Skip to main content

ಚಾರ್ ಧಾಮ್ ಪ್ರವಾಸ - ಪೀಪಲ್ ಕೋಟಿ

ಇಂದ shamala
ಬರೆದಿದ್ದುJune 26, 2009
5ಅನಿಸಿಕೆಗಳು

http://www.vismayanagari.com/node/4571

ಕೇದಾರದ ದಾರಿಯಲ್ಲಿ ನಾವು ಉಖಿ ಮಠ ಎಂಬ ಜಾಗ ನೋಡುತ್ತೇವೆ. ಇದು, ಕೇದಾರೇಶ್ವರನ ಛಳಿಗಾಲದ ತಂಗುದಾಣವಾಗಿರತ್ತೆ. ಮೇಲೆ ಕೇದಾರೇಶ್ವರನ ದೇವಸ್ಥಾನ ನರಕ ಚತುರ್ದಶಿಯ ದಿನ ಮುಚ್ಚಿದಾಗ, ಮತ್ತೆ, ಅಕ್ಷಯ ತೃತೀಯದ ದಿನ ತೆಗೆಯುವವರೆಗೆ, ಉಖಿ ಮಠದಲ್ಲಿ, ಕೇದಾರೇಶ್ವರನ ಪೂಜೆ ನಡೆಯುತ್ತದೆ. ಕೇದಾರದಲ್ಲಿ ಈಶ್ವರನು ಸದಾಶಿವನೆಂದು ಪೂಜಿಸಲ್ಪಡುತ್ತಾನೆ. ಬೆಳಗಿನ ಜಾವ ೪ ಘಂಟೆಗೆ ಮಾಡುವ ಪೂಜೆಗೆ ’ನಿರ್ವಾಣ ಪೂಜೆ’ ಎಂಬ ಹೆಸರಿದೆ. ಈ ಪೂಜೆಯಲ್ಲಿ, ಶಿವನನ್ನು ಪಿಂಡರೂಪಿಯಲ್ಲಿ, ಮೂಲ ಸ್ವರೂಪದಲ್ಲಿ ತುಪ್ಪ ಮತ್ತು ನೀರಿನಿಂದ ಅಭಿಷೇಕ ಮಾಡಿ ಪೂಜಿಸಬಹುದು. ಇದರ ನಂತರ ಶೃಂಗಾರ ದರ್ಶನದಲ್ಲಿ, ಮುಖವಾಡ, ಹೂವು ಮತ್ತು ಆಭರಣಗಳಿಂದ ಶಿವನನ್ನು ಅಲಂಕರಿಸಿರುತ್ತಾರೆ. ಈಶ್ವರನ ತಲೆಯ ಮೇಲೆ ಬಂಗಾರದ ಛತ್ರಿ ನೇತಾಡುತ್ತಿರುತ್ತದೆ. ಇಲ್ಲಿ ಅಕ್ಕಿ, ಬೇಳೆ, ಕೇಸರಿ ಹಾಕಿ ಮಾಡಿದ ’ಕಿಚಡಿ’ಯನ್ನು ಪ್ರಸಾದ ಎಂದು, ನೈವೇದ್ಯ ಮಾಡಿ, ಭಕ್ತರಿಗೆ ಹಂಚುವ ಪದ್ಧತಿಯಿದೆ.

ಮೇಲೆ ಹೇಳಿದ ಮಹಾಭಾರತ ಕಥೆಯ ಪ್ರಕಾರ, ಭೂಮಿಯಲ್ಲಿ ಹುದುಗಿದ್ದ ಈಶ್ವರನ (ಎತ್ತು) ಮೈ ಕೊನೆಗೆ ಬೇರೆ ಬೇರೆ ಜಾಗದಲ್ಲಿ ಪ್ರತ್ಯಕ್ಷವಾಯಿತಂತೆ. ನೇಪಾಳದ ಪಶುಪತಿನಾಥ ಮತ್ತು ಘರ್ವಾಲದ ನಾಲ್ಕು ಜಾಗಗಳಾದ - ಕಲ್ಪೇಶ್ವರ್ ಅಥವಾ ಕಲ್ಪನಾತ್ ದಲ್ಲಿ ಈಶ್ವರನ ಕೇಶ, ರುದ್ರನಾಥದಲ್ಲಿ ಮುಖ, ತುಂಗನಾಥದಲ್ಲಿ ಎದೆ ಮತ್ತು ಬಾಹುಗಳು, ಮಧ್ ಮಹದೇಶ್ವರ್ ದಲ್ಲಿ ಹೊಟ್ಟೆಯ ಭಾಗ ಇವೆಯೆಂದು ಪ್ರತೀತಿ. ಆದ್ದರಿಂದ ಈ ಆರು ಜಾಗಗಳಲ್ಲಿ ಮಾತ್ರ, ಈಶ್ವರನನ್ನು ಲಿಂಗರೂಪಿಯಾಗಲ್ಲದೆ, ಅವನ ದೇಹದ ಭಾಗಗಳಾಗಿ ಪೂಜಿಸುತ್ತೇವೆ. ಈ ಐದು ಜಾಗಗಳನ್ನು ’ಪಂಚ ಕೇದಾರ’ ಎಂದು ಕರೆಯುತ್ತಾರೆ. ಮತ್ತು ಯಾವ ಯಾತ್ರಿಯು ಈ ಎಲ್ಲಾ ಜಾಗಗಳ ದರ್ಶನವನ್ನೂ ಪಡೆಯುತ್ತಾನೋ, ಅವನು ತನ್ನ ಎಲ್ಲಾ ಪಾಪಗಳನ್ನೂ ಪರಿಹರಿಸಿಕೊಳ್ಳುತ್ತಾನೆಂಬ ನಂಬಿಕೆಯಿದೆ.

"ಮಮ ಕ್ಷೇತ್ರಾಣಿ ಪಂಚೈವ ಭಕ್ತ್ಪ್ರಿತಿಕರಣಿ ವೈ
ಕೇದಾರಂ ಮಧ್ಯಮ ತುಂಗಾ ತಟ ರುದ್ರಾಲಯಂ ಪ್ರಿಯಂ
ಕಲ್ಪಕಂ ಚ ಮಹದೇವಿ ಸರ್ವಪಾಪನಾಶನಂ
ಕಥಿತಂತೇ ಮಹಭಾಗೆ ಕೇದಾರೇಶ್ವರ ಮಂಡಲಂ"........

ಆದರೆ ನಾವು ಹೀಗೆ ಯಾತ್ರೆಯೆಂದು ಹೋದಾಗ, ಅಲ್ಲಿನ ಸ್ಥಳೀಯರಾಗಲೀ, ನಾವು ಬಾಡಿಗೆಗೆ ತೆಗೆದುಕೊಂಡಿದ್ದ, ಇನೋವಾದ ಚಾಲಕನಾಗಲೀ, ನಮಗೆ ಇದೆಲ್ಲದರ ಮಹತ್ವವನ್ನು ತಿಳಿಸುವುದಿಲ್ಲ. ಉಖಿ ಮಠದ ದೇವಸ್ಥಾನ ಕೂಡ, ಕೇದಾರದ ದೇವಸ್ಥಾನದಂತೇ, ೫೦೦೦ ವರ್ಷಗಳಷ್ಟೇ ಪ್ರಾಚೀನವಾದದ್ದು ಎಂದು ನಮಗೆ ನಂತರ ತಿಳಿಯಿತು. ಏನಾದರೂ, ಎಲ್ಲಾ ಜಾಗಗಳನ್ನೂ ಒಂದೇ ಸಲ ಹೋಗಿ ನೋಡಿ ಬರಬೇಕೆಂದರೆ, ಕಮ್ಮಿ ಎಂದರೂ, ೩೦ ದಿನಗಳ ಪ್ರವಾಸ ಹೋಗಬೇಕಾಗುತ್ತದೆ.

ಪೀಪಲ್ ಕೋಟಿ ಎನ್ನುವುದು ಹರಿದ್ವಾರದಿಂದ ಬದರೀನಾಥ್ ಗೆ ಹೋಗುವ ದಾರಿಯಲ್ಲಿ ಒಂದು ಮುಖ್ಯವಾದ ತಂಗುದಾಣವಾಗಿದೆ. ಈ ಚಿಕ್ಕ ನಗರಕ್ಕೆ ೧೯೫೨-೫೩ರಲ್ಲಿ ರಸ್ತೆ ನಿರ್ಮಿಸಲಾಯಿತು, ಆಗ ಇದರ ಪ್ರಾಮುಖ್ಯತೆ ಇನ್ನೂ ಹೆಚ್ಚಿತ್ತು. ಏಳು ವರ್ಷಗಳ ನಂತರ ರಸ್ತೆಯನ್ನು ಜೋಶಿ ಮಠದವರೆಗೆ ವಿಸ್ತರಿಸಲಾಯಿತು. ನಾವು ಪೀಪಲ್ ಕೋಟಿ ತಲುಪಿದಾಗ ಆಗಲೇ ಕತ್ತಲಾಗಿತ್ತು. ನಮಗಾಗಿ ಕಾದಿರಿಸಿದ್ದ ’ಅಕ್ಷರ ಲಾಡ್ಜ್’ ಯಾವ ಸೌಲಭ್ಯಗಳೂ ಇಲ್ಲದೆ, ಕೆಟ್ಟದಾಗಿದ್ದಿದ್ದರಿಂದ, ನಾವು ನಮ್ಮ ತಂಗುವ ವ್ಯವಸ್ಥೆ ಹುಡುಕಿಕೊಂಡು, ಹೊರಟೆವು. ನಮ್ಮ ಇನೋವಾ ಸಾರಥಿ, ನಮ್ಮನ್ನು ಉದಯ ಪ್ಯಾಲೇಸ್ ಗೆ ಕರೆದುಕೊಂಡು ಹೋದರು. ಇಲ್ಲಿ, ಕೋಣೆಗಳು, ಚೆನ್ನಾಗಿದ್ದವು ಮತ್ತು ೨೪ ತಾಸುಗಳ ಬಿಸಿ ನೀರಿನ ವ್ಯವಸ್ಥೆ ಕೂಡ ಇತ್ತು. ಸರಿ, ನಾವೆಲ್ಲರೂ ಬಿಸಿ ಬಿಸಿಯಾಗಿ ಸ್ನಾನ ಮುಗಿಸಿ, ಹೋಟೆಲಿನದೇ ಭೋಜನಾಲಯಕ್ಕೆ ಊಟಕ್ಕೆ ಹೋದರೆ, ತುಂಬಾ ಅಂದರೆ ತುಂಬಾ ಕಡಿಮೆ ಗುಣ ಮಟ್ಟದ ಊಟ ತಿನ್ನಬೇಕಾಯಿತು. ಹೇಗೋ ಅಂತೂ ರೊಟ್ಟಿ ಬಿಸಿಯಾಗಿತ್ತೆಂದು ತಿಂದು, ಹೋಗಿ ಮಲಗಿ ಬಿಟ್ಟೆವು.

ಬೆಳಿಗ್ಗೆ ಮತ್ತೆ ಬೇಗ ಎದ್ದು, ೫.೩೦ಗೆಲ್ಲಾ ಹೊರಟು ಬಿಡಬೇಕೆಂದು ನಮ್ಮ ಪೂರನ್ ಸಿಂಗ್ ಆಣತಿಯಿತ್ತಿದ್ದರು. ನಾವು ಬದರೀನಾಥನ ದರ್ಶನಕ್ಕೆ ಹೋಗಬೇಕಾಗಿತ್ತು. ಪೀಪಲ್ ಕೋಟಿಯಿಂದ ಸುಮಾರು ೨೮ - ೩೦ ಕಿ.ಮೀ ದೂರದಲ್ಲಿ ಪಾಂಡುಕೇಶ್ವರ್ ಇದೆ. ನಾವು ಪೀಪಲ್ ಕೋಟಿಯಿಂದ ಜೋಶಿ ಮಠ, ಗೋವಿಂದ ಘಾಟ್, ವಿಷ್ಣು ಪ್ರಯಾಗ ದಾಟಿಕೊಂಡು ಪಾಂಡುಕೇಶ್ವರಕ್ಕೆ ಬೆಳಿಗ್ಗೆ ೬.೩೦ರೊಳಗಾಗಿ ತಲುಪಬೇಕಿತ್ತು. ಇಲ್ಲಿ ವಾಹನಗಳ ಸರದಿ ಇರತ್ತೆ. ಬೆಳಿಗ್ಗೆ ೬.೩೦ ರತನಕ ಬರುವ ಎಲ್ಲಾ ವಾಹನಗಳನ್ನೂ ಜೋಶಿ ಮಠದಿಂದ ಒಳಕ್ಕೆ ಬಿಟ್ಟಿರುತ್ತಾರೆ. ನಂತರ ಬಂದ ವಾಹನಗಳು ಮತ್ತೆ ೯.೩೦ ಯ ತನಕ ಕಾಯಬೇಕಾಗುತ್ತದೆ. ಪೀಪಲ್ ಕೋಟಿಯಿಂದ ಬದರೀನಾಥ ಕ್ಷೇತ್ರದವರೆಗೂ ಒಂದೇ ಸಾಲಿನಲ್ಲಿ ವಾಹನಗಳು ಚಲಿಸುವ ಅವಕಾಶವಿದೆ ಅಷ್ಟೆ. ರಸ್ತೆ ಈಗಿನ್ನೂ ಮಾಡುತ್ತಿದ್ದಾರೆ. ಅಲ್ಲಲ್ಲೇ ಸುರಂಗಗಳನ್ನೂ ಕೊರೆಯುತ್ತಿದ್ದಾರೆ. ಜೊತೆಗೆ ವಿದ್ಯುತ್ ಘಟಕದ ಕೆಲಸಗಳೂ ನಡೆಯುತ್ತಿವೆ........ ಆದ್ದರಿಂದ ಅಪಘಾತಗಳನ್ನು ತಪ್ಪಿಸಲು, ಈ ಸರತಿಸಾಲಿನ ನಿಯಮವನ್ನು ಜಾರಿಗೊಳಿಸಿದ್ದಾರೆ. ಜೋಶಿಮಠದಲ್ಲಿ ನಿಲ್ಲಿಸಲಾಗಿರುವ ವಾಹನಗಳನ್ನೂ, ಆ ಕಡೆ ಬದರಿಯಿಂದ ವಾಪಸ್ಸು ಬರುತ್ತಿರುವ ವಾಹನಗಳನ್ನೂ, ಎರಡನ್ನೂ ಪಾಂಡುಕೇಶ್ವರದಲ್ಲಿ, ನಿಯಂತ್ರಣ ಮಾಡಲಾಗುತ್ತದೆ. ಪಾಂಡುಕೇಶ್ವರ ಎನ್ನುವುದು ಬದರೀ ಹಾಗೂ ಜೋಶಿ ಮಠದ ನಡುವೆ ಇರುವ ಒಂದು ಚಿಕ್ಕ ಹಳ್ಳಿ. ಇಲ್ಲಿ ಪಂಚ ಬದರಿಗಳಲ್ಲಿ ಒಂದಾದ, ಯೋಗ ಬದರೀನಾಥನ ದೇವಸ್ಥಾನವಿದೆ. ಈ ದೇವಸ್ಥಾನವನ್ನು ಪಾಂಡವರು ನಿರ್ಮಿಸಿದ್ದೆಂದು ಪ್ರತೀತಿ. ಇಲ್ಲಿಯ ವಿಷ್ಣು ಮೂರ್ತಿ, ಒಂದು ಅಡಿ ಎತ್ತರದ, ಅಷ್ಟ ಧಾತುವಿನಿಂದ ಮಾಡಲ್ಪಟ್ಟ, ಪದ್ಮಾಸನದಲ್ಲಿ ಕುಳಿತಿರುವ ಭಂಗಿಯಲ್ಲಿದೆ. ಈ ಜಾಗದಲ್ಲಿ ಐದು ತಾಮ್ರ ಪತ್ರಗಳು ಸಿಕ್ಕಿದ್ದರಿಂದಲೂ ಕೂಡ, ಇದರ ಪ್ರಾಮುಖ್ಯತೆ ಹೆಚ್ಚಾಗಿದೆ. ಈ ತಾಮ್ರ ಪತ್ರಗಳನ್ನು, ಬದರೀನಾಥ ಮತ್ತು ಕೇದಾರನಾಥ ದೇವಸ್ಥಾನಗಳಲ್ಲಿ ಇಟ್ಟಿದ್ದಾರಂತೆ. ಈ ಯೋಗ ಬದರೀ ದೇವಸ್ಥಾನದಲ್ಲಿ ಶ್ರೀ ಉಧವ ಮತ್ತು ಶ್ರೀ ಕುಬೇರನ ಮೂರ್ತಿಗಳನ್ನು, ಛಳಿಗಾಲದಲ್ಲಿ ಇಟ್ಟು ಪೂಜಿಸಲಾಗುತ್ತದೆ. ಇಲ್ಲಿ ಮೊದಲು ಬದರಿಯ ಕಡೆಯಿಂದ ಬಂದ ವಾಹನಗಳನ್ನು ಹೋಗಲು ಬಿಡುತ್ತಾರೆ. ಕಮ್ಮಿ ಎಂದರೂ ೨.೩೦ ಘಂಟೆಗಳ ಕಾಲದಲ್ಲಿ, ಸುಮರು ೩೦೦-೩೫೦ ವಾಹನಗಳ ಸಾಲು ನಿಂತಿರುತ್ತದೆ. ನಾವು ಒಳಗೆ ಹೋಗುವವರಾಗಿದ್ದರಿಂದ, ನಮ್ಮ ಗಾಡಿಯಲ್ಲೇ ಕುಳಿತು, ಹೊರ ಹೋಗುತ್ತಿದ್ದ ವಾಹನಗಳನ್ನು ಎಣಿಸುತ್ತಾ ಕುಳಿತಿದ್ದೆವು (ಸಮಯ ಕಳೆಯಲು ಬೇರೇನೂ ತೋಚದೇ ಇದ್ದಿದ್ದರಿಂದ) ಬೆಳಿಗ್ಗೆ ಸುಮರು ೨೫೫ ಗಾಡಿಗಳ ಎಣಿಕೆ ಆಗಿತ್ತು ಮತ್ತು ನಾವು ವಾಪಸ್ಸು ಬರುವಾಗ, ೩೭೫ ಗಾಡಿಗಳ ಎಣಿಕೆ ಮಾಡಿದ್ದೆವು. ಈ ನಿಯಮಕ್ಕಾಗಿಯೇ ನಮ್ಮ ಪೂರನ್ ನಮ್ಮನ್ನು ಬೆಳಿಗ್ಗೆ ಅವಸರಿಸಿ ಹೊರಡಿಸಿದ್ದು. ಅಂತೂ ನಾವು ಪೂರನ್ ನ ಇಚ್ಛೆಯಂತೆಯೇ ೬.೩೦ ಕ್ಕೆ ಮುಂಚೆಯೇ ಜೋಶಿ ಮಠ ತಲುಪಿ, ಸರತಿ ಸಾಲಿನಲ್ಲಿ ಸೇರಿಕೊಂಡಿದ್ದೆವು. ರಸ್ತೆ ದುರಸ್ತಿ ಆಗುತ್ತಿರುವುದರಿಂದ, ಬೆಳ್ಳನೆಯ ಸಣ್ಣ ಧೂಳಿನ ಕಣಗಳು ಮೂಗು, ಕಣ್ಣುಗಳನ್ನು ಆವರಿಸಿಕೊಂಡು ಬಿಡತ್ತೆ..... ನಾವೆಲ್ಲೋ ಸುತ್ತಲೂ ಬೆಟ್ಟಗಳಿಂದ ಸುತ್ತುವರಿದಿರುವ ಕಣಿವೆಯಲ್ಲಿ, ಪಾತಾಳದಲ್ಲಿ ಹೋಗುತ್ತಿದ್ದೇವೇನೋ ಅನ್ನಿಸುವಷ್ಟು ರಮ್ಯವಾಗಿದೆ ನೋಟ...ನಾವು ಅಂತೂ ಬೆಳ್ಳಂಬೆಳಿಗ್ಗೇನೇ ಬದರಿನಾಥನ ದರ್ಶನಕ್ಕೆ ತಲುಪಿದ್ದೆವು. ಅಷ್ಟುಹೊತ್ತಿಗಾಗಲೇ ಸಾವಿರಾರು ಜನರು ದರ್ಶನಾರ್ಥಿಗಳಾಗಿ ಸಾಲಿನಲ್ಲಿ ನಿಂತಿದ್ದರು. ನಾವು ಸ್ವಲ್ಪ ಹೊತ್ತು, ಪ್ರಕೃತಿಯ ವೀಕ್ಷಣೆ ಮಾಡಿ, ಚಿತ್ರಗಳನ್ನು ತೆಗೆದು, ಅಲಕನಂದಾ ನದಿ (ಅಲ್ಲಿಯ ಕೆಲವು ಸ್ಥಳೀಯರು ಭಾಗೀರಥಿ ನದಿ ಎಂದರು) ಸೇತುವೆಯ ಮೂಲಕ ದಾಟಿ, ದೇವಸ್ಥಾನದ ಬಾಗಿಲಿಗೆ ಬಂದೆವು. ಅಂಗಡಿಗಳ ಸಾಲಿನಲ್ಲಿ, ನಡೆದು (ಸುಮಾರು ೧/೨ ಕಿ.ಮೀ) ಬರುವುದರಿಂದ, ನಡಿಗೆ ಅಷ್ಟೇನೂ ತ್ರಾಸಕಾಯಕ ಅನ್ನಿಸೊಲ್ಲ.

ಶ್ರೀ ಬದರೀ ಕ್ಷೇತ್ರವು ಎಷ್ಟು ಪ್ರಾಚೀನವಾದದ್ದೆಂದು ಯಾರಿಗೂ ಗೊತ್ತಿಲ್ಲವೆಂದು ಕಾಣುತ್ತದೆ. ೮ನೇ ಶತಮಾನದಲ್ಲಿ, ಈ ಬದರೀನಾರಾಯಣನ ದೇವಸ್ಥಾನವನ್ನು, ಆದಿಗುರು ಶ್ರೀ ಶಂಕರಾಚಾರ್ಯರು, ಹಿಂದೂ ಧರ್ಮ ಪ್ರಚಾರಕ್ಕಾಗಿ ಮತ್ತೆ ಊರ್ಜಿತಗೊಳಿಸಿದರಂತೆ. ಬದರೀ ಕ್ಷೇತ್ರವು ಧರ್ಮಾರ್ಥ, ಕಾಮ ಮೋಕ್ಷಗಳಾದ ನಾಲ್ಕು ಪುರುಷಾರ್ಥಗಳನ್ನು ಉಂಟುಮಾಡುವ ಕ್ಷೇತ್ರವೆಂದು ಪ್ರತೀತಿ. ಘೋರವಾದ ಕಲಿಯುಗದಲ್ಲಿ ಬದರೀವನವನ್ನು ನೋಡಿದವರೇ ಧನ್ಯರೆಂದೆನ್ನುತ್ತಾರೆ. ಮನಸ್ಸಿನಲ್ಲಾದರೂ ಬದರೀ ಕ್ಷೇತ್ರವನ್ನು ಸ್ಮರಿಸಿದವರನ್ನೂ ಸಹ ದರ್ಶನ ಮಾಡಿದವರಷ್ಟೇ ಧನ್ಯರೆಂದು ತಿಳಿಯಬೇಕೆನ್ನುತ್ತಾರೆ. ಇಂತಹವರು ಮೋಕ್ಷ ಹೊಂದುತ್ತಾರಂತೆ. ಮಹಾಪಾತಕಿಗಳೂ ಕೂಡ ಇಲ್ಲಿಗೆ ಬರುವುದರಿಂದ ಪಾಪಗಳು ಪರಿಹಾರವಾಗುತ್ತದೆನ್ನುತ್ತಾರೆ. ಇಲ್ಲಿ ಗಂಧಮಾಧವ, ನರನಾರಾಯಣಾಶ್ರಮ, ಕುಬೇರ ಶಿಲಾ, ವರಾಹ ಶಿಲಾ, ಗರುಡಶಿಲಾ, ನಾರದ ಶಿಲಾ, ಮಾರ್ಕಾಂಡೇಯ ಶಿಲಾ, ಮುಂತಾದ ಇನ್ನೂ ಅನೇಕ ಕ್ಷೇತ್ರಗಳು ಇವೆ. ಈ ಬದರೀ ಕ್ಷೇತ್ರವು ನಾಲ್ಕು ವಿಧಗಳಾಗಿ ಪ್ರಸಿದ್ಧಿ ಹೊಂದಿರುತ್ತದೆ - ಸ್ಥೂಲವಾದುದು, ಸೂಕ್ಷ್ಮವಾದುದು, ಅತ್ಯಂತ ಸೂಕ್ಷ್ಮವಾದುದು, ಶುದ್ಧವಾದುದು. ಈ ನಾಲ್ಕೂ ಕ್ರಮವಾಗಿ ಸಾರೂಪ್ಯ, ಸಾಮೀಪ್ಯ, ಸಾಲೋಕ್ಯ, ಸಾಯುಜ್ಯವನ್ನು ನೀಡುವುದಂತೆ. ನಂದಪ್ರಯಾಗದಿಂದ ಗರುಡ ಗಂಗೆಯವರೆಗೂ ಇರುವ ಪ್ರದೇಶವನ್ನು ಸೂಕ್ಷ್ಮಬದರೀ ಕ್ಷೇತ್ರವೆಂದೂ, ಅಲ್ಲಿಂದ ಕುಬೇರಶಿಲಾದವರೆಗೂ ಅತೀ ಸೂಕ್ಷ್ಮ ಬದರೀ ಎಂದೂ, ಕುಬೇರ ಶಿಲೆಯಿಂದ ಸರಸ್ವತೀ ನದಿಯವರೆಗೆ ಶುದ್ಧ ಬದರೀ ಕ್ಷೇತ್ರವೆಂದು ಕರೆಯುತ್ತಾರೆ. ಶುದ್ಧ ಬದರೀ ಕ್ಷೇತ್ರದಲ್ಲಿ ನೆಲೆಸಿ ಆದ್ಯಾತ್ಮಿಕ ಚಿಂತನೆ ಮಾಡುವವರು ಜೀವನ್ಮುಕ್ತರು ಎಂಬ ಪ್ರತೀತಿ - "ಬಹೂನಿ ಸಂತಿ ತೀರ್ಥಾನಿ, ದಿವಿ ಭೂಮೌ ರಸಾಸು ಛ:
ಬದರೀ ತದೃಶಂ ತೀರ್ಥ, ನ ಭೂತಂ ನ ಭವಿಷ್ಯತಿ".

ಮುಂದುವರೆಯುವುದು.........
http://www.vismayanagari.com/node/4669

ಲೇಖಕರು

shamala

ನಾನೊಬ್ಬ ಕನ್ನಡತಿ, ಭಾಷೆಯ ಬಗ್ಗೆ ಅತಿಯಾದ ಅಭಿಮಾನ ಉಳ್ಳವಳು. ನನ್ನ ಪರಿಚಯಕ್ಕೆ ಇಷ್ಟೇ ಸಾಕು.
http://antharangadamaathugalu.blogspot.com/

ಅನಿಸಿಕೆಗಳು

ಬೆಣ್ಣೆ ಗೋವಿಂದು (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 06/27/2009 - 10:37

ಶ್ಯಾಮಲಕ್ಕ, ನೀವು ಯಾಕಾದರೂ ಚಾರ ಧಾಮ್ ಯಾತ್ರೆಗೆ ಹೋದಿರಿ ತಾಯಿ? ಹೋದರೆ ಹೋಗಿ...ಅದನ್ನು ವಾರ ವಾರ ಭಾಗ ಭಾಗ ಮಾಡಿ ವಿಸ್ಮಯ ಪ್ರಜೆಗಳಿಗೆ ಉಣಿಸುತ್ತಿರುವುದೆಕೆ? ಒಂದೇ ಸಲ ಬಡಿಸಿಬಿಡಿ, ಉಂಡು ಹೊಟ್ಟೆ ತುಂಬಿಕೊಳ್ಳುತ್ತೇವೆ ....ಈ ಅರೆ ಹೊಟ್ಟೆ ರಾವಣಾಸುರನ ಪಾಡು ನಿಮಗೆ ಗೊತ್ತಿಲ್ಲ...

shamala ಭಾನು, 06/28/2009 - 19:50

ಧನ್ಯವಾದಗಳು ತಮ್ಮಾ...
ಒಳ್ಳೆಯ ವಿಷಯಗಳನ್ನು ನಿಧಾನವಾಗಿ ಓದಿದರೇ ಚೆನ್ನಾಗಿರುತ್ತಲ್ವಾ? ಇನ್ನೆರಡೇ ಕಂತು ಯಾತ್ರೆ ಮುಗಿದೇ ಹೋಗತ್ತೆ !

ಶ್ಯಾಮಲ

ಕಿಟ್ಟಿ (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 06/30/2009 - 13:38

ಶ್ಯಾಮಲರವರೇ,
"ಬೆಣ್ಣೆ" ಯಂತಹ ಜನ ಹೇಳಿದರೆಂದು ಬೇಸರ ಪಟ್ಟು ದಯವಿಟ್ಟು ಬರೆಯುವುದನ್ನು ಮಾತ್ರ ನಿಲ್ಲಿಸಬೇಡಿ.. ಎಕೆಂದರೆ ಈ ರೀತಿಯ ಪ್ರವಾಸ ಕಥನಗಳು ನಿಜವಾಗಲು ಓದಲು ಚೆನ್ನಗಿರುತ್ತವೆ. (plus ಇಲ್ಲಿಯ ಕಂತಿನವೊರೆಗೂ ನಿಮ್ಮ ಬರವಣಿಗೆ ಶೈಲಿ ಇದಕ್ಕೆ ತಕ್ಕಹಾಗೇ ಚೆನ್ನಾಗಿದೆ ಅನ್ನುತ್ತೇನೆ... :)), ಮುಂದೆಯೂ ಇದೇ ರೀತಿಯ ಉತ್ತಮ ಪ್ರವಾಸ ಕಥನಗಳನ್ನಾ ನಮ್ಮ ಮುಂದಿಡುತ್ತೀರ ಎಂಬ ಅಶಯದೊಂದಿಗೆ... :)

shamala ಧ, 07/01/2009 - 22:17

ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ಕಿಟ್ಟಿಯವರೇ....
ನನ್ನ ಲೇಖನ ಮೆಚ್ಚಿದ್ದಕ್ಕೂ ವಂದನೆಗಳು. ಮುಂದೆಯೂ ನಾನು ಪ್ರವಾಸ ಹೋದರೆ, ಅದರ ಅನುಭವಗಳನ್ನು ಖಂಡಿತಾ ಬರೆಯುತ್ತೇನೆ.

ಶ್ಯಾಮಲ

ಅಚ್ಚುಹೆಗಡೆ ಗುರು, 07/02/2009 - 16:04

ಚೆನ್ನಾಗಿದೆ. ಬರೀತಿರಿ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.