Skip to main content

     ನುಷ್ಯನ ಸ್ವಾರ್ಥಗಳು
ಮೂಢನಂಬಿಕೆಗಳಿಗೆ ಜನ್ಮ ನೀಡುತ್ತವೆ. ದೇವರ ಹೆಸರಿನಲ್ಲಿ ಮುಗ್ಧ ಪ್ರಾಣಿಗಳನ್ನು
ಅಮಾನುಷವಾಗಿ ಹತ್ಯೆ ಮಾಡುವ ಕಟುಕ ಮನುಷ್ಯನ ಕುತ್ಸಿತ ಬುದ್ಧಿಗೆ ಕಡಿವಾಣವೆಲ್ಲಿ..? ಆದಿ
ಕಾಲದಲ್ಲಿ ನರಬಲಿ ಇತ್ತೆಂದು ಪುರಾಣ ಹೇಳಲ್ಪಡುತ್ತದೆ. ಇಂದಿನ ಆಧುನಿಕ ಜಗತ್ತಿನಲ್ಲಿ
ಸಹ ಅದು ಸಂಪೂರ್ಣವಾಗಿ ನಿರ್ಮೂಲನೆಯಾಗಿಲ್ಲ  ಎನ್ನುವುದು ಕಟು ಸತ್ಯ! ಅಲ್ಲೋ ಇಲ್ಲೋ
ನರ ಬಲಿ ಪ್ರಕರಣಗಳು ವರದಿಯಾಗುತ್ತಲೆ ಇರುತ್ತವೆ.

ಇತ್ತೀಚೆಗೆ ಕುಮಟಾ ತಾಲೂಕಿನ ಹಳ್ಳಿಯೊಂದರ ದೇವಸ್ಥಾನದಲ್ಲಿ ರಾತ್ರಿ ತಾಯಿ ಜೊತೆ
ಮಲಗಿದ್ದ ಹೆಣ್ಣು ಮಗಳು ಬೆಳಗಾಗುವಷ್ಟರಲ್ಲಿ ಕಣ್ಮರೆಯಾಗುವುದರ ಹಿಂದೆಯೂ ಈ ನರಬಲಿಯ ಬಲೆ
ಇರಬಹುದು ಎನ್ನುವುದು ಸಹ ನಿಗೂಢ ಸತ್ಯ!?
     ಪೂರಕವಾಗಿ, ಪ್ರಜ್ಞಾವಂತರ ಪ್ರದೇಶ ಎಂದು ಕರೆಸಿಕೊಳ್ಳುವ ತಾಲೂಕಿನ ಅಘನಾಶಿನಿ
ವಲಯದಲ್ಲಿ ಕೂಡಾ ಇಂಥಹ `ಮೂಢರ ಪದ್ಧತಿ'ಯೊಂದು ಇನ್ನೂ ಜೀವಂತವಾಗಿದೆ ಎನ್ನುವುದು ತುಸು
ನಾಚಿಕೆಗೇಡಿನ ಸಂಗತಿ. ಪ್ರತಿ ವರ್ಷ ಈ ವಲಯದ ಗ್ರಾಮ ದೇವತೆಯ `ಬಾಡ ಜಾತ್ರೆ'
ವಿಜೃಂಭಣೆಯಿಂದ ನಡೆಯುತ್ತದೆ. ಹಾಗೆ ಜಾತ್ರೆಯ ಮಾರನೆ ದಿನ ಪ್ರಾಣಿ ಬಲಿ ಸಹ
ಕೊಡಲಾಗುತ್ತದೆ. ಶ್ರೀ ಕಾಂಚಿಕಾ ಪರಮೇಶ್ವರಿ ದೇವಿಯ ಪರಿವಾರ ದೇವತೆಗಳಾದ ಹೊಸಬದೇವ,
ಹೊಲಿಯಾಡ್ರ ಮತ್ತು ಮೊಟಗುಳಿ ಜಟಕಕ್ಕೆ ಹರಕೆ ಹೊತ್ತ ಕೆಲವು ಭಕ್ತಾದಿಗಳು ಕೋಳಿ-ಕುರಿ
ಬಲಿ ನೀಡುವ ಮೂಲಕ ತಮ್ಮ ಭಕ್ತಿ ಪ್ರದರ್ಶಿಸುತ್ತಾರೆ!!? ತನ್ಮೂಲಕ ದೈವ ಭಕ್ತರಂತೆ
ವರ್ತಿಸಿ ಭಕ್ತಿಯ ಪರಾಕಾಷ್ಠೆ ಮೆರೆಯುತ್ತಾರೆ!!

ಇವರು  ಭಕ್ತರು..(?)

     ಸುಮಾರು 300 ಕ್ಕಿಂತಲೂ ಹೆಚ್ಚು ಕೋಳಿ ಹಾಗೂ
ಕುರಿಗಳನ್ನು ಇಲ್ಲಿ ಭಕ್ತಿಯ ಹೆಸರಲ್ಲಿ, ದೇವರಿಗೆ ಬಲಿ ನೀಡಲಾಗುತ್ತದೆ. ಕಾಂಚಿಕಾ
ಪರಮೇಶ್ವರಿ ದೇವಸ್ಥಾನದ ಕೆಳಗಡೆ ಬಲಭಾಗದಲ್ಲಿರುವ `ಹೊಸಬದೇವ'ರಿಗೆ ಈ ಬಲಿಯಲ್ಲಿ
ಹೆಚ್ಚಿನ ಪಾಲು ಮೀಸಲಾಗಿರುವುದು ವಿಶೇಷ! ಜಾತ್ರೆಯ ಮಾರನೆ ದಿನ ಸಾಯಂಕಾಲ ಹರಕೆ ಹೊತ್ತ
ಭಕ್ತ(?) ವೃಂದದಿಂದ ದೇವರಿಗೆ ಈ ಬಲಿ ಕಾರ್ಯ ನಡೆಯುತ್ತದೆ. ರೂ. 200, 300 ಗೆ ಒಂದೊಂದು
ನಾಟಿ ಕೋಳಿ ಖರೀದಿಸಿ ಹರಕೆ ತೀರಿದುತ್ತಾರೆ.

     ಈ ಸಂದರ್ಭದಲ್ಲಿ ಆ ದೇವಸ್ಥಾನದ ವಾತಾವರಣ ಸಂಪೂರ್ಣ ರಾಕ್ಷಸಿ ಪ್ರವೃತ್ತಿಗೆ
ಬದಲಾಗಿರುತ್ತದೆ. ಒಂದಿನಿತು ಕರುಣೆಯಿಲ್ಲದೆ ಕಚಕಚನೆ ಕೋಳಿಯ ರುಂಡವನ್ನು
ಚಂಡಾಡುತ್ತಾರೆ. ವಿಲವಲನೆ ಒದ್ದಾಡುವ ಅವುಗಳ ರುಂಡ-ಮುಂಡಗಳ ದೃಶ್ಯ ಹೃದಯ
ವಿದ್ರಾವಕವಾದುದು. ಸಾಯಂಕಾಲ 6ರ ಸುಮಾರಿಗೆ ಪ್ರಾರಂಭವಾದ ಈ ಮಾರಣಹೋಮ ಕೃತ್ಯ ರಾತ್ರಿ
11ರ ವರೆಗೂ ನಡೆಯುತ್ತದೆ!! ಅಂದರೆ ಸರಿಸುಮಾರು ಇಲ್ಲಿ 300ಕ್ಕೂ ಹೆಚ್ಚು ಕೋಳಿಯನ್ನು
ಬಲಿ ನೀಡಲಾಗುತ್ತದೆ. ಇದರ ಪರಿಣಾಮ ದೇವಸ್ಥಾನದ ಪ್ರಾಂಗಣ ರಕ್ತದ ಮಡುವಿನಲ್ಲಿ ತುಂಬಿ,
ರಣರಂಗದ ಚಿತ್ರಣ ಉಂಟಾಗಿರುತ್ತದೆ!! ನೂರಾರು ಕೋಳಿಯ ತಲೆಗಳು ಅಲ್ಲೆ ರಾಶಿ ರಾಶಿಯಾಗಿ
ಬಿದ್ದು ಭೀಕರ ವಾತಾವರಣ ಸೃಷ್ಠಿಯಾಗಿರುತ್ತದೆ!!

     ಜಾತ್ರೆಯ ಮಿಠಾಯಿ ತಿಂದು, ಮಾಂಸ ತಿನ್ನೋಣ ಎಂದುಕೊಂಡು `ಖಾರ ಮುಕ್ಕುವ' ಮೂಢಜನರ
ದುರಾಸೆಗೆ ಪ್ರತಿಭಟಿಸಲು ಆಗದ ಕುರಿ-ಕೋಳಿಗಳು ಸರದಿಯೋಪಾದಿಯಲ್ಲಿ ತಮ್ಮ ಜೀವ
ತೆತ್ತುತ್ತವೆ. ಬಂಡ ತನದಿ ರುಂಡ ಚೆಂಡಾಡಿ, ಉಂಡು ತೇಗುವ ತಾಮಸ ಪ್ರವೃತ್ತಿಗೆ ಪೂರ್ಣ
ವಿರಾಮ ಹಾಕಬೇಕಾಗಿದೆ.


ಬಲಿಗೆ ಒಯ್ಯುತ್ತಿರುವ ಕುರಿಗಳು ....

     ವಾರ್ಷಿಕ  ಜಾತ್ರೆ ಬಂಡಿ ಹಬ್ಬ ಎಂದು ಹೇಳುತ್ತ, ಮೂಕ ಪ್ರಾಣಿಗಳ ರುಂಡ ಕಡಿದು
ರಕ್ತದ ಓಕುಳಿಯಲಿ ಮಿಂದೆದ್ದು, ಮನೆಗೆ ಕೊಂಡೊಯ್ದು ಉಪ್ಪು-ಹುಳಿ-ಖಾರ ಬೆರೆಸಿ
ಉದರಕ್ಕಿಳಿಸಲು ದೇವರ ಸನ್ನಿಧಿಯ ನೆಪವೇ ಬೇಕೆ...? ಸಹಸ್ರಾರು ಸಂಖ್ಯೆಯಲ್ಲಿ ಪ್ರಾಣಿಗಳ
ತಲೆಯನ್ನು ಸರಸರನೆ ಸರಿಸುತ್ತ, ವಿರೋಧಿಸಿದವರಿಗೆ `ಇದು ದೈವ ಸಂಕಲ್ಪಿತ; ಮಾಡದಿರೆ ದೈವ
ಶಾಪಕ್ಕೆ ಗುರಿಯಾಗಬೇಕಾಗುತ್ತದೆ' ಎಂದು ಬೊಬ್ಬಿಡುವ ಈ ಜನರ ಕೃತ್ಯಕ್ಕೆ ಕಡಿವಾಣ ಹಾಕಲು
ಬಿಗಿಯಾದ ಕಾನೂನು ಜಾರಿಯಾಗಬೇಕಿದೆ.

ರಾಡಿ ಮನಸ್ಸುಗಳು:

     ಪ್ರಾಣ ಭೀತಿಯಿಂದ ಕಿರುಚುತ್ತ ನೆಲಕ್ಕುರುಳುವ ಪ್ರಾಣಿ ಪಕ್ಷಿಗಳ ಕೂಗು, ಕಲ್ಲು
ಮನಸ್ಸಿನಲ್ಲೂ ದಯೆ, ಆದೃತೆಯನ್ನು ಭರಿಸುವಂತದ್ದು. ಆದರೆ `ಮೌಢ್ಯತೆಯ ಮಾಡಿನಲ್ಲಿ ಮಸಣವ
ಸೃಷ್ಠಿಸುತ್ತ, ಮರಣ ಮೃದಂಗ ಬಾರಿಸುವ ರಾಡಿ ಮನಸ್ಸಿಗೆ ಇವೆಲ್ಲಿ ಅರ್ಥವಾಗಬೇಕು..!?
ಪ್ರಾಣ ಪೂರಣ(ತುಂಬ) ಮಾಡಲಾಗದವನಿಗೆ, ಪ್ರಾಣ ಹರಣ ಮಾಡುವ ಹಕ್ಕೆಲ್ಲಿಯದು? ಧರ್ಮದ
ಹೆಸರಿನಲಿ ದುರ್ಮಾರ್ಗದ  ದುಂಧುಬಿಯನ್ನು ಮೊಳಗಿಸುತ್ತ ಮೆರೆಯುವ ದುರಾಸೆಯ ದುರಾಂಧತೆಗೆ,
ದೈವಾಚರಣೆಯ ತೇಪೆ ಹಚ್ಚುವ ಈ ದುಷ್ಟ ಪದ್ಧತಿಗೆ ಅಧಿಕಾರಸ್ಥರ, ಜನನಾಯಕರ ಸಾಥ್ ಬೇರೆ!

     ದೇವ-ದೇವತೆಯರು ತಾಯಿ ತಂದೆಯಂತೆ ಪೂಜೆಗೊಳ್ಳುತ್ತಾರೆ. ಜಗದ ಜನನಿ ಜನಕರು ತಮ್ಮದೆ
ಕಂದಮ್ಮಗಳನ್ನು ತಮಗೆ ಬಲಿ ನೀಡಿ ಎಂದು ಬಯಸುತ್ತಾರೆಯೇ..? ಕರುಣೆಯ ಹರಣ ಮಾಡಿ, ಕಟುಕತನ
ಮೆರಯುತ್ತ ಸಂಪ್ರದಾಯ ಸೋಗಿನಲ್ಲಿ ಸಾವಿನ ಸುಗ್ಗಿಯಾಡುವ ಸೊಕ್ಕಿನ ಜನರ ಸದ್ದಡಗಿಸಿ,
ಪಾಶವೀಕೃತ್ಯಕ್ಕೆ ಪಾಶ ಹಾಕಬೇಕೆನ್ನುವುದು ಸಹೃದಯರ, ಪ್ರಾಣಿ ಪ್ರೀಯರ ಹಾಗೂ ಪ್ರಜ್ಞಾವಂತ
ಸಮುದಾಯದ ಒಕ್ಕೊರಲಿನ ಧ್ವನಿಯಾಗಿದೆ. ಈ ವಿಷಯದ ಕುರಿತು ಸರ್ಕಾರ ಗಂಭೀರ ಚಿಂತನೆ ನಡೆಸಿ
ಸೂಕ್ತ ಕ್ರಮ ಕೈಗೊಂಡು ಈ  ಪಾಪ ಕೃತ್ಯಕ್ಕೆ ಕಡಿವಾಣ ಹಾಕಬೇಕಾಗಿದೆ.

ಜಯಾ ಜಿ. ಬಿ, ೯೪೪೮೨೬೫೨೩೭೮

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

mukundachiplunkar ಮಂಗಳ, 09/02/2014 - 16:24

ವಿಶಯ ತು೦ಬಾ ಗ೦ಭೀರವಾದುದು. ಇಲ್ಲಿ ಮಾ೦ಸಾಹಾರಿಗಳಿಗೆ ಇದು ಒ೦ದು ನೆವವಾಗಿದೆ ತಿ೦ದು ತೇಗಲು. ದೇವರಿಗೆ ಹರಕೆ ಎ೦ಬುದು ಒ೦ದು ನೇವನವಾಗಿದೆಯಲ್ಲದೇ ಮತ್ತೇನು. ಮ೦ಸಾಹಾ

ಮಾ೦ಸಾಹಾರಿಗಳೇ ಅಲ್ಲವೇ ಇತ್ತೀಚೆಗೆ ದಿನಾ ನಾವು ಕೇಳಿ/ನೋಡುತ್ತಿರುವ ಅತ್ಯಾಚಾರ/ಕಳ್ ತನ/ದರೋಡೆ/ಸುಲಿಗೆ ಇತ್ಯಾದಿ ವಾಮಾಚಾರಗಳನ್ನು ಮಾಡುತ್ತಿರುವುದು.ಇದಕ್ಕೆ ಪರಿಹಾರ

ಹಾರ ಸಸ್ಯಾಹಾರ ಮಾತ್ರ. ಆದರೆ ಇದು ಅಸಾಧ್ಯ. ಕಾರಣ ಮಾ೦ಸಾಹಾರಿಗಳ ಓಟ್ ಗಳೇ ಈಗ ನಿರ್ಣಯಾತ್ಮಕ ವಲ್ಲವೇ.ವ್ಯಭಿಚಾರವನ್ನೇ ಕಾನೂನುಬದ್ಧವಾಗಿ ಮಾಡಬೇಕೆನ್ನುವ

ಈ ಕನ್ನಡ ಸಾಹಿತಿಯಮಾತನ್ನು (ನಿಸಾರ ಅಹಮದ್)ಅ೦ಗೀಕರಿಸಿದರೆ ಅ೦ದರೆ ಎಲ್ಲವನ್ನೂ (ಅಕ್ರಮ)ಸಕ್ರಮವನ್ನಾಗಿಸುವುದು.ಇದೇ ಕಲಿಯುಗದ ಮಹಿಮೆಯು ಕಾಣಬ೦ತೀಗ.ನಗುವುದೋ

ಅಳುವುದೋ--------------

 

Geeta G Hegde ಶುಕ್ರ, 01/29/2016 - 18:05

         ದೇವರಿಗೆ ಪ್ರಾಣಿ ಬಲಿ ಕೊಡುವುದನ್ನು ಕಣ್ಣಾರೆ ಕಂಡವಳು ನಾನು. ಕಾರಣ ನಾನು ಅಪ್ಪಟ ಸಸ್ಯಾಹಾರಿ ಆದರೂ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಕೆಲಸದ ನಿಮಿತ್ತ ಸುಮಾರು ಎರಡೂವರೆ ವಷ೯ ಇದ್ದೆ. ಅಲ್ಲಿಯ ಒಂದು ದೇವಸ್ಥಾನದಲ್ಲಿ ಪ್ರತಿ ವಷ೯ ವಿಜೃಂಭಣೆಯಿಂದ ಪೂಜೆ ನಡೀತಾ ಇತ್ತು.  ಈ ಪೂಜೆಗೆ ಮನೆಯಲ್ಲಿ ಇರುವ ಪ್ರತಿಯೊಬ್ಬರ ಹೆಸರಲ್ಲಿ ಒಂದು ಕೋಳಿ ಬಲಿ ಕೊಡುವ ಪದ್ದತಿ. ನಾನು ಗೊತ್ತಿಲ್ಲದೆ ಹೋಗಿ ಆ ದೃಶ್ಯ ಕಂಡು, ಆ ಕೋಳಿಗಳ ಆಕೃಂದನ ನಿಜಕ್ಕೂ ಸಂಕಟ ತರಿಸಿತು. ರಾಶಿ ರಾಶಿ ಕೋಳಿಗಳ ಮಾರಣ.  ದೇವರ ಹೆಸರಲ್ಲಿ ಪಾಪ ಒಂದು ಜೀವ ಹತ್ಯೆ ಮಾಡೋದು ತಪ್ಪು.  ಈ ಪದ್ದತಿ ನಿಲ್ಲಿಸ ಬೇಕು.

ಬಿ ಎ ಮಂಜುನಾಥ್ ಶರ್ಮ ಮಂಗಳ, 05/23/2017 - 16:14

ನಿಜ, ಇದು ನಾವು ದೇವರಿಗೆ ಮಾಡುತ್ತಿರುವ ಅವಮಾನ.ಇಂದು ವಿಧ್ಯಾವಂತರೆನಿಸಿಕೊಂಡವರು ಸಹ ಈ ಜಾಡಿನಲ್ಲಿ ಮುಂದುವರೆಯುತ್ತಿರುವುದು

 ಕೂಡ ಮುಜುಗರದ ಸಂಗತಿ.  ನಾಲಿಗೆಯ ಚಪಲಕ್ಕೆ ದೇವರ ಹೆಸರಿಟ್ಟು ಪ್ರಾಣಿಗಳ ಬಲಿ ಕೊಡುತ್ತಿರುವುದು ಅಪಾಯಕಾರಿ. 

  • 1570 views