ಬಾರ್ ನಲ್ಲೊಂದು ದಿನ
ಬಾರಲ್ಲಿ ಕೂತಿದ್ದೆ. ಸಿಕ್ಸ್ಟಿ ಎಮ್.ಎಲ್. ಮುಗಿಸಿ ಇನ್ನೊಂದು ಥರ್ಟಿ ಪೆಗ್ ಗೆ ಕೈ ಹಾಕಿದ್ದೆ. 'ಕ್ಯಾನ್ ಐ ಸಿಟ್ ಹಿಯರ್?' ಎನ್ನುವ ವಿನಂತಿಯ ವಾಯ್ಸ್ ಕೇಳಿ ತಲೆಯೆತ್ತಿ ನೋಡಿದೆ. ಎದುರಿಗೆ ನನ್ನಷ್ಟೇ ವಯಸ್ಸಿನ ಯುವಕನೊಬ್ಬ ನಿಂತಿದ್ದ. 'ಓ ಯೆಸ್' ಎಂದ ನನ್ನ ಮಾತನ್ನು ಅನುಸರಿಸುತ್ತಾ ನನ್ನ ಎದುರಿನ ಸೀಟಿನಲ್ಲಿ ಆಸೀನನಾದನವನು. ವೀಕೆಂಡ್ ನಲ್ಲಿ ಟೇಬಲ್ ಗಳೆಲ್ಲಾ ತುಂಬಿದಾಗ ಇಂತಹ ಬಾರ್ ಫ್ರೆಂಡ್ಸ್ ಗಳು ಸಿಗುವುದು ನನಗೇನೂ ಹೊಸತಾಗಿರಲಿಲ್ಲ. ಅವನು ಮುಗುಳ್ನಕ್ಕು 'ಹಾಯ್ ಆಯ್ ಎಮ್ ರಾಜೀವ್' ಎಂದು ಕೈ ಮುಂದೆ ಮಾಡಿದನು. ಲೈಟಾಗಿ ಶೇಕ್ ಆಗುತ್ತಿದ್ದ ಕೈ ಮುಂದೆ ಚಾಚಿ ಅವನ ಹ್ಯಾಂಡ್ ಶೇಕ್ ಮಾಡಿದೆ. ಅವನು ಬೇರರ್ ನನ್ನು ಕರೆದು ಚಿಕನ್-ಸಿಕ್ಟ್ಸಿಫೈ ಮತ್ತು ಪೆಪ್ಸಿ ಆರ್ಡರ್ ಮಾಡಿದನು. ನಾನು ಅವನಿಗೆ 'ಡ್ರಿಂಕ್ಸ್ ತಗೊಳೋಲ್ವಾ?' ಎಂದು ಕೇಳಿದೆ. 'ಇಲ್ಲ' ಎಂದನವನು. 'ಈ ಸುಖಕ್ಕೆ ಬಾರ್ ಗೆ ಯಾಕೆ ಬರಬೇಕಿತ್ತೋ...' ಎಂದುಕೊಂಡೆ ನಾನು ಮನಸ್ಸಿನಲ್ಲಿ. 'ಇವತ್ತು ಮಾತ್ರ ತಗೊಳೋಲ್ವಾ ಅಥವಾ ಯಾವತ್ತೂ ತಗೊಳೋಲ್ವಾ?' ಎಂದು ಕೇಳಿದೆ. 'ಮುಂಚೆ ತಗೋತಿದ್ದೆ, ಇವಾಗ ಬಿಟ್ಟಿದೀನಿ' ಎಂದನವನು ಬೇರರ್ ತಂದಿಟ್ಟ ನೀರಿನ ಗ್ಲಾಸ್ ಎತ್ತಿಕೊಳ್ಳುತ್ತ. ಟೇಬಲ್ ಮೇಲಿದ್ದ ಗ್ಲಾಸ್ ಅನ್ನು ಎತ್ತಿಕೊಂಡು 'ನಾನು ಕೂಡ ಐದಾರು ಸಲ ಬಿಟ್ಟಿದೀನಿ' ಎಂದೆ ಉಢಾಪೆಯಿಂದ. ಅದಕ್ಕವನು ಏನೂ ಹೇಳದೆ ಮುಗುಳ್ನಕ್ಕನು. 'ನಿಮ್ಮ ಹೆಸರು ಹೇಳಲೇ ಇಲ್ಲ ನೀವು' ಎಂದು ಮಾತು ಬದಲಾಯಿಸಿದನು. 'ಹೆಸರಲ್ಲೇನಿದೆ ಬಿಡಿ, ಸದ್ಯಕ್ಕೆ ಸಖ ಅಂತಿಟ್ಕೊಳ್ಳಿ' ಎಂದೆ. 'ಅಂದ್ರೆ?' ಎಂದನವನು ಅರ್ಥವಾಗದೆ. 'ಪ್ರೆಂಡ್ ರೀ' ಎಂದೆ. 'ಹೋ...' ಎಂದನವನು. 'ಕುಡಿಯೋದನ್ನ ಕಲಿಯೋದಕ್ಕಿಂತ, ಕುಡಿಯೋದನ್ನು ಬಿಡೋಕೆ ತುಂಬಾ ರೀಸನ್ಸ್ ಇರತ್ತೆ. ನೀವು ಕುಡಿಯೋದನ್ನ ಬಿಡೋಕೆ ಏನು ರೀಸನ್ ಅಂತ ಹೇಳಿ' ಎಂದೆ ನಾನು. ನನ್ನೊಳಗೆ ಇಳಿದ ಪರಮಾತ್ಮ ನಾಲಿಗೆಗೆ ಕೆಲಸ ನೀಡಲು ಶುರು ಮಾಡಿದ್ದನು. ಬೇರರ್ ಬಂದು ಅವನು ಆರ್ಡರ್ ಮಾಡಿದ ಐಟಮ್ಸ್ ಗಳನ್ನು ಟೇಬಲ್ ಮೇಲೆ ಜೋಡಿಸಿ ಹೋದನು. ಅವನು ಫೋರ್ಕ್ ಅನ್ನು ಚಿಕನ್ ಫೀಸ್ ಗೆ ಚುಚ್ಚಿ 'ಹಾ ವೈ ನಾಟ್, ಹೇಳ್ತೀನಿ' ಎಂದು ಚಿಕನ್ ಫೀಸ್ ಅನ್ನು ಬಾಯಿಗಿಟ್ಟುಕೊಂಡನು. 'ನಾನು ಎಲ್ಲ ಹುಡುಗರಂತೆ ಟೀನೇಜ್ ನಲ್ಲಿ ಫ್ರೆಂಡ್ಸ್ ಜೊತೆ ಸೇರಿ ಕುಡಿಯಲು ಕಲಿತೆ. ಮೊದಲೆಲ್ಲಾ ನ್ಯೂ ಇಯರ್ ಪಾರ್ಟಿ, ಬರ್ತ್ ಡೇ ಪಾರ್ಟಿ ಅಂತ ಶುರು ಆಗಿದ್ದು ಆಮೇಲೆಲ್ಲಾ ಕುಡಿಬೇಕು ಅನಿಸಿದಾಗೆಲ್ಲ ಪಾರ್ಟಿಯಾಯಿತು' ಎಂದು ಹೇಳತೊಡಗಿದನು. 'ಹಾ ಅದು ಸರಿ, ಕುಡಿಯೋದನ್ನ ಬಿಟ್ಟಿದ್ದು ಯಾಕೆ ಅಂತ ಹೇಳಿ' ಎಂದೆ ನಾನು. 'ನಾನು ಕುಡಿಯೋದು ನನ್ನ ಫ್ರೆಂಡ್ಸ್ ಗಳಿಗೆ ಮಾತ್ರ ಗೊತ್ತಿತ್ತು. ಮನೆಯವರಿಗೆ ಗೊತ್ತಾಗದ ಹಾಗೆ ಮೆಂಟೇನ್ ಮಾಡಿದ್ದೆ ಸುಮಾರು ಮೂರ್ನಾಲ್ಕು ವರ್ಷದವರೆಗೂ. ಒಮ್ಮೆ ನಮ್ಮ ಮನೆಗೆ ಪೂನಾದಿಂದ ನಮ್ಮ ಮಾವ ಹಾಗೂ ಅವರ 10 ವರ್ಷದ ಮಗ ಬಂದಿದ್ದರು. ಮಾವ ಡ್ರಿಂಕ್ಸ್ ಮಾಡುತ್ತಾರೆ. ಅವರು ಮನೆಗೆ ಬಿಯರ್ ತರಿಸಿದ್ದರು. ಊಟಕ್ಕೆ ಕುಳಿತಾಗ ನನಗೂ ಕುಡಿಯುವಂತೆ ಹೇಳಿದರು. ನಾನು ಕುಡಿಯುವ ವಿಷಯ ಮನೆಯವರಿಗೆ ತಿಳಿದಿರಲಿಲ್ಲ. ಆದ್ದರಿಂದ ಸಭ್ಯನಂತೆ ನನಗೆ ಅಭ್ಯಾಸ ಇಲ್ಲ ಎಂದು ಹೇಳಿದೆ. ಇದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಮಜಾಯಿಸಿ ನೀಡಿ ಅವರು ಕುಡಿಯತೊಡಗಿದರು. ಅವರ ಮಗನಿಗೂ ಕುಡಿಯಲು ಕೊಟ್ಟರು. ಅಷ್ಟು ಚಿಕ್ಕ ಹುಡುಗನಿಗೆ ತಂದೆಯೇ ಕುಡಿಯಲು ಕೊಡುವುದು ನನಗೆ ಇಷ್ಟವಾಗಲಿಲ್ಲ. ಆದರೂ ಏನೂ ಹೇಳದೆ ಸುಮ್ಮನಾದೆ. ಆ ಹುಡುಗನಿಗೆ ಅಭ್ಯಾಸವಾಗಿತ್ತು ಅನಿಸುತ್ತದೆ ಅವನು ಕುಡಿಯತೊಡಗಿದನು. ಬಿಯರ್ ಕುಡಿದ ಅಮಲಿನಿಂದ ಅವರ ಮಗ ಸ್ವಲ್ಪ ತುಂಟಾಟ ಮಾಡತೊಡಗಿದನು. ಅದರಿಂದ ಕೋಪಗೊಂಡ ತಂದೆ ಮಗನನ್ನು ಗದರಿಸಿದನು. ಸ್ವಲ್ಪ ಹೊತ್ತಿನ ನಂತರ ತಂದೆ ಮಗನಿಗೆ ಜಟಾಪಟಿ ಪ್ರಾರಂಭವಾಯಿತು. ಆ ಹುಡುಗನು ತಂದೆಗೆ ಕೆಟ್ಟ ಮಾತಿನಲ್ಲಿ ಬೈಯತೊಡಗಿದನು. ಅದರಿಂದ ಮಾವನಿಗೆ ಕೋಪವೇರಿ, ಅಪ್ಪನಿಗೇ ಬೈತೀಯಾ ರಾಸ್ಕಲ್ ಎಂದು ಆ ಹುಡುಗನಿಗೆ ಜೋರಾಗಿ ಹೊಡೆದರು.' ಮಾತನ್ನು ಮುಗಿಸಿ ರಾಜೀವ್ ಪೆಪ್ಸಿ ಬಾಟಲನ್ನು ಬಾಯಿಗಿಟ್ಟುಕೊಂಡು ಸಿಪ್ ಮಾಡತೊಡಗಿದನು. 'ಹೋ ಅದನ್ನು ನೋಡಿ ನಿಮಗೆ ಕುಡಿಯೋದರ ಮೇಲೆ ಅಸಹ್ಯ ಉಂಟಾಗಿ ಆವತ್ತಿಂದ ಕುಡ್ಯೋದನ್ನ ಬಿಟ್ಟುಬಿಟ್ರಾ?' ಎಂದೆ ನಾನು ನಗುತ್ತಾ. ಅವನು 'ಅದಕ್ಕಲ್ಲ' ಎಂದನು. ನನಗೆ ಆಶ್ಚರ್ಯವಾಗಿ ಗ್ಲಾಸ್ ಎತ್ತಿ ಗುಟುಕರಿಸಿ 'ಮತ್ಯಾಕೆ?' ಅಂದೆ. 'ಮಾವ ಮಗನಿಗೆ ಹೊಡೆದದ್ದು ನೋಡಿ ನನಗೆ ಕೋಪ ಬಂದಿತು. ನಾನು ಸ್ವಲ್ಪ ದೊಡ್ಡ ದನಿಯಲ್ಲಿ ಮಾವನನ್ನು ಗದರಿದೆ. ಅಷ್ಟು ಚಿಕ್ಕ ಹುಡುಗನಿಗೆ ಕುಡಿಯಲು ಕಲಿಸಿದ್ದು ನಿಮ್ಮ ತಪ್ಪು. ದೊಡ್ಡವರಾಗಿ ನೀವೇ ಮಕ್ಕಳಿಗೆ ಕೆಟ್ಟ ಬುದ್ಧಿ ಕಲಿಸಿದರೆ ಅದರಲ್ಲಿ ಅವನ ತಪ್ಪೇನಿದೆ ಎಂದೆ. ಆಗ ಮಾವ ನನ್ನ ಮೇಲೆ ರೇಗಾಡತೊಡಗಿದನು. ಆಗ ನನ್ನ ಅಮ್ಮ ಮಧ್ಯ ಪ್ರವೇಶಿಸಿ ಮಾವನಿಗೆ ಬುದ್ಧಿ ಹೇಳತೊಡಗಿದಳು. ನೀನು ಕುಡಿಯುವುದಲ್ಲದೇ ನಿನ್ನ ಮಗನಿಗೂ ಆ ಚಾಳಿಯನ್ನು ಕಲಿಸಿಕೊಡುತ್ತಿದ್ದೀಯಾ. ತಂದೆ ತಾಯಿಗಳು ಬೆಳೆಸಿದ ರೀತಿಯಲ್ಲಿಯೇ ಮಕ್ಕಳು ಬೆಳೆಯುವುದು. ಈಗ ನನ್ನ ಮಗನನ್ನೇ ನೋಡು. ಇಷ್ಪು ದೊಡ್ಡವನಾದರೂ ಅವನಿಗೆ ಕುಡಿಯುವ ಚಟ ಇಲ್ಲ. ಅವನು ಯಾವತ್ತೂ ಕುಡಿದಿಲ್ಲ. ನಾವು ಅವನನ್ನು ಹಾಗೆ ಬೆಳೆಸಿದ್ದೇವೆ ಎಂದಳು. ಅವಳು ಹೇಳಿದ ಮಾತು ನನ್ನ ಹೃದಯವನ್ನೇ ಇರಿದ ಹಾಗಾಯಿತು. ಜಗಳ ಅಲ್ಲಿಗೇ ಕೊನೆಯಾಯಿತಾದರೂ ನನ್ನೊಳಗಿನ ಸಂಘರ್ಷ ಅಲ್ಲಿಂದ ಆರಂಭವಾಯಿತು. ಅಮ್ಮ ನನ್ನ ಮೇಲೆ ನಂಬಿಕೆ ಇಟ್ಟುಕೊಂಡಿದ್ದಾಳೆಂದು ನನಗೆ ಗೊತ್ತಿತ್ತು. ಆದರೆ ಅದನ್ನು ಎಲ್ಲರೆದುರು ಧೈರ್ಯವಾಗಿ ಹೇಳಿಕೊಳ್ಳುವಷ್ಟು ನನ್ನ ಮೇಲೆ ನಂಬಿಕೆಯಿಟ್ಟುಕೊಂಡಿದ್ದಾಳೆ ಎಂದು ತಿಳಿದಿರಲಿಲ್ಲ. ಅಮ್ಮ ನನ್ನ ಮೇಲಿಟ್ಟಿರುವ ನಂಬಿಕೆ ಸುಳ್ಳು ಮಾಡಬಾರದೆಂದು ಆ ಕ್ಷಣವೇ ನಿರ್ಧರಿಸಿದೆ. ಅಂದಿನಿಂದಲೇ ಕುಡಿಯುವುದನ್ನು ಬಿಟ್ಟೆ. ಮೊದಲೆಲ್ಲಾ ಕಷ್ಟವೆನಿಸಿದರೂ ತಾಯಿ ಮುಖ ನೆನಪಾಗುತ್ತಲೇ ಕುಡಿತ ಬೇಡವೆನ್ನಿಸುತ್ತಿತ್ತು. ಈಗೆಲ್ಲ ಕುಡಿಯಬೇಕು ಅನಿಸುವುದಿಲ್ಲ. ಅದಾಗಿ ಮೂರು ವರ್ಷ ಕಳೆದಿದೆ' ಎಂದು ಹೇಳಿ ದೀರ್ಘವಾದ ನಿಟ್ಟುಸಿರೊಂದನ್ನು ಹೊರಚೆಲ್ಲಿದನವನು. ಅಚಾನಕ್ಕಾಗಿ ನನ್ನ ಕೈಯಲಿದ್ದ ಗ್ಲಾಸ್ ಟೇಬಲ್ ಮೇಲಿಳಿಯಿತು. ಅದರಲ್ಲಿದ್ದ ದ್ರವ ನಾನು ಸಣ್ಣವನಾಗಿದ್ದಾಗ, ನಾನು ಬೇಡವೆಂದು ಅತ್ತರೂ ಅಮ್ಮ ಮೂಗು ಹಿಡಿದು ಕುಡಿಸುತ್ತಿದ್ದ ಕಹಿ ಓಷಧದಂತೆ ಕಂಡಿತು. ಗಂಟಲು ಹಿಂಡಿದಂತಹ ಅನುಭವ. ಒಮ್ಮೆಲೇ ನಮ್ಮಮ್ಮ ನೆನಪಾದಳು. ಅವಳು ಕಣ್ಣೀರಿಟ್ಟಂತೆ ಭಾಸವಾಗತೊಡಗಿತು. ರಾಜೀವನ ಅಮ್ಮನ ಹಾಗೆ ನಮ್ಮಮ್ಮ ಕೂಡ ನನ್ನ ಮೇಲೆ ತುಂಬಾ ನಂಬಿಕೆಯನ್ನಿಟ್ಟುಕೊಂಡಿದ್ದಾಳೆ. ನಾನು ಕುಡಿಯುವ ವಿಷಯ ಅವಳಿಗೆ ತಿಳಿದರೆ ಅವಳು ಎಷ್ಟು ನೊಂದುಕೊಳ್ಳುತ್ತಾಳೋ ಎಂದು ಅನಿಸಿತು. ಅಮ್ಮಾ ಇಂದಿನಿಂದ ಕುಡಿಯುವುದಿಲ್ಲ. ನಿನ್ನ ಮೇಲಾಣೆ ಎಂದು ಮನಸ್ಸಿನಲ್ಲಿಯೇ ಶಪಥಗೈದೆ. 'ಥಾಂಕ್ಯೂ ಭಾಯ್' ಎಂದು ಹೇಳಿದೆ ರಾಜೀವನ ಕಡೆ ನೋಡಿ. ಚಿಕನ್ ತಿನ್ನುವುದರಲ್ಲಿ ಮಗ್ನನಾಗಿದ್ದ ಅವನಿಗೆ ಥ್ಯಾಂಕ್ಸ್ ಯಾಕೆಂದು ಅರ್ಥವಾಗದೆ 'ಯಾಕೆ?' ಎಂದು ಕೇಳಿದನು. 'ನೀನು ನನ್ನ ಕಣ್ಣು ತೆರೆಸಿದೆ' ಎಂದು ಹೇಳಿದೆ. ಅವನು ಸುಮ್ಮನೆ ನಗೆ ಆಡಿದನು. ನನಗೆ ಕುಡಿದದ್ದು ತಾಗಿದೆ ಅಂದುಕೊಂಡನೇನೋ ಮನಸ್ಸಿನಲ್ಲಿ. ಆದರೆ ನಾನು ಇನ್ನೆಂದೂ ಕುಡಿಯಲಾರೆನೆಂದು ಗಟ್ಟಿ ನಿರ್ಧಾರ ಮಾಡಿರುವೆನೆಂದು ರಾಜೀವನಿಗೆ ಮೋಸ್ಟ್ಲೀ ತಿಳಿಯಲಿಲ್ಲ.
- ಸ.Kha.
ಸಾಲುಗಳು
- Add new comment
- 363 views
ಅನಿಸಿಕೆಗಳು
ತುಂಬ ಚನ್ನಗಿದೆ.....
ತುಂಬ ಚನ್ನಗಿದೆ.....