವಧಿ ದಿನದಿಂದ ದಿನಕ್ಕೆ ಹೆಚ್ಚುವ ನಿತ್ಯಬಳಕೆಯ ವಸ್ತುಗಳಂತೆ ಹೆಚ್ಚುತ್ತಿತ್ತು. ಕಡೆಗೊಂದು ದಿನ
"ನೋಡಮ್ಮ ನಂಗೆ ಪ್ರೀ ಸ್ಕೂಲ್ ಗೋಸ್ಕರ ೫೦-೬೦ ಸಾವಿರ ಕಟ್ಟೋಕೆ ಇಷ್ಟವಿಲ್ಲ. ಇಲ್ಲೇ ಮನೆ ಹತ್ರ ಇರೋ ಸ್ಕೂಲ್ ಗೆ ಸೇರಿಸ್ತೀನಿ, ಆಗುತ್ತಾ?'' ಅಂದೆ.
"ಓ ಕೆ, ಆದ್ರೆ ೧ನೇ ಕ್ಲಾಸ್ ಗೆ ಸೆಂಟ್ರಲ್ ಸ್ಕೂಲೇ ಬೇಕು ಏಕೆಂದರೆ ನಮ್ಮ ಮಕ್ಕಳಿಗೆ ನಾವ್ ಕೊಡೋಕಾಗೋ ಆಸ್ತಿ ಅಂದ್ರೆ ಉತ್ತಮ ವಿದ್ಯಬ್ಯಾಸ ಅಷ್ಟೇ" ಅಂತ ತೀರ್ಪಿತ್ತಳು.
"ಅಲ್ವೇ ನೀನು ನಾನು ಇಬ್ರೂ ಗೌರ್ನಮೆಂಟ್ ಸ್ಕೂಲಲ್ಲೇ ಅಲ್ವಾ ಓದಿದ್ದು? ಏನಾಗಿದೆ ನಮಗೆ ಇವಾಗ? ಅದೂ ಅಲ್ದೆ ಅಷ್ಟು ದುಡ್ಡು ಮೇಲಿಂದ ಉದುರುತ್ತಾ?'' ವಾದ ಮುಂದಿಟ್ಟೆ.. ಮಡದಿಯ ಮೂಗಿನ ತುದಿಯ ಕೋಪ ನಾಲಿಗೆಗೆ ಬಂತು
"ರ್ರೀ ಮೂಲೆಗ್ಹಾಕ್ರಿ ನಿಮ್ಮ ಕಂತೆ ಪುರಾಣನ, ಯಾವ್ಯಾವ್ದುಕ್ಕೋ ಸುಮ್ ಸುಮ್ಮನೆ ಸಾಲ ಮಾಡೋಕೆ ಆಗುತ್ತೆ, ನಂ ಮಗು ಭವಿಷ್ಯಕ್ಕೆ ಮಾಡಿ ಕಷ್ಟಪಟ್ಟು ಸಾಲತೀರ್ಸಿದ್ರೇ ತಪ್ಪೇನೂ ಇಲ್ಲ, ಸುಮ್ಮನೆ ಏನೇನೋ ಯೋಚಿಸಿ ಯಾರಾರ್ದೋ ಮಾತು ಕೇಳಿ ನನ್ ತಲೆ ತಿನ್ ಬೇಡಿ. ಹೇಳ್ದಷ್ಟ್ ಮಾಡ್ರೀ"
ಬಹುಶಃ ಈ ರೀತಿಯ ಸಂಭಾಷಣೆಗಳು ಎಲ್ಲರ ಮನೆಯಲ್ಲೂ ಸರ್ವೇ ಸಾಮಾನ್ಯ. ಕೈಯಲ್ಲಿ ಕಾಸಿದ್ದವರು ಚಿಂತೆಯಿಲ್ಲದೆ ದೊಡ್ಡ ದೊಡ್ಡ ಶಾಲೆ ಸೇರಿಸುತ್ತಾರೆ, ಕಾಸಿಲ್ಲದ ನಮ್ಮಂತವರು ಅಷ್ಟು ದೊಡ್ಡ ಶಾಲೆ ಅಲ್ಲದಿದ್ದರೂ ಸುಮಾರಾಗಿರೊ ಆಂಗ್ಲಶಾಲೆಗೆ ಸೇರಿಸಿ ಮಕ್ಕಳ ಭವಿಷ್ಯದ ಬಗ್ಗೆ ದೊಡ್ಡ ದೊಡ್ಡ ಕನಸು ಕಾಣುತ್ತಾ ಇರುತ್ತೇವೆ. ನಾನು ಸಹ ಹಾಗೆಯೇ ಮನೆಯ ಹತ್ತಿರವಿದ್ದ ಶಾಲೆಗೆ ಮಗಳನ್ನು ದಾಖಲಿಸಿದೆ, ಅವಳ ಪುಸ್ತಕ ಫೀಜು ಅದು ಇದಿ ಅಂತ ಒಂದಷ್ಟು ತೆತ್ತು ಮನೆಗೆ ಬಂದೆ. ೨ ದಿನ ಕಳೆಯಿತು ಮೂರನೇ ದಿನಕ್ಕೆ "ತಿಂಕಳ್ ತಿಂಕಳ್ ಇಟ್ಸು ತಾರ್" (Twinkle twinkle little staar) ಅನ್ನುವುದನ್ನು ನನ್ನ ಮಗಳ ಬಾಯಿಂದ ಕೇಳಿ ನಮಗೆಲ್ಲಾ ಆನಂದವೋ ಆನಂದ..,ಸ್ವರ್ಗ ಒಂದೇ ಗೇಣು.....!!!!!!! ಖುಷಿಯಾಗಿ ಅವಳಿಗೆ ಕೊಟ್ಟಿದ್ದ ಪುಸ್ತಕಗಳನ್ನು ನೋಡಿದೆ... ಏನಾಶ್ಚರ್ಯ!!! ಕೊಟ್ಟಿದ್ದ ೯ ಪುಸ್ತಕಗಳಲ್ಲಿ ಕನ್ನಡವರ್ಣಮಾಲೆಯ ಒಂದೇ ಒಂದು ಪುಸ್ತಕ ಬಿಟ್ಟ್ರೆ ಮಿಕ್ಕೆಲ್ಲವೂ ಆಂಗ್ಲಭಾಶೆಯ ಪುಸ್ತಕಗಳು!! ಕಡೇ ಪಕ್ಷ ಮಕ್ಕಳ ಶಿಶು ಗೀತೆಗಳನ್ನು ತಿಳಿಸಿಕೊಡುವ ಪುಸ್ತಕವೂ ಸಹ ಇಂಗ್ಲೀಷಿನದ್ದೇ..!!
ನಮಗೆ ಇಂದಿನ ಸ್ಪರ್ಧಾಜಗತ್ತಿಗೆ ಇಂಗ್ಲೀಷ್ ನ ಅವಶ್ಯಕಥೆ ಇದೆ ನಿಜ, ಆದರೆ ನಾವು ಎಷ್ಟೇ ದೊಡ್ಡವರಾದರೂ ಬದುಕಿರುವಾಗ ಮತ್ತು ನಂತರ ನಮ್ಮನ್ನು ಜಗತ್ತು ಗುರುತಿಸುವುದು ನಮ್ಮ ಹುಟ್ಟಿನ ನೆಲೆಯಿಂದಲೇ ಅಲ್ಲವೇ? ನಮ್ಮ ಮೂಲ ನೆಲೆಯಾದ ಕನ್ನಡವನ್ನು ಎತ್ತರಕ್ಕೆ ತಲುಪಿದಾಗ ಮರೆತುಹೋದರೆ ನಾವು ಕನ್ನಡಿಗರಾಗಿ ಹುಟ್ಟಿ ಸಾರ್ಥಕವೇನು ಅಲ್ಲವೇ?
ಕೇವಲ ಒಂದೇ ಒಂದು ಪೀಳಿಗೆಯಿಂದ ಪೀಳಿಗೆಗೆ ಎಂತಹ ವ್ಯತ್ಯಾಸ!!!. ಮಹಾನ್ ಕವಿಗಳಾದ ಶ್ರೀ ಜಿ.ಪಿ.ರಾಜರತ್ನಂ, ಕಯ್ಯಾರ ಕಿಯ್ಣಣ್ಣ ರೈ ಮತ್ತಿತರ ಮಹಾನ್ ಕವಿಗಳು ಮಕ್ಕಳಿಗೆಂದೇ ಬರೆದು ಪ್ರಸಿದ್ದಿ ಪಡೆದಿದ್ದ ಜನಪ್ರಿಯ ಶಿಶು ಗೀತೆಗಳನ್ನು ಕಲಿಯುವ ಅವಕಾಶದಿಂದ ನಮ್ಮಮಕ್ಕಳು ವಂಚಿತರಾಗುತ್ತಿದ್ದಾರೆ ಎನಿಸಿತು. ಬಹುಶಃ ಎಷ್ಟೋ ತಂದೇತಾಯಂದಿರು ಈ ಬಗ್ಗೆ ಯೋಚಿಸುವುದಿಲ್ಲವೇನೋ? ಅಥವಾ ನಮ್ಮ ಶಿಕ್ಷಣ ವ್ಯವಸ್ಥೆ ಅದಕ್ಕೆ ಸ್ಪಂದಿಸುತ್ತಿಲ್ಲವೇನೋ? ಅಥವಾ ಆಧುನಿಕ ಜಗತ್ತಿನಲ್ಲಿ ಸ್ಪರ್ಧಿಸಲು ಕನ್ನಡಬೇಕಾಗಿಲ್ಲವೆಂಬ ಸಿನಿಕತನವೋ? ಅಥವಾ ಈ ಎಲ್ಲಾ ಕಾರಣಗಳು ಇರಬಹುದು. ನಂತರ ನನ್ನ ಮಗಳನ್ನು ಕರೆದು
ಶ್ರೀ ಜಿ.ಪಿ.ರಾಜರತ್ನಂ ರವರ 'ನಾಯಿಮರಿ ನಾಯಿಮರಿ ತಿಂಡಿ ಬೇಕೇ?' ಹಾಡು ಹೇಳಿಕೊಟ್ಟೆ "ತಿಂಕಳ್ ತಿಂಕಳ್ " ಗಿಂತ ಚೆನ್ನಾಗಿ ಹೇಳತೊಡಗಿದಳು. ಅವಳ ಜೊತೆ ನಾನು ಮಗುವಾದೆ. ಮುಂದಿನ ಭಾನುವಾರ ಯಾವುದೋ ಪುಸ್ತಕದ ಹುಡುಕಾಟಕ್ಕಾಗಿ 'ಸ್ವಪ್ನ' ಪುಸ್ತಕಮಳಿಗೆಗೆ ಹೋದಾಗ ಆಕಸ್ಮಿಕವಾಗಿ ಮಕ್ಕಳಹಾಡುಗಳ "ಚಿಣ್ಣರ ಚಿಲಿಪಿಲಿ" ಮತ್ತು "ಚಿಣ್ಣರ ಮುತ್ತಿನ ಹಾಡುಗಳು" ಎಂಬ ೨ ಸಿ.ಡಿ ಗಳನ್ನು (ತಯಾರಕರು Buzzers) ತಂದು ಮಗಳಿಗೆ ತೋರಿಸಿದಾಗ ಬಹಳ ಖುಶಿಪಟ್ಟಳು. ನಾನು ನನ್ನ ಬಾಲ್ಯದಲ್ಲಿ ಕಲಿತ ಎಷ್ಟೋ ಹಾಡುಗಳನ್ನು ಅವಳಿಗೂ ಕಲಿಸಿದ ಸಂತ್ರುಪ್ತಿ ನನಗೂ ಉಂಟಾಯ್ತು. ಇತ್ತೀಚೆಗೆ ಅವಳ ಶಾಲೆಯಲ್ಲಿ ನಡೆದ ಶಿಶುಗೀತೆಯ ಸ್ಪರ್ಧೆಯಲ್ಲಿ (ಅವರ ಶಾಲೆಯ ಪ್ರಕಾರ Rhymes Compitetion) ಅದೇ 'ನಾಯಿಮರಿ ನಾಯಿಮರಿ' ಗೀತೆಹಾಡಿ ಎಲ್ಲರ ಮೆಚ್ಚುಗೆ ಮತ್ತು ಪ್ರಶಂಸೆಗಳಿಸಿದಳು ಅಷ್ಟೇ ಅಲ್ಲ ಅವಳ ಟೀಚರ್ ನನ್ನಿಂದ ಆ ಸಿ.ಡಿಗಳನ್ನು ಎರವಲು ಪಡೆದು ಶಾಲೆಯಲ್ಲೂ ಸಹ English Rhymes ನ ಜೊತೆ ಬಣ್ಣದ ತಗಡಿನ ತುತ್ತೂರಿಯನ್ನೂ ಸಹ ಕಲಿಸುತ್ತಿದ್ದಾರೆ. ಅದರ ಸಾಹಿತ್ಯದ ಸಾಲುಗಳನ್ನು ಒಮ್ಮೆ ನೋಡಿ....
ಬಣ್ಣದ ತಗಡಿನ ತುತ್ತೂರಿ
ಕಾಸಿಗೆ ಕೊಂಡನು ಕಸ್ತೂರಿ
ಸರಿಗಮಪದನಿಸ ಊದಿದನು
ಸನಿದಪಮಗರಿಸ ಊದಿದನು
ತನಗೆ ತುತ್ತೂರಿ ಇದೆಯೆಂದು ಬೇರಾರಿಗು ಅದು ಇಲ್ಲೆಂದ
ತುತ್ತುರಿ ಊದಿದ ಕೊಳದ ಬಳಿ ಕಸ್ತೂರಿ ನಡೆದನು ಬೀದಿಯಲಿ
ಜಂಬದ ಕೋಳಿಯ ರೀತಿಯಲಿ
ಜಾರಿತು ನೀರಿಗೆ ತುತ್ತೂರಿ ಗಂಟಲು ಕಟ್ಟಿತು ನೀರೂರಿ
ಸರಿಗಮ ಊದಲು ನೋಡಿದನು ಗಗಗಗ ಸದ್ದನು ಮಾಡಿದನು
ಬಣ್ಣವು ನೀರಿನ ಪಾಲಾಯ್ತು ಜಂಬದಕೋಳಿಗೆ ಗೋಳಾಯ್ತು
ಖಂಡಿತ ನೀವು ಸಹ ನಿಮ್ಮ ಬಾಲ್ಯಕ್ಕೆ ಹೊರಟುಹೋದ್ರಿ ಅನ್ಸುತ್ತೆ.. ನಿಮ್ಮ ಮಕ್ಕಳಿಗೂ ಕಲಿಸುತ್ತಿರುತ್ತೀರ ಅಂತ ಗೊತ್ತು ಅಕಸ್ಮಾತ್ ಮರೆತಿದ್ದರೆ ಕಲಿಸಿನೋಡಿ ಎಷ್ಟು ಆನಂದ ಸಿಗುತ್ತೆ ಅಂತ...
ಸಾಲುಗಳು
- Add new comment
- 5845 views
ಅನಿಸಿಕೆಗಳು
Re: ಮರೆಯಾಗುತ್ತಿರುವ ಕನ್ನಡ ಶಿಶುಗೀತೆಗಳು....
ಪ್ರಿಯ ಉಮಾಶಂಕರ್,
"ಚಿಣ್ಣರ ಚಿಲಿಪಿಲಿ" ಮತ್ತು "ಚಿಣ್ಣರ ಮುತ್ತಿನ ಹಾಡುಗಳು" ಸಿಡಿ ನಾನೂ ತಂದಿದ್ದೆ. ತುಂಬಾ ಚೆನ್ನಾಗಿದೆ. ಅದಲ್ಲದೆ ಬಿ.ಆರ್.ಛಾಯಾ ಹಾಡಿರೋ ಅನೇಕ ಶಿಶು ಗೀತೆಗಳು ಸಪ್ನಾದಲ್ಲಿ ಸಿಗುತ್ತವೆ. ಕೆಲವು ಪದ್ಯಗಳಂತೂ ತುಂಬಾನೇ ಚೆನ್ನಾಗಿವೆ.
Re: ಮರೆಯಾಗುತ್ತಿರುವ ಕನ್ನಡ ಶಿಶುಗೀತೆಗಳು....
ಹೌದು ಕೆ.ಎಲ್ಕೆ ಯವರೆ ಬಿ ಆರ್ ಛಾಯಾ ರವರ ಶಿಶು ಗೀತೆಗಳನ್ನು ಚಂದನ ವಾಹಿನಿಯಲ್ಲಿ ನೋಡಿದ್ದೆ, ಅದರ ಸಿಡಿ ಗಳು ಸಿಗುತ್ತವೆಂಬ ಉತ್ತಮ ಮಾಹಿತಿಯನ್ನು ನೀಡಿದ್ದಕ್ಕೆ ಅನಂತಾನಂತ ಧನ್ಯವಾದಗಳು.. ಅವುಗಳನ್ನೂ ಸಹ ತರುತ್ತೇನೆ.
Re: ಮರೆಯಾಗುತ್ತಿರುವ ಕನ್ನಡ ಶಿಶುಗೀತೆಗಳು....
ಉಮಾಶಂಕರ್ ರವರೆ,
ಕೇವಲ ಲಕ್ಷ-ಲಕ್ಷ ಖರ್ಚು ಮಾಡಿ ಮಕ್ಕಳನ್ನು ಶಾಲೆಗೆ ಸೇರಿಸುವ ಮಂದಿ ಅಲ್ಲಿ ತಮ್ಮ ಮಕ್ಕಳು ಏನು ಕಲಿಯುತ್ತಾರೆ ಎಂಬ ಕನಿಷ್ಠ ತಿಳುವಳಿಕೆ ಇಲ್ಲದೆ ಕೇವಲ ಸ್ವ-ಪ್ರತಿಷ್ಠೆ ಗೆ "ನಾ ಅಷ್ಟು ದೊಡ್ಡ ಸ್ಕೂಲಿಗೆ ಸೇರಿಸಿದೆ....."/ "ನಮ್ಮ ಮಗು ಇಂತಹ ಸ್ಕೂಲಿನಲ್ಲಿ ಓದುತ್ತಿದೆ..." ಎಂಬ ಒಣಜಂಭ ತೋರಿಸುವುದು ಈಗೀಗ ಹೆಚ್ಚಾಗುತ್ತಿದೆ. ಅದಕ್ಕೆ ಏನೋ ನಮ್ಮಂತೆ "ಅಪ್ಪ/ಅಮ್ಮ" ಅನ್ನುವ ಬದಲು ಈಗಲೇ "ಮಮ್ಮಿ/ಡ್ಯಾಡಿ" ಗಳೇ ಜಾಸ್ತಿಯಗಿದೆ....!!. ನಿಮ್ಮ ಲೇಖನ ಅಂತಹ ಪೋಷಕರಿಗೆ ಕಣ್ಣು ತೆರೆಸಿ ವಾಸ್ತವಿಕೆ ವಿಷಯ ತಿಳಿಸಲಿ ಎಂದು ಅಶಿಸುವ.... ನಿಮ್ಮ ವಿನಯ್
Re: ಮರೆಯಾಗುತ್ತಿರುವ ಕನ್ನಡ ಶಿಶುಗೀತೆಗಳು....
ನಿಮ್ಮ ಆಶಯಕ್ಕೆ ನನ್ನ ಸಂಪೂರ್ಣ ಸಹಮತವಿದೆ ವಿನಯ್, ನಿಮ್ಮ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು... :)
Re: ಮರೆಯಾಗುತ್ತಿರುವ ಕನ್ನಡ ಶಿಶುಗೀತೆಗಳು....
ಉಮಾಶಂಕರವರೆ ಲೇಖನ ತುಂಬಾ ಚೆನ್ನಾಗಿದೆ ಕರ್ನಾಟಕದಲ್ಲಿ ಶಿಕ್ಷಣ ವ್ಯನಸ್ಥೆಯಲ್ಲಿ ಆಗ ಬೇಕಾದ ಬದಲಾವಣೆಯನ್ನು ಕನ್ನಡ ಜನತೆಯ ಮನ ಮುಟ್ಟುವಂತೆ ಹೇಳಿದಿರಿ
Re: ಮರೆಯಾಗುತ್ತಿರುವ ಕನ್ನಡ ಶಿಶುಗೀತೆಗಳು....
ಧನ್ಯವಾದಗಳು ಹರಿಪ್ರಸಾದ್ ರವರೆ :)
Re: ಮರೆಯಾಗುತ್ತಿರುವ ಕನ್ನಡ ಶಿಶುಗೀತೆಗಳು....
ಚೆನ್ನಾಗಿದೆ ಉಮಾಶಂಕರ್ ಅವರೆ...
Re: ಮರೆಯಾಗುತ್ತಿರುವ ಕನ್ನಡ ಶಿಶುಗೀತೆಗಳು....
ಧನ್ಯವಾದಗಳು ಶೈಲಾ ರವರೆ
Re: ಮರೆಯಾಗುತ್ತಿರುವ ಕನ್ನಡ ಶಿಶುಗೀತೆಗಳು....
ಅರ್ಥವತ್ತಾದ ಶಿಶುಗೀತೆಗಳು, ಇಂಪಾದ ಹಾಡು ಮತ್ತು ಕನ್ನಡ ಸೊಗಡಿನ ಕಾರ್ಟೂನ್ ಗಳು ಈ ಕೊಂಡಿಯ ಮೂಲಕ ನಿಮ್ಮದಾಗಲಿ. ಮಕ್ಕಳಿಗೆ ತೋರಿಸಿ ನಲಿಸಿರಿ. ಮಕ್ಕಳು ಆನಂದತುಂದಿಲರಾಗುತ್ತಾರೆ. ದೊಡ್ಡವರಲ್ಲಿನ ಮಗು ಮನಸ್ಸು ಕೂಡ ಸಂತಸಪಡುತ್ತದೆ
http://www.youtube.com/profile_videos?user=chakrira&p=r
ದಯವಿಟ್ಟು ಎಲ್ಲಿಯಾದರೂ ಸಣ್ಣಾಕಿನಿ
ದಯವಿಟ್ಟು ಎಲ್ಲಿಯಾದರೂ ಸಣ್ಣಾಕಿನಿ ನಾ ಸಣ್ಣಾಕಿ, ಪುಟಾಣಿ ಬೆಲ್ಲಾ ನಾ ತಿನ್ನಾಕಿನಿ ಎಂಬ ಹಳೇಯ ಮಕ್ಕಳ ಹಾಡು ಸಿಗಬಹುದಾ?