Skip to main content

ಕಗ್ಗಂಟು ಪತ್ತೇದಾರಿ ಕಥೆ ಭಾಗ - 4

ಬರೆದಿದ್ದುMarch 29, 2009
18ಅನಿಸಿಕೆಗಳು

ಈ ಕಥೆಯ ಹಿಂದಿನ ಭಾಗ ಕಗ್ಗಂಟು ಪತ್ತೇದಾರಿ ಕಥೆ - ಭಾಗ 3
ರುದಿನ ಬೆಳಿಗ್ಗೆ ಆಫೀಸಿಗೆ ಬಂದ ವಿಕ್ರಂ ಕಣ್ಣು ಕೆಂಪಗಾಗಿತ್ತು. ರಾತ್ರಿಯಿಡೀ ಏನಪ್ಪಾ ಇದರ ರಹಸ್ಯ ಎಂದು ಯೋಚಿಸುತ್ತಾ ನಿದ್ದೆ ಸರಿಯಾಗಿ ಬಂದಿರಲಿಲ್ಲ.
ಕೆಂಪಗಾಗಿದ್ದ ವಿಕ್ರಂ ಕಣ್ಣನ್ನು ನೋಡಿ ಬಸವರಾಜು ಕೇಳಿದ "ಏನ್ರಿ ಸಾಹೆಬ್ರss ಕಣ್ಣು ಕೆಂಪಗಾಗೈತಲ್ರಿ. ಡಾಕ್ಟ್ರ ಹತ್ರ ಹೋಗ್ ಬರೋಣೇನ್ರಿ?"
"ಅಯ್ಯೋ ಬೇಡ ಕಣ್ರಿ ನಿನ್ನೆ ರಾತ್ರಿ ಎಲ್ಲಾ ಈ ಕೇಸಿನ ಬಗ್ಗೆ ವಿಚಾರ ಮಾಡ್ತಾ ನಿದ್ದೇನೆ ಸರಿಯಾಗಿಲ್ಲಾರಿ" ಎಂದು ನಿರಾಕರಿಸಿದ ವಿಕ್ರಂ.

"ಅಲ್ರೀ ಸರss ನೀವು ಚಂದ್ರಹಾಸ ಸುಳ್ಳು ಹೇಳ್ತಾ ಇದಾನಂತ ಹ್ಯಾಂಗss ಹೇಳ್ತಿರ್ರಿ?" ಎಂದು ಕುತೂಹಲದಿಂದ ಕೇಳಿದ ಬಸವರಾಜು.
"ಅನುಷಾ ಬರೆದಿಟ್ಟ ಆತ್ಮಹತ್ಯಾ ಪತ್ರ ತೀರಾ ಹಳೆಯದು ಅನ್ನಿಸ್ತಾ ಇತ್ತು. ಸಹಿ ಮಾತ್ರ ಹೊಸತು. ಆತ್ಮಹತ್ಯೆ ಮಾಡಿಕೊಳ್ಳುವವರು ಯಾರೂ ವರ್ಷಗಳ ಹಿಂದೆ ಪತ್ರ ಬರೆದು ನಂತರ ಸಹಿ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವದಿಲ್ಲ. ಇನ್ನೊಂದು ವಿಷಯ ಇದೆ ಇಂತಿ ನಿನ್ನ ಹಾಗೂ ಪ್ರಿಯತಮಾ ಒಂದೇ ಸಾಲಲಿಲ್ಲ.ಅದೂ ಕೂಡಾ ವಿಚಿತ್ರ. ಹಾಗೇ ಆ ಬಿಳಿಯ ಹಗ್ಗ ಕೂಡಾ ವಿಚಿತ್ರ ಅನ್ನಿಸುತ್ತೆ. ಯಾರೋ ಮಾರುಕಟ್ಟೆಗೆ ಹೋಗಿ ಆತ್ಮಹತ್ಯೆಗೆ ತಂದ ಹಗ್ಗದಂತಿದೆ. ಅದೂ ಸಹ ತುಂಡಾಗಿದ್ದು ಕಬ್ಬಿಣದ ಕೊಂಡಿಯಿಂದ ಜೋಡಿಸಲಾಗಿದೆ. ಆಫೀಸಿನಿಂದ ಬಂದಾಗ ಬಾಗಿಲು ತೆರೆದಿತ್ತು ಎಂದು ಅಂತಾ ಹೇಳುತ್ತಿದ್ದಾನೆ ಚಂದ್ರಹಾಸ. ಇವೆಲ್ಲ ಯಾಕೋ ಸರಿ ಹೊಂದುತ್ತಿಲ್ಲ." ಎಂದ ವಿಕ್ರಂ.

"ಹಾಂಗಂದ್ರೆ ಚಂದ್ರಹಾಸನೇ ಕೊಲೆ ಮಾಡಿರಬೇಕೆಂದು ಹೇಳ್ತಿರೇನೂ?" ಪ್ರಶ್ನಿಸಿದ ಬಸವರಾಜು.
"ಇಲ್ಲ ಹಾಗೆ ಹೇಳೊಕೆ ಆಗಲ್ಲ. ನಾವು ಇನ್ನಷ್ಟು ವಿವರ ಸಂಗ್ರಹಿಸಬೇಕು ಆಗ ನಿಜ ಗೊತ್ತಾಗ ಬಹುದು" ಎಂದ ವಿಕ್ರಂ.
"ಈಗ ಏನು ಮಾಡೋಣು ಅಂತೀರ್ರೀ?"
"ಒಂದು ಕೆಲ್ಸ ಮಾಡೋಣ. ಚಂದ್ರಹಾಸ ಆ ದಿನ ಆಫೀಸಿನಿಂದ ಹೊರಟಿದ್ದ ಎಂಬುದನ್ನು ಪತ್ತೆ ಹಚ್ಚೋಣ. ಹಾಗೇ ಅನುಷಾ ಹಾಗೂ ಚಂದ್ರಹಾಸನ ಮೊಬೈಲ್ ಕಾಲ್ ರಿಪೋರ್ಟ್ ಬೇಕು." ಸರಿ ಎಂದು ತಲೆಯಾಡಿಸಿದ ಬಸವರಾಜು.

ಅಂದು ಚಂದ್ರಹಾಸ ರಾತ್ರಿ 7:32ಕ್ಕೆ ತನ್ನ ಐಡಿ ಕಾರ್ಡ್ ಸ್ವೈಪ್ ಮಾಡಿದ್ದು ತಿಳಿದು ಬಂತು. ಆದರೆ ಚಂದ್ರಹಾಸನ ಮನೆ ಮತ್ತು ಆಫೀಸಿಗೆ 30 ನಿಮಿಷದ ದಾರಿ. ಎಂತಹ ಭಾರೀ ಟ್ರಾಫಿಕ್ ಇದ್ದರೂ 8:30ರ ಒಳಗೆ ಮನೆಯಲ್ಲಿರಬೇಕು. 9ಕ್ಕೆ ಬಂದಿದ್ದೇನೆಂದು ಸುಳ್ಳು ಹೇಳುತ್ತಿದ್ದಾನೆಯೇ? ಅನುಷಾಗೆ ಚಂದ್ರಹಾಸ 5:30 ಕ್ಕೆ ಕಾಲ್ ಮಾಡಿದ್ದಾನೆ. ಆದರೆ 5:43 ಕ್ಕೆ ಯಾವುದೋ ಮೊಬೈಲಿನಿಂದ ಬಂದ ಕಾಲ್ ಗೆ 8 ನಿಮಿಷ ಮಾತನಾಡಿದ್ದಾಳೆ. 7 ಮತ್ತೆ ಚಂದ್ರಹಾಸ್ ಮತ್ತೆ ಕಾಲ್ ಮಾಡಿ 5 ನಿಮಿಷ ಮಾತನಾಡಿದ್ದಾನೆ. ಅಂದರೆ 7 ಗಂಟೆಯವೆರೆಗೆ ಅನುಷಾ ಬದುಕಿದ್ದಳು.

"ಸಂಜೆ 5:43 ಕ್ಕೆ ಬಂದ ಕಾಲ್ ಯಾರದು?" ಎಂದು ವಿಕ್ರಂ ತನ್ನನ್ನೇ ತಾನು ಪ್ರಶ್ನಿಸಿಕೊಂಡ.
"ಕಾಲ್ ಮಾಡಿ ಕೇಳೋಣೇನ್ರಿ?" ಎಂದು ಬಸವರಾಜು ಸಲಹೆ ಕೊಟ್ಟ. ವಿಕ್ರಂ ಗೂ ಅದೇ ಸರಿ ಎನಿಸಿತು. ತನ್ನ ಮೊಬೈಲಿನಿಂದ ಆ ನಂಬರ್ ಗೆ ಕಾಲ್ ಮಾಡಿದ.
ಆ ಬದಿಯಿಂದ ಒಬ್ಬ ಗಂಡಸಿನ ದ್ವನಿ ಕೇಳಿಸಿತು "ಹಲೋ ಯಾರು?"
"ನಾನು ಡಿಟೆಕ್ಟಿವ್ ವಿಕ್ರಂ. ನೀವು ಯಾರು?"
"ನಾನು ಗೌತಮ್ ಅಂತಾ. ನೀವು ಅನುಷಾಳ ಕೇಸ್ ಹ್ಯಾಂಡಲ್ ಮಾಡ್ತಾ ಇದೀರಾ?"
"ಹೌದು. ನೀವು ಅನುಷಾಗೆ ಏನಾಗಬೇಕು?" ಕೇಳಿದ ವಿಕ್ರಂ.
"ನಾನವಳ ಕ್ಲೋಸ್ ಫ್ರೆಂಡ್"
"ನಿಮ್ಮನ್ನು ಈ ಕೇಸ್ ವಿಷಯಕ್ಕಾಗಿ ಮೀಟ್ ಮಾಡ್ಬೇಕಾಗಿತ್ತು"
"ಓಕೆ ಇವತ್ತು ಸಂಜೆ ಆರಕ್ಕೆ ನನ್ನ ಮನೆಗೆ ಬನ್ನಿ. ನನ್ನ ವಿಳಾಸ ....." ಗೌತಮ್ ಹೇಳಿದ ವಿಳಾಸ ಬರೆದುಕೊಂಡ ವಿಕ್ರಂ.

ಆಗಲೇ ಆರೂವರೆ. ಗೌತಮನ ಮನೆ ಕಡೆ ಹೊರಟಿದ್ದರು ವಿಕ್ರಂ ಮತ್ತು ಬಸವರಾಜು.
"ಈ ಬೆಂಗಳೂರು ನರಕ ಆಗೈತ್ರಿ. ಎಲ್ಲಿ ನೋಡಿದ್ರೂ ಗಾಡಿ, ಹೊಗೆ, ದೂಳು. ಉಸಿರು ಕಟ್ತೈತ್ರಿ.ಊರು ಅಂದ್ರ ನಮ್ಮ ಊರು ನೋಡ್ರಿ." ಎಂದು ಬಸವರಾಜು ಅಸಹನೆಯಿಂದ ನುಡಿದ.
"ನಂಗ ಒಮ್ಮೆ ನಿಮ್ಮ ಊರು ಕಡಿ ಬರಬೇಕು ಅಂತಾ ಐತ್ರಿ." ಎಂದ ವಿಕ್ರಂ.
"ಬರ್ರಿ ಸಾಹೆಬ್ರss ನನ್ನ ಮತ್ತು ಸವಿತಾ ಮದುವಿಗsss ನೀವು ಬರಲೇ ಬೇಕ್ರಿ" ಎಂದು ಕರೆದ ಬಸವರಾಜು.
ಆಯ್ತು ಎಂದು ತಲೆಯಾಡಿಸಿದ ವಿಕ್ರಂ.

ಅಂತೂ ಇಂತೂ 7 ಗಂಟೆಗೆ ಗೌತಮನ ಮನೆ ತಲುಪಿದರು. ಸರ್ವೇ ಸಾಧಾರಣ ಅನ್ನಿಸುವಂತಹ ಮನೆ.

"ಬನ್ನಿ ಬನ್ನಿ" ಎಂದು ಗೌತಮ್ ನಗುಮುಖದಿಂದ ಸ್ವಾಗತಿಸಿದ.
"ಅನುಷ ನಂಗೆ ಕಾಲೇಜಿನ ದಿನದಿಂದಲೇ ಪರಿಚಯ. ನಾನು ಮತ್ತು ಅವಳು ಕ್ಲೋಸ್ ಫ್ರೆಂಡ್ಸ್. ಚಂದ್ರಹಾಸ ಒಬ್ಬ ದುಷ್ಟ ಮನುಷ್ಯ. ಅನುಷ ಹೇಳುತ್ತಿದ್ದಳು ನನಗೆ ಹಿಂಸೆ ಕೊಡುತ್ತಿದ್ದಾನೆ ಅಂತಾ. ಆತ್ಮಹತ್ಯೆ ಮಾಡಿಕೊಂಡ ದಿನ ನನಗೆ ಸಂಜೆ ಕಾಲ್ ಮಾಡಿದ್ದಳು. ನನಗೆ ಹೇಳಿದ್ದಳು. ಈ ಚಂದ್ರಹಾಸನ ಚಿತ್ರಹಿಂಸೆ ಸಾಕಾಗಿ ಹೋಗಿದೆ ಎಂದು. ಆದರೆ ಅವಳು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆಂದು ನಾನು ಕನಸಿನಲ್ಲೂ ಎಣಿಸಿರಲಿಲ್ಲ." ಎಂದು ವಿವರಿಸಿದ ಗೌತಮ್.

"ಅವಳು ಮೊದಲೆಲ್ಲಾದರೂ ಆತ್ಮಹತ್ಯೆಗೆ ಪ್ರಯತ್ನಿಸಿದ್ದಳಾ?" ಕೇಳಿದ ವಿಕ್ರಂ.
"ಇಲ್ಲ"
"ಅನುಷಾ ಚಂದ್ರಹಾಸನನ್ನು ಪ್ರೀತಿಸಿ ಮದುವೆ ಆದಳೆಂದು ತಿಳಿಯಿತು. ಇದು ನಿಜವಾ?"ಕೇಳಿದ ವಿಕ್ರಂ.
"ನಿಜ ಅವಳು ಚಂದ್ರಹಾಸನನ್ನು ಪ್ರೀತಿಸಿದ್ದಳು. ಆದರೆ ಚಂದ್ರಹಾಸ ಅವಳನ್ನು ದ್ವೇಷಿಸುತ್ತಿದ್ದ. ಅನುಷಾ ಕೂಡಾ ಹೇಳಿದ್ದಳು"
"ಯಾಕೆ ದ್ವೇಷಿಸುತ್ತಿದ್ದ?"
"ಚಂದ್ರಹಾಸ ಅವಳ ಹಣವನ್ನು ಪ್ರೀತಿಸಿದ್ದ. ಅವಳನ್ನಲ್ಲ" ಎಂದ ಗೌತಮ್.
"ನಿಮಗೆ ಮದುವೆ ಆಗೈತೇನ್ರಿ?" ಕೇಳಿದ ಬಸವರಾಜು.
"ಹೌದು ಆದ್ರೆ ನನ್ನ ಹೆಂಡತಿ ನನ್ನ ಜೊತೆ ಇಲ್ಲ. ಅವಳು ಬೇರೆ ಯಾರನ್ನೋ ಇಷ್ಟಪಟ್ಟು ಓಡಿ ಹೋದಳು. ಮೋಸಗಾತಿ" ಎಂದು ಸಿಟ್ಟಿನಿಂದ ಹಲ್ಲು ಕಡಿದ ಗೌತಮ್.
"ಇನ್ನೊಂದು ವಿಷಯ. ಅನುಷಾ ಬರೆದ ಪತ್ರ ತೀರಾ ಹಳೆಯದು. ಹಾಗೂ ಹಗ್ಗ ಕೂಡಾ ವಿಚಿತ್ರವಾಗಿದೆ. ಅದು ನಿಮಗೆ ಗೊತ್ತಾ?" ಕೇಳಿದ ವಿಕ್ರಂ.
"ಗೊತ್ತಿಲ್ಲ ನಾನು ಅವಳ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಕೇಳಿದೆ. ಆದರೆ ನೋಡಲು ಹೋಗಲಿಲ್ಲ."
"ಯಾಕ್ರಿss?" ಎಂದು ಪ್ರಶ್ನಿಸಿದ ಬಸವರಾಜು.
"ಅವಳ ಸಾವನ್ನು ನೋಡುವದು ನನಗೆ ಇಷ್ಟ ಇರಲಿಲ್ಲ. ನನ್ನ ಬೆಸ್ಟ್ ಫ್ರೆಂಡ್ ಅವಳು." ಬೇಸರದಿಂದ ಹೇಳಿದ ಗೌತಮ್.
"ನೀವು ಅನುಷಾಳನ್ನು ಭೇಟಿ ಮಾಡಿದ್ದು ಯಾವಾಗ?"
"ಬಹುಶಃ ನಾಲ್ಕೈದು ತಿಂಗಳ ಹಿಂದೆ ಅನ್ನಿಸುತ್ತೆ" ಎಂದು ಗೌತಮ್
"ಗೌತಮ್ ನಿಮಗೇನು ಅನ್ನಿಸುತ್ತೆ? ಅನುಷಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೋ ಅಥವಾ ಇದು ಕೊಲೆಯೋ?" ಕೇಳಿದ ವಿಕ್ರಂ.
"ಇದು ನೂರಕ್ಕೆ ನೂರು ಆತ್ಮಹತ್ಯೆ. ಚಂದ್ರಹಾಸನ ಚಿತ್ರಹಿಂಸೆ ತಾಳಲಾರದೇ ಫ್ಯಾನ್ ಗೆ ನೇತು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ."
"ಓಕೆ ಗೌತಮ್, ನಾವಿನ್ನು ಬರ್ತೀವಿ" ಎಂದು ವಿಕ್ರಂ ಹೊರಟು ನಿಂತ.
ಬೈಕ್ ಹತ್ತಿ ವಿಕ್ರಂ, ಬಸವರಾಜು ಹೊರಟರು. ಇನ್ನೇನು ಆ ರಸ್ತೆಯಲ್ಲಿ ಮುಂದೆ ಬರುತ್ತಿದ್ದಾಗ ಬಸವರಾಜು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಚಂದ್ರಹಾಸ ಡ್ರೈವಿಂಗ್ ಸೀಟಲ್ಲಿ ಕುಳಿತಿರುವದನ್ನು ಗಮನಿಸಿದ.
"ಸಾಹೆಬ್ರೆss ಅವರು ಚಂದ್ರಹಾಸ ಹಾಂಗೇ ಕಾಣ್ತಾರ್ರಲ್ರಿ" ಎಂದು ಆಶ್ಚರ್ಯದಿಂದ ಕೂಗಿದ.
ಚಂದ್ರಹಾಸನ ಕಾರನ್ನು ನೋಡಿದ್ದ ವಿಕ್ರಂ "ಚಂದ್ರಹಾಸನ ತರಾ ಕಾಣೋದೇನು ಬಂತು ಚಂದ್ರಹಾಸಾನೇ" ಎಂದು ಕಾರಿನ ಬಳಿ ಬೈಕ್ ನಿಲ್ಲಿಸಿ ಚಂದ್ರಹಾಸನಿಗೆ ಕೈ ಮಾಡಿದ.
ಸ್ವಲ್ಪ ಗಾಬರಿಗೊಂಡಂತಿದ್ದ ಚಂದ್ರಹಾಸ ಕಾರಿನಿಂದ ಹೊರಗೆ ಬಂದು "ವಿಕ್ರಂ ನೀವಿಲ್ಲಿ ?" ಎಂದ.
"ಹುಂ ಅನುಷಾಳ ಫ್ರೆಂಡ್ಸ್ ವಿಚಾರಣೆ ನಡೆಸುತ್ತಿದ್ದೇವೆ. ಆದ್ರೆ ನೀವು ಇಲ್ಲೇನು ಮಾಡ್ತಾ ಇದೀರಾ?" ಎಂದು ಕೇಳಿದ ವಿಕ್ರಂ.
"ನನ್ನ ಫ್ರೆಂಡ್ಸ್ ಒಬ್ಬರಿಗೆ ಕಾಯುತ್ತಿದ್ದೇನೆ.ಇಲ್ಲೇ ಬರ್ತೀನಿ ಅಂತಾ ಹೇಳಿದ್ದರು" ಎಂದ ಚಂದ್ರಹಾಸ.
ವಿಕ್ರಂ ಕೇಳಿದ "ಚಂದ್ರಹಾಸ ಆ ದಿನ ರಾತ್ರಿ 9 ಕ್ಕೆ ಬಂದೆ ಅನ್ನುತ್ತಿದ್ದೀರಿ. ಆದರೆ ನೀವು 7:32 ಕ್ಕೆ ಆಫೀಸಿನಿಂದ ಹೊರಟಿದ್ದೀರೆಂದು ತಿಳಿದು ಬಂತು."
"ಹುಂ ಆದಿನ ಅನುಷಾಗೆ ಸರ್ ಪ್ರೈಸ್ ಗಿಫ್ಟ್ ಕೊಡಬೇಕೆಂದು ಇದ್ದೆ. ಅದಕ್ಕೆ ಜ್ಯುವೆಲ್ಲರ್ ಅಂಗಡಿಗೆ ಹೋಗಿ ನಕ್ಲೆಸ್ ಖರೀದಿಸಿದ್ದೆ. ಅದಕ್ಕೆ ತಡವಾಯ್ತು."
"ಸರಿ ಸರ್ ಬರ್ತೀವಿ. ರಾತ್ರಿ ೯ ಆಗಿದೆ. ಬರ್ತೀವಿ. ಗುಡ್ ನೈಟ್" ಹೇಳಿ ವಿಕ್ರಂ ಒಂದಿಷ್ಟು ದೂರ ಹೋಗಿ ಅಡ್ಡ ರಸ್ತೆಯಲ್ಲಿ ಬೈಕ್ ನಿಲ್ಲಿಸಿದ. ಬಸವರಾಜು "ಯಾಕ್ರಿ ಸರ್ ಬೈಕ್ ನಿಲ್ಲಿಸಿದ್ರಿ?" ಎಂದು ಕೇಳಿದ.

"ಚಂದ್ರಹಾಸನ ಮನೆ ಇಲ್ಲಿಂದ ಕಡಿಮೆ ಎಂದರೂ 18 ಕೀಮಿ ದೂರದಲ್ಲಿದೆ. ಆಫೀಸ್ ಕೂಡಾ ಈ ಕಡೆ ಇಲ್ಲ. ಅದೂ ಹೋಗಿ ಹೋಗಿ ಈ ಒಳ ರಸ್ತೆಯಲ್ಲಿ ಕಾಯುತ್ತಿದ್ದೇನೆ ಅಂತಿದ್ದಾನೆ. ಬಹುಶಃ ಗೌತಮನ ಮನೆ ಮುಂದೆ ನಮ್ಮ ಬೈಕ್ ಇದ್ದುದರಿಂದ ಆತ ಕಾಯುತ್ತಿದ್ದ ಅನ್ನಿಸುತ್ತೆ. ಅವನ ಗೆಳೆಯ ನಿಜವಾಗಲೂ ಬರುತ್ತಾನಾ ನೋಡೋಣ."
ಯಾವ ಗೆಳೆಯನೂ ಬರಲಿಲ್ಲ. ಚಂದ್ರಹಾಸ 10 ನಿಮಿಷದ ನಂತರ ಹಾಗೇ ಹೊರಟು ಬಿಟ್ಟ.
"ಅಂದರೆ ಇವನು ಗೌತಮನ ಮನೆಗೆ ಬಂದಿದ್ದಾನೆ. ಆದರೆ ಯಾಕೆ? ಚಂದ್ರಹಾಸನಿಗೆ ಗೌತಮನ ಮೇಲೆ ದ್ವೇಷ ಇದ್ದಿರಬಹುದೇ? ಆತನ ಕೊಲೆಗೆ ಪ್ರಯತ್ನಿಸುತ್ತಿರಬಹುದೇ? ಈಗ ನಮ್ಮನ್ನು ನೋಡಿ ಹೆದರಿ ಹಾಗೇ ಹೋಗಿರಬಹುದೇ?" ವಿಕ್ರಂ ಬಸವರಾಜುಗೆ ಕೇಳಿದ.
"ಸರss ನಂಗಂತೂ ಈ ಚಂದ್ರಹಾಸ ಮತ್ತು ಗೌತಮ ಇಬ್ರೂ ಖದೀಮರು ಅನ್ಸ್ತೈತ್ರಿ. ಒಂದರ ಹಿಂದ ಒಂದು ಸುಳ್ಳು ಹೇಳಾಕ್ ಹತ್ಯಾರss ಕಣ್ರೀ. ನಾನಂತೂ ಸವಿತಾಳ ಮದುವೆ ಆಗೋ ಆಸೇನೇ ಬಿಟ್ಟಿನ್ರಿ ಕಣ್ರಿ"
"ಯಾಕ್ರಿ ಬಸವರಾಜು ? ಏನಾಯ್ತು?" ಗಾಬರಿಯಿಂದ ಕೇಳಿದ ವಿಕ್ರಂ.

"ಏನು ಮಾಡ್ಯೇನು ಸಾಮೀರ ಈ ಕೇಸು ಒಳ್ಳೆ ಬಿಡಿಸಲು ಆಗದ ಕಗ್ಗಂಟು ಇದ್ದಾಂಗ ಐತಿ. ಒಂದು ಗಂಟು ಬಿಡಿಸೋಕ ಹೋದ್ರ ಇನ್ನೆರಡು ಗಂಟು ಆಗ್ತೈತಿ. ಈ ಕೇಸು ಮುಗಿಯಾಂಗ ಕಾಣ್ಸ್ತಾ ಇಲ್ಲಾರಿ. ನಂಗೂ ಸವಿತಾಗೂ ಮದುವೆ ಆಗೋ ಹಾಗೂ ಕಾಣಿಸ್ತಾ ಇಲ್ಲಾರಿ. ಸುಮ್ನ ಊರಿಗss ಹೋಗಿ ಅಪ್ಪಾರು ಹೇಳ್ದಾಂಗ ಹೊಲ-ಗಿಲ ನೋಡ್ಕೊಂಡು ನೆಮ್ಮದಿ ಬದುಕು ಬಾಳ್ತೀನ್ರಿ." ಎಂದು ಬೇಸರದಿಂದ ಹೇಳಿದ ಬಸವರಾಜು.
"ರೀ ಬಸವರಾಜು ನೋಡ್ರಿ. ಇನ್ನೇನು ಈ ಕೇಸು ಸಾಲ್ವ್ ಆಗುತ್ತೆ. ತಾಳ್ಮೆ ಇರಲಿ" ಎಂದ ವಿಕ್ರಂ.
"ನಂಗss ಈ ಗೌತಮನ ಹಳೇ ಹೆಂಡ್ತೀನ ಭೇಟಿ ಮಾಡಿದ್ರ ಏನಾದ್ರೂ ಸುಳಿವು ಸಿಗಬಹುದು ಅನ್ಸ್ತೈತ್ರಿ. ಇವನ ಬಗ್ಗss ಅವಳಿಗೆ ಏನಾದ್ರು ಗೊತ್ತಿರಬಹುದು ಅಲ್ವೇನ್ರಿ?"
"ನಿಜ ಕಣ್ರಿ. ಇವತ್ತು ಹೋಗಿ ಸ್ವಲ್ಪ ರೆಸ್ಟ್ ತಗೋಳೋಣ. ನಾಳೆ ಅವಳ ವಿಳಾಸ ಪತ್ತೆ ಮಾಡಿ ಹೋಗೋಣ." ಎಂದು ವಿಕ್ರಂ ಬೈಕ್ ಸ್ಟಾರ್ಟ್ ಮಾಡಿದ. ಬಸವರಾಜು ಕುಳಿತ ನಂತರ ಬೈಕ್ ರೊಯ್ಯನೆ ಹೊರಟಿತು.

ಮರುದಿನ ಗೌತಮನ ಹೆಂಡತಿ ಸೌಜನ್ಯ ಎಂದೂ ಅವಳ ವಿಳಾಸ ಸಹ ಪತ್ತೆ ಆಯ್ತು. ಬೆಳಿಗ್ಗೆ 11 ರ ಸುಮಾರು ಅವಳ ಮನೆಗೆ ಹೋದರು. ಸೌಜನ್ಯ ತನ್ನ ತಂದೆ, ತಾಯಿ ಜೊತೆ ಇದ್ದಳು.
"ಬನ್ನಿ ಕುಳಿತುಕೊಳ್ಳಿ" ಎಂದು ಸೌಜನ್ಯ ಹೇಳಿದಳು.
"ತಾವು ಇನ್ನೊಬ್ಬರ ಜೊತೆ ಓಡಿ ಹೋಗ್ಯಾರೆಂದು ನಿಮ್ಮ ಗಂಡ ಗೌತಮ್ ಹೇಳಿದ್ನಲ್ರಿ. ಆದ್ರೆ ನೀವು ನೋಡಿದ್ರ ಅಪ್ಪ ಅಮ್ಮ ಜೊತೆಗೆ ಇದ್ದೀರಲ್ರಿ..." ಅಂತಾ ಬಸವರಾಜು ಹೇಳುತ್ತಿರುವಾಗಲೇ ವಿಕ್ರಂ ಅವನನ್ನು ತಡೆದ.
ಸೌಜನ್ಯ ಹೇಳಿದಳು "ಅವನು ಸುಳ್ಳುಗಾರ. ನಾನು ಗೌತಮನನ್ನು ಬಿಟ್ಟು ಬಂದಿದ್ದು ಅವನು ಹಗಲು ರಾತ್ರಿ ಅನುಷಾಳ ಜಪ ಮಾಡುತ್ತಿದ್ದ ಅದಕ್ಕಾಗಿ. ಕಾಲೇಜಿನಲ್ಲಿ ಅನುಷಾಳನ್ನು ಗೌತಮ್ ತುಂಬಾ ಪ್ರೀತಿಸುತ್ತಿದ್ದ. ಆದರೆ ಅವಳಿಗೆ ಹೇಳಿದರೆ ಎಲ್ಲಿ ತನ್ನ ಸ್ನೇಹವನ್ನೂ ತಿರಸ್ಕರಿಸಿ ಬಿಟ್ಟರೆಂದು ಅವಳಿಗೆ ಹೇಳಲಿಲ್ಲ. ಚಂದ್ರಹಾಸನನ್ನು ಅನುಷಾ ಪ್ರೀತಿಸಿ ಮದುವೆ ಆದಳು. ಆಗ ಗೌತಮ್ ಮನಸ್ಸಿಗೆ ಹಚ್ಚಿಕೊಂಡು ಬಿಟ್ಟ. ಕನಿಷ್ಟ ಮದುವೆ ಆದ ಮೇಲಾದ್ರೂ ಸುಧಾರಿಸುವನೆಂದು ಅವನನ್ನು ನಾನು ಮದುವೆ ಆದೆ. ಆದರೆ ಅವನು ಅವಳ ಬಗ್ಗೆ ವಿಚಾರ ಮಾಡುವದನ್ನು ಬಿಡಲಿಲ್ಲ. ಕುಡಿದು ಮನೆಗೆ ಬಂದು ಅಳುತ್ತಿದ್ದ."
"ನಿಮಗೆ ಅನುಷಾ - ಚಂದ್ರಹಾಸನ ಕಾಲೇಜು ಜೀವನದ ಬಗ್ಗೆ ಏನಾದರೂ ಗೊತ್ತೆ?" ಕೇಳಿದ ವಿಕ್ರಂ.
"ಗೌತಮ್ ಅನುಷಾಳ ಪರಿಚಯ ಕಾಲೇಜಿನಲ್ಲಿ ಆಯ್ತು. ಒಬ್ಬರಿಗೊಬ್ಬರು ತೀರಾ ಕ್ಲೋಸ್ ಆಗಿದ್ದರು. ಇಬ್ಬರೂ ಒಟ್ಟಿಗೆ ಪಬ್ ಗೂ ಸಹ ಹೋಗುತ್ತಿದ್ದರು. ಗೌತಮ್ ನಿದಾನವಾಗಿ ಅನುಷಾಳನ್ನು ತುಂಬಾ ಹಚ್ಚಿಕೊಂಡು ಹುಚ್ಚನಂತಾದ. ಅನುಷಾ ಕೆಲ್ಸಕ್ಕೆ ಸೇರಿ ಚಂದ್ರಹಾಸನಿಗೆ ಮನ ಸೋತು ಮದುವೆ ಆದಳು. ಆಗ ಅನುಷಾ ತನಗೆ ಮೋಸ ಮಾಡಿದಳು ಎಂದು ಅಳುತ್ತಿದ್ದ. ಆಗ ಅವನನ್ನು ಮದುವೆ ಆದೆ."
"ಅಂದರೆ ಅನುಷಾ ಕುಡಿಯುತ್ತಿದ್ದಳಾ?" ಪ್ರಶ್ನಿಸಿದ ವಿಕ್ರಂ.
"ಹುಂ ಪಬ್ ಗೆ ಹೋದಾಗ ತನ್ನ ಗ್ಲಾಸ್ ನಲ್ಲೇ ಅನುಷಾಗೆ ಗೌತಮ್ ವಿಸ್ಕಿ ಕುಡಿಸುತ್ತಿದ್ದ. ಇದನ್ನು ಗೌತಮನೇ ಒಮ್ಮೆ ಹೇಳಿದ್ದ" ಹೇಳಿದಳು ಸೌಜನ್ಯ.
"ಅನುಷಾ ಮೊದಲೆಲ್ಲಾದರೂ ಆತ್ಮಹತ್ಯೆಗೆ ಪ್ರಯತ್ನಿಸಿದ್ದಳಾ?"
"ಇಲ್ಲ ಆದರೆ ಅನುಷಾಗೆ ಆತ್ಮಹತ್ಯೆಯ ನಾಟಕವೊಂದು ಪಂಚಪ್ರಾಣವಾಗಿತ್ತು. ಕಾಲೇಜಿನಲ್ಲಿ ಅನುಷಾ ಹಾಗೂ ಗೌತಮ್ "ಹರಿದ ಹಗ್ಗ" ಎಂಬ ನಾಟಕ ಮಾಡಿದ್ದರು. ಅದರಲ್ಲಿ ಮನೆಯಲ್ಲಿ ಮದುವೆಗೆ ಒಪ್ಪದಿದ್ದಾಗ ಪ್ರಿಯತಮೆ ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಪ್ರಯತ್ನಿಸುತ್ತಾಳೆ. ಆ ಹಗ್ಗ ದಾರದ ಕೊಂಡಿಯಿಂದ ಜೋಡಿಸಿರುತ್ತಾರೆ. ಆಗ ಹಗ್ಗ ಹರಿದು ಬೀಳುತ್ತೆ.ಪ್ರಾಣಕಾಂತ ಬಂದು ಅವಳನ್ನು ದೂರ ಕರೆದುಕೊಂಡು ಹೋಗಿ ಮದುವೆ ಆಗುತ್ತಾನೆ. ಈ ನಾಟಕವನ್ನು ಅನೇಕ ಬಾರಿ ಅನುಷಾ ಗೌತಮನ ಬಳಿ ಆಡುವಂತೆ ಕೇಳಿಕೊಳ್ಳುತ್ತಿದ್ದಳು ಎಂದು ಗೌತಮ ಹೇಳಿದ್ದ."
"ನೀವು ಆ ಪತ್ರ ಅಥವಾ ಹಗ್ಗ ನೋಡಿದ್ದಿರೇನ್ರಿ?" ಬಸವರಾಜು ಕೇಳಿದ.
"ಹೌದು ಒಮ್ಮೆ ನಾವು ಚಂದ್ರಹಾಸನ ಮನೆಗೆ ಹೋದಾಗ ಅನುಷಾ- ಗೌತಮ್ ಇದೇ ನಾಟಕ ಮತ್ತೆ ಆಡಿದ್ದರು"
ಬಸವರಾಜು ತನ್ನ ಕ್ಯಾಮರಾ ತೆಗೆದು ಅದರ ಸ್ಕ್ರೀನ್ ಮೇಲೆ ಪತ್ರ ಹಾಗೂ ಹಗ್ಗದ ಚಿತ್ರ ತೋರಿಸಿದ.
"ಇದು ಆ ನಾಟಕದಲ್ಲಿ ಉಪಯೋಗಿಸಿದ ಹಗ್ಗ ಹಾಗೂ ಪತ್ರ!!"
"ಆ ಹಗ್ಗ ಕಬ್ಬಿಣದ ಕೊಂಡಿಯಿಂದ ಜೋಡಿಸಲ್ಪಟ್ಟಿತ್ತು. ದಾರದಿಂದ ಅಲ್ಲ!!" ಎಂದು ಆಶ್ಚರ್ಯದಿಂದ ಹೇಳಿದ ವಿಕ್ರಂ.
"ಆತ್ಮಹತ್ಯೆ ಮಾಡಿಕೊಂಡ ದಿನ ಗೌತಮ್ ತಾನು ಅನುಷಾಳನ್ನು ಭೇಟಿ ಮಾಡುತ್ತೇನೆಂದು ಫೋನ್ ಮಾಡಿದ್ದ. ನೀನು ನನ್ನ ಬಿಟ್ಟು ಹೋದೆ ಎಂದು ಬೇಸರವಿಲ್ಲ ನನಗೆ ನನ್ನ ಅನುಷಾ ಮರಳಿ ಸಿಕ್ಕಿದ್ದಾಳೆ ಎಂದು ಹೇಳಿದ್ದ. ಆದರೆ ಆಗ ಗೌತಮ್ ಕುಡಿದಿದ್ದ. ಆದ್ದರಿಂದ ನಾನು ಅವನ ಮಾತನ್ನು ನಂಬಲಿಲ್ಲ."
"ಎಷ್ಟು ಗಂಟೆಗೆ ಫೋನ್ ಮಾಡಿದ್ದ?"
"ಸುಮಾರು ಸಂಜೆ 6:30 ಗೆ."
ವಿಕ್ರಂ ಮನಸ್ಸಿನಲ್ಲೇ ಲೆಕ್ಕಾಚಾರ ಹಾಕುತ್ತಿದ್ದ ಇದಕ್ಕಿದ್ದಂತೆ "ಥ್ಯಾಂಕ್ಸ್ ಸೌಜನ್ಯರವರೇ. ನಾವಿನ್ನು ಬರ್ತೀವಿ" ಎಂದು ಬಸವರಾಜುಗೆ ಹೊರಡೋಣ ಎಂದು ಕಣ್ಸನ್ನೆ ಮಾಡಿದ.
ಹೊರಗೆ ಬಂದ ಬಸವರಾಜು "ಅವನು ಅವಳನ್ನು ಲವ್ ಮಾಡ್ತಾನಂತೆ. ಇವಳು ಅವನನ್ನು ಲವ್ ಮಾಡ್ತಾಳಂತೆ. ಏನ್ರಿss ಸಾಹೆಬ್ರsss ಈ ಸಂಬಂಧ ಇಷ್ಟು ಚೀಪಾ? ಯಾರು ಯಾರನ್ನ ಪ್ರೀತಿ ಮಾಡ್ತಾರಂತ ಗೊತ್ತಾಗುದಿಲ್ಲಾರೀ"
ವಿಕ್ರಂ ಒಮ್ಮೆ ನಕ್ಕ. "ಬಸವರಾಜು ಇವರೆಲ್ಲಾ ಹೈ ಸೊಸೈಟಿ ಜನ ಕಣ್ರಿ. ಎಲ್ಲಾ ಅಮೇರಿಕನ್ ಕಲ್ಚರ್"
ಬಸವರಾಜು "ಅಲ್ರೀ ಇಲ್ಲಿ ಚಂದ್ರಹಾಸನೂ ತನ್ನ ಹೆಂಡತಿ ಅನುಷಾಳ ಪ್ರೀತಿ ಮಾಡ್ತಾ ಇದಾನss. ಅಲ್ಲಿ ಗೌತಮನೂ ಅನುಷಾಳ ಪ್ರೀತಿ ಮಾಡ್ತಾನ. ಅವರಿಬ್ರು ಆತ್ಮಹತ್ಯೆಗೆ ಕಾರಣ ಹೇಗಾಗ್ತಾರ್ರಿsss?"
ಅದಕ್ಕೆ ವಿಕ್ರಂ "ಹೇಳೋಕೆ ಆಗಲ್ಲ ಬಸವರಾಜು. ಅತಿಯಾದರೆ ಅಮೃತವೂ ವಿಷವಾಗುತ್ತೆ ಅನ್ನೋ ಗಾದೆ ಕೇಳಿದೀರಾ? ಹಾಗೆ ಪ್ರೀತಿಯೂ ಸಹ. ಇಲ್ಲೂ ಹಾಗೆ ಆಗಿದೆ ಅಂತಾ ನನ್ನ ಅನಿಸಿಕೆ."

........

ಮರುದಿನ ಬೆಳಿಗ್ಗೆ ಆಫೀಸಿಗೆ ಬಂದ ವಿಕ್ರಂ ಉಲ್ಲಾಸಿತನಾಗಿದ್ದ. ಬಸವರಾಜು "ಯಾಕ್ರೀ ಸಾಹೆಬ್ರ ಭಾರೀ ಖುಷಿಯಾಗಿದೀರಾ. ರಹಸ್ಯ ಏನು ಅಂತಾ ಪತ್ತೆ ಆಯ್ತೇನ್ರಿ?" ಎಂದು ಕೇಳಿದ.
"ಹುಂ ಗೊತ್ತಾಯ್ತು. ಇವತ್ತೇ ಚಂದ್ರಹಾಸ, ಗೌತಮ್, ಸೌಜನ್ಯ ಹಾಗೂ ಇನ್ಸ್ ಪೆಕ್ಟರ್ ಪೃಥ್ವಿರಾಜ್ ಅವರನ್ನು ಕರೀರಿ. ನಾನು ಯಾರು ಕೊಲೆಗಾರ ಅಂತಾ ಹೇಳ್ತಿನಿ"
"ಕೊಲೆಗಾರ!! ಇದು ಆತ್ಮಹತ್ಯೆ ಅಲ್ವೇನ್ರಿ!" ಅತ್ಯಾಶ್ಚರ್ಯದಿಂದ ಕೇಳಿದ ಬಸವರಾಜು.
"ಅಲ್ಲ ಇದು ಕೊಲೆ. ಇದು ಪ್ರೀ ಪ್ಲಾನ್ಡ್ ಮರ್ಡರ್" ಎಂದು ಹೇಳಿದ ವಿಕ್ರಂ.

ಯಾರು ಕೊಲೆಗಾರ? ಹೇಗಾಯ್ತು ಕೊಲೆ? ಕಗ್ಗಂಟಿನ ಮುಂದಿನ ಕೊನೆಯ ಭಾಗದಲ್ಲಿ.
ವಿಸ್ಮಯ ನಗರಿಯ ಓದುಗರು ಸಹ ಅಭಿಪ್ರಾಯದಲ್ಲಿ ಮುಂದೆ ಏನಾಗುತ್ತೆ ಅನ್ನುವದನ್ನು ತಮ್ಮ ದೃಷ್ಟಿಕೋನದಲ್ಲಿ ಬರೆಯಬಹುದು.

ಇದರ ಮುಂದಿನ ಭಾಗ ಕಗ್ಗಂಟು ಪತ್ತೇದಾರಿ ಕಥೆ - ಭಾಗ 5 (ಅಂತಿಮ ಭಾಗ)

ಲೇಖಕರು

ರಾಜೇಶ ಹೆಗಡೆ

ಕಂಡದ್ದು ಕಂಡ ಹಾಗೆ

ಸಾಫ್ಟವೇರ್ ಇಂಜನಿಯರ್. ಕನ್ನಡದಲ್ಲಿ ಸಾಫ್ಟವೇರ್ ತಯಾರಿಸುವದು ನನ್ನ ಹವ್ಯಾಸ. ಆಗಾಗ ಲೇಖನ ಬರೀತಿನಿ ಆದ್ರೆ ಅದರಲ್ಲಿ ಪಳಗಿದವನಲ್ಲ.

ಅನಿಸಿಕೆಗಳು

ಪೂನಾವಾಲ (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 03/30/2009 - 10:32

ಶ್...ಶ್....ಶ್...!!! :?

ಕೊಲೆಗಾರ ಯಾರೂ ಅಂತ ಗೊತ್ತಾಯ್ತು...!

ಅನುಷಾಳನ್ನು ಕೊಲೆ ಮಾಡಿದ್ದು ಬೇರೆ ಯಾರೂ ಅಲ್ಲ...
ರಾಜೇಶ ಹೆಗ್ಡೇನೆ ಕೊಲೆ ಮಾಡಿದ್ದು...!!! :P 8)

[quote=ಪೂನಾವಾಲ]ಶ್...ಶ್....ಶ್...!!! :?

ಕೊಲೆಗಾರ ಯಾರೂ ಅಂತ ಗೊತ್ತಾಯ್ತು...!

ಅನುಷಾಳನ್ನು ಕೊಲೆ ಮಾಡಿದ್ದು ಬೇರೆ ಯಾರೂ ಅಲ್ಲ...
ರಾಜೇಶ ಹೆಗ್ಡೇನೆ ಕೊಲೆ ಮಾಡಿದ್ದು...!!! :P 8) [/quote]

ಹೆಗಡೆಯವರೆ, , .
ತುರ್ತಾಗಿ ಒ0ದು ನಿರೀಕ್ಷಣಾ ಜಾಮೀನು ತಕೋ0ಡು ಬಿಡಿ... ನನಗೂ ಗೊತ್ತಾಗಿ ಹೋಯ್ತು ಯಾರು ಕೊಲೆ ಮಾಡಿದ್ದು ಅ0ತ

ರಾಜೇಶ ಹೆಗಡೆ ಮಂಗಳ, 03/31/2009 - 12:50

:D :D :D

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 06/05/2009 - 15:40

Hi Rajesh,
Story is really good, I read it yesterday (4/june/09) But the ending should have been something different like Sowjanya killing her bcoz it is Sowjanya's life which is really ruined due to her and you have made Anusha described as opportunist (where she shared same room with Gowtham during college excersion and once she found Rich chandra haasa, she betrayed Gowtham). It is Sowjanya who should kill her bcoz these two used to love her a lot.

Hope you like the change,
Bhaskar

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 04/10/2009 - 12:04

no its Gowtham

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 03/31/2009 - 11:46

kathe chennagide. mundina baaga yestu tingalu aada mele barutte?? :(

ರಾಜೇಶ ಹೆಗಡೆ ಮಂಗಳ, 03/31/2009 - 12:57

ಕ್ಷಮಿಸಿ ಅನಾಮಿಕರೇ,

ಮೊದಲ ನಾಲ್ಕು ಭಾಗ ಬರೆಯುವಾಗ ಕಥೆಯ ಸನ್ನಿವೇಶಗಳ ಸೃಷ್ಟಿಗೆ ಸಮಯ ತೆಗೆದುಕೊಂಡಿತು. ಬೇರೆ ಕೆಲಸಗಳ ಒತ್ತಡ ಜಾಸ್ತಿ ಇತ್ತು. ಕೊನೆಯ ಭಾಗ ಈ ವಾರಾಂತ್ಯದಲ್ಲಿ ಬರಲಿದೆ. :)

ರಾಜೇಶ್ ಕಥೆ ತುಂಬಾ ತುಂಬಾ ಚೆನ್ನಾಗಿ ಮೂಡಿಬಂದಿದೆ... ನಾಟಕವೇ ಕೊಲೆಗೆ ಪ್ರೇರಣೆ... ಮುಂದುವರಿಯಲಿ.....ಅಂತಿಮ ಘಟ್ಟಕ್ಕಾಗಿ ಕಾಯುತ್ತಲಿದ್ದೇವೆ..
ವಂದನೆಗಳು
ಓದುಗರು
ಕುವೈತ್..

ರಾಜೇಶ ಹೆಗಡೆ ಮಂಗಳ, 03/31/2009 - 13:02

ನಾಟಕವೇ ಕಥೆಯ ಜೀವಾಳ. ಕೊಲೆಗಾರ ಅದನ್ನು ಬಳಸಿ ಆತ್ಮಹತ್ಯೆ ಎಂದು ಸಾಭೀತು ಮಾಡಿದ್ದಾನೆ. ಅದನ್ನು ವಿಕ್ರಂ ಹೇಗೆ ಹೊರಗೆಡಗುತ್ತಾನೆ ಎಂಬುದೇ ಮುಂದಿನ ಭಾಗದ ವಿಶೇಷ. ಕಾದು ನೋಡಿ. :D

ವಿ.ಎಂ.ಶ್ರೀನಿವಾಸ ಮಂಗಳ, 03/31/2009 - 13:17

ಆತುರ ಏನೂ ಬೇಡ ನಿಧಾನವಾಗಿ ಕಥೆ ಬರೆಯಿರಿ ಸಾರ್ ಆದ್ರೆ ಕಥೆ ಮಾತ್ರ ಇದೇ ತರ ಕೂತೂಹಲಭರಿತವಾಗಿ, ಸಖತ್ತಾಗಿರಬೇಕು.

ಪೂನಾವಾಲ (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 03/31/2009 - 13:19

ಒಟ್ನಾಗೆ... ಈ 'ವಿಸ್ಮಯ ನಗರಿ'ಲಿ ಬರೋ ಬಾಗ ಒಂದು, ಬಾಗ ಯೆಳ್ಡು... ರೀತಿಯ ಕತೆಗಳಿಂದ ತಿಳ್ಕಂಡಿದ್ದು ಯೇನಪಾ ಅಂದ್ರೆ... ಯಾರು ಬೇಕಾದ್ರೂ ಕತೆನ (ಮನಸಿಗೆ ಬಂದದ್ದು) ಸುರು ಮಾಡಭೌದು. ಅದರಾಗೆ ಕತೆ ಇಲ್ದಿದ್ರೂ ಪರ್ವಾಗಿಲ್ಲಾ. ಸುಮ್ಕೇ ಅದನ್ನ ಬಾಗ-1 ಅಂತಾ ಕರೀರಿ. ಆಮ್ಯಾಗೆ... ನಿಮಗೆ ಪುರುಸೊತ್ತಾದಾಗ (ಏನಾದ್ರೂ ಕತೆ ಒಳುದ್ರೆ) ಮುಂದ್ವರ್ಸಿ. ಅದನ್ನ ಬಾಗ-2 ಅನ್ರಿ. ಇಂಗೇ ನಿಮಗೆ ತೃಪ್ತಿಯಾಗೋ ವರ್ಗೂ ಬಾಗ ಮಾಡ್ತಾನೇ ಓಗಿ. ಕೊನೆಗೆ... ಯಾವಗ ಓದುಗನ ತಲೆ ಸಿಡ್ದು ಸಾವ್ರ ಬಾಗ ಆಗುತ್ತೋ ಇಲ್ಲಾ ಯಾವಾಗ ನಿಮ್ಗೆ ಅಕ್ಸ್ರಗಳು ಮರ್ತು ಓಗ್ತವೋ ಆವಾಗ ನಿಲ್ಸಿ.

ಇದೇ ತಾನೇ ರಾಜೇಶ ಯೆಗ್ಡೆ ಯವರು ಯೋಳ್ತಿರೋದು. ಆಷ್ಟೂ ಗೊತ್ತಾಗಾಕಿಲ್ವಾ ನಮಿಗೆ...

ರಾಜೇಶ ಹೆಗಡೆ ಮಂಗಳ, 03/31/2009 - 13:38

ಖಂಡಿತಾ ತಪ್ಪಾಗಿ ತಿಳಿದಿದ್ದೀರಾ ಫೂನಾವಾಲಾರವರೇ.

ಕಗ್ಗಂಟು ಮೊದಲ ಭಾಗ ಬರೆದಾಗಲೇ ಪೂರ್ಣ ಕಥೆ ತಲೆಯಲ್ಲಿತ್ತು. ಆದರೆ ಸಂಭಾಷಣೆ ಹಾಗೂ ಸನ್ನೀವೇಶ ಬರೆದಿದ್ದು ನಂತರ. ಕಗ್ಗಂಟು ಎಂಬ ಹೆಸರಿಟ್ಟದ್ದೇ ನಾಯಕ ವಿಕ್ರಂ ಆತ್ಮಹತ್ಯೆಯೋ ಕೊಲೆಯೋ ಎಂಬ ಗೊಂದಲಕ್ಕೆ ಬೀಳುವದರಿಂದ. ನಿಜ ಕಥೆ ಬರೆಯುವಲ್ಲಿ ಅಥವಾ ಕುತೂಹಲ ಕೆರಳಿಸುವಲ್ಲಿ ನಾನು ಎಡವಿರಬಹುದು. :(

ಇಂತಹ ಸರಣಿ ಕಥೆಗಳು ಕುತೂಹಲ ಕೆರಳಿಸಿ ಮುಂದಿನ ಭಾಗಕ್ಕೆ ಕಾಯುವಂತೆ ಮಾಡುತ್ತೆ ಎಂದು ಹಾಗೆ ಮಾಡಿದೆ. ಒಮ್ಮೆಲೇ ಎಲ್ಲ ಕಥೆ ಬರೆದಿದ್ದರೆ ಅದರ ಗಾತ್ರ ನೋಡಿಯೋ ಓದುಗರು ಓದದೇ ಹೋಗುವ ಸಾಧ್ಯತೆ ಇತ್ತು. ಏನಂತೀರಾ?

ಪೂನಾವಾಲ (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 03/31/2009 - 15:19

ರಾಜೇಶ ರವರೇ...

ನಿಮ್ಮ ಉತ್ತರಕ್ಕೆ ದನ್ಯವಾದಗಳು.
ನಾನು ಇಂಗೆ ಯೇಳಿವ್ನಿ ಅಂತ ನೀವಾಗ್ಲೀ ಇಲ್ಲಾ ಯಾರೇ ಆಗ್ಲೀ ಬೇಜಾರಾಗದು ಬ್ಯಾಡ. ನಾನೊಂಥರಾ ಅಂಗೇ...! ನನ್ನ ಮನಸ್ನಾಗೆ ಇದ್ದದ್ದನ್ನ ಇದ್ದಂಗೆ ಯೋಳ್ಬುಡ್ತೀನಿ.

ಆದ್ರೆ ಇಂಗ್ಯಾಕೇಳ್ದೆ ಅಂದ್ರೆ... ಇವತ್ತು ಇಲ್ಲಿ ಬಂದ ಕೆಂದೂಳು...(ಇದು ಕೇವಲ ಕಥೆ)-ಭಾಗ-1 ಅನ್ನೋ ಕತೆ(?!)ನೂ ಓದಿದೆ. ನೀವೇ ಯೋಳಿ... ಅದರಾಗೆ ಮುಂದ್ವರ್ಸದು ಯೋನೈತೇ ಅಂತ. ಅದ್ಕೇ ಇಂಗೆಲ್ಲ ಬರ್ದೆ. ಆದ್ರೆ ನಿಮ್ಮ 'ಕಗ್ಗಂಟು' ಕತೆ ಮದ್ಲಿನ ಎಳ್ಡು ಬಾಗದ ನಂತ್ರ ಭಾಳಾ ಕುತೂಅಲ ಉಟ್ಟುಸ್ತು. ಅಷ್ಥ

ಪೂನಾವಾಲ (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 03/31/2009 - 15:20

ರಾಜೇಶ ರವರೇ...

ನಿಮ್ಮ ಉತ್ತರಕ್ಕೆ ದನ್ಯವಾದಗಳು.
ನಾನು ಇಂಗೆ ಯೇಳಿವ್ನಿ ಅಂತ ನೀವಾಗ್ಲೀ ಇಲ್ಲಾ ಯಾರೇ ಆಗ್ಲೀ ಬೇಜಾರಾಗದು ಬ್ಯಾಡ. ನಾನೊಂಥರಾ ಅಂಗೇ...! ನನ್ನ ಮನಸ್ನಾಗೆ ಇದ್ದದ್ದನ್ನ ಇದ್ದಂಗೆ ಯೋಳ್ಬುಡ್ತೀನಿ.

ಆದ್ರೆ ಇಂಗ್ಯಾಕೇಳ್ದೆ ಅಂದ್ರೆ... ಇವತ್ತು ಇಲ್ಲಿ ಬಂದ ಕೆಂದೂಳು...(ಇದು ಕೇವಲ ಕಥೆ)-ಭಾಗ-1 ಅನ್ನೋ ಕತೆ(?!)ನೂ ಓದಿದೆ. ನೀವೇ ಯೋಳಿ... ಅದರಾಗೆ ಮುಂದ್ವರ್ಸದು ಯೋನೈತೇ ಅಂತ. ಅದ್ಕೇ ಇಂಗೆಲ್ಲ ಬರ್ದೆ. ಆದ್ರೆ ನಿಮ್ಮ 'ಕಗ್ಗಂಟು' ಕತೆ ಮದ್ಲಿನ ಎಳ್ಡು ಬಾಗದ ನಂತ್ರ ಭಾಳಾ ಕುತೂಅಲ ಉಟ್ಟುಸ್ತು. ಅಷ್ಠರಮಟ್ಟಿಗೆ ನಿಮ್ಮ ಕತೆ ಸಾರ್ತಕವಾಗಿದೆ.

ಅಶ್ವಿನಿ ಮಂಗಳ, 03/31/2009 - 16:58

ಕಥೆ ತುಂಬಾ ಚೆನ್ನಾಗಿದೆ, ಓದುತಾ ಇದ್ದಾರೆ ಮುಂದೆ ಏನು ಅನ್ನೋ ಪ್ರಶ್ನೆ ಹುಟ್ಟುತದೆ. ಅದರಲ್ಲೂ ಬಸವರಾಜನ ಸ್ವಲ್ಪ ಕಾಮಿಡಿ ಪ್ರಸಂಗಗಳು ಚೆನ್ನಾಗಿದೆ, ಮುಂದಿನ ಕೊನೆಯ ಭಾಗ ಬೇಗ ಬರಲಿ, ಕಥೆ ಕುತೂಹಲಕಾರಿ ಆಗಿದೆ. ನನ್ನ ಪ್ರಕಾರ ಅನುಶಳನ್ನು ಅವಳ ಫ್ರೆಂಡ್ ಗೌತಮ್ ಮಾಡಿರಬೇಕು ಅನಿಸುತ್ತೆ.

ವಿಕ್ರಂ ಮಂಗಳ, 03/31/2009 - 18:22

ರಾಜೇಶ್ ರವರು ಕೊಲೆಯನ್ನು ಯಾರಿಂದ ಬೇಕಾದರೂ ಮಾಡಿಸಬಹುದು.... ಚಂದ್ರಹಾಸ, ಗೌತಮ್, ಸೌಜನ್ಯ..
ಆದರೂ ಸೌಜನ್ಯ ಕೊಲೆ ಮಾಡಿರುವ ಸಾಧ್ಯತೆಗಳೇ ಜಾಸ್ತಿ.

ಪೂನಾವಾಲ (ಪ್ರಮಾಣಿಸಲ್ಪಟ್ಟಿಲ್ಲ.) ಧ, 04/08/2009 - 18:30


ರಾಜೇಶ ಹೆಗಡೆಯವರೇ...!

ಎಲ್ಲಿ ... ನಿಮ್ಮ ಕಗ್ಗಂಟು ಭಾಗ-5 ರ ಪತ್ತೆಯೇ ಇಲ್ಲ. ಆದರೂ ನಿಮ್ಮ ಇತರ ಲೇಖನಗಳು ಸಮಯಕ್ಕೆ ಸರಿಯಾಗಿ(?) ಇಲ್ಲಿ ಹಾಜರಾಗುತ್ತಿವೆ!

ನಿಜವಾಗಿಯೂ ನಮಗೆ ಇದೇ ಒಂದು ಬಿಡಿಸಲಾರದ(ಅಸಂಖ್ಯಾತ/ ಅಂತ್ಯವಿಲ್ಲದ ಭಾಗಗಳುಳ್ಳ) ಕಗ್ಗಂಟು ಹಾಗೂ ಅತಿ ವಿಸ್ಮಯ...!!!

ನೀವೂ ಇದನ್ನ ಒಪ್ಪುತ್ತೀರಲ್ವೇ.

xyz (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 04/16/2009 - 16:07

ಕಗ್ಗನ್ತು ಭಗ - 4 ಬೆಗ ಕಲುಹಿಸಿ , ತಮ್ಬ ಕುತುಹಲ ಈದೆ ಭೆಗ ಕಲುಹಿಸಿ..............

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.