ಪಂಪ ಪಂಪನಲ್ಲ!
ಎರಡು ಸಾವಿರದ ಎಪ್ಪತ್ತೈದನೇ ಇಸವಿ ನವೆಂಬರ್ ಒಂದೋ ಅಥವಾ ಎರಡೋ ತಾರೀಖಿನ ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ಧೋ ಎಂದು ಶೃತಿ ಹಿಡಿದು ಸುರಿಯುತ್ತಿರುವಾಗ
ಪಂಪಾ ಎಂಬ ಹೆಸರಿನ ೨೭ ವರ್ಷದ ತರುಣ ದಕ್ಷಿಣ ಭಾರತದ ಪ್ರಾಚೀನ ಭಾಷೆಗಳು ಎಂಬ ವಿಷಯದ ಮೇಲೆ ಇಂಗ್ಲೀಷಿನಲ್ಲಿ ಪಿ ಎಚ್ದಿ ಮಾಡುತ್ತಿರುವಾಗ ಅವನಿಗೆ ಗೊತ್ತಾದ ಕೆಲವು ವಿಷಯಗಳೆಂದರೆ
ಮೊದಲನೆಯದಾಗಿ- ತನ್ನ ತಾತ ತನಗಿಟ್ಟ ಹೆಸರು ಕನ್ನಡದ ಆದಿಕವಿಯೊಬ್ಬನ ಹೆಸರು.( ಆದಿ ಕವಿ ಮೀನ್ಸ್ ಫರ್ಸ್ಟ ಪೊಯೆಟ್ ಅಂತಾ ಬೂಗಲ್ ಸರ್ಚ್ ಮೂಲಕ ತಿಳಿದು ಕೊಂಡಿದ್ದ )
ಎರಡನೆಯದಾಗಿ ನಮ್ಮ ವಂಶದ ಪೂರ್ವಿಕರಿಗೆ ಈ ಭಾಷೆ ಮನೆ ಮಾತಾಗಿತ್ತು. ಕೊನೆಯದಾಗಿ ಕೇವಲ ಇಪ್ಪತ್ತು ವರ್ಷಗಳ ಹಿಂದೆ ಗತಿಸಿದ ತಮ್ಮ ತೊಂಬತ್ತೆಂಟು ವರ್ಷದ ತಾತನಿಗೆ ಅವರ ಹರೆಯದಲ್ಲಿ ಭರವಸೆಯ ಕವಿ ಅಂತ ರಾಜ್ಯೋತ್ಸವ ಪ್ರಶಸ್ತಿ ದೊರೆತಿತ್ತು.
ಗಗನಯಾತ್ರಿಗಳು ಧರಿಸುವಂತ ಉಡುಪನ್ನು ಧರಿಸಿದ್ದ ಪಂಪ ಅವನ ಸ್ನೇಹಿತರ ವಲಯದಲ್ಲಿ ಸಖತ್ ಫ್ಯಾಷನಬಲ್ ಅಂತಾನೇ ಗುರುತಿಸಲ್ಪಡುತ್ತಿದ್ದ. ಆಗಲೇ ಇಂಗ್ಲೀಷಿನಲ್ಲಿ ಅವನದೊಂದೆರೆಡು ಪುಸ್ತಕಗಳು ಪ್ರಿಂಟ್ ಆಗಿದ್ದವು.ತಾನು ಸರ್ವಜ್ನ ಅನ್ನೋಥರಾ ವರ್ತಿಸುತ್ತಿದ್ದ. ( ಸರ್ವಜ್ನ ಅಂದ್ರೆ ಎನೂ ಅಂತಾನೂ ಅವನು ಸುಮಾರು ನೂರೈವತ್ತು ವರ್ಷದ ಹಿಂದಿನ ಡಿಕ್ಷನರಿಯನ್ನು ಬೂಗಲ್ ವರ್ಡ್ ನಲ್ಲಿ ನೋಡಿ ತಿಳಿದುಕೊಂಡಿದ್ದ.) ಸಮಸ್ತ ನವನಾಗರೀಕರಂತೆ ಇರಲು ಯತ್ನಿಸುತ್ತಿದ್ದ ಪಂಪಾ ಅವರಿಗೆ ಕನ್ನಡದ ಹುಚ್ಚೊಂದು ಹಿಡಿದಿದ್ದು ಹೇಗೆಂದರೆ
"ಹಲೋ , ಮಾರ್ನಿಂಗ್, ಇವತ್ತು ಬೆಳಗ್ಗೆ ಸುಮಾರು ಐವತ್ತು ವರ್ಷದ ಹಿಂದಿನ ಕನ್ನಡ ಪತ್ರಿಕೆಯೊಂದನ್ನು ಓದಿದೆ, ಅದರಲ್ಲಿ ವಿಸ್ಮಯನಗರಿ ಎಂಬ ಪುರಾತನ ಬ್ಲಾಗನ್ನು ಸೂಚಿಸಿ, ಆ ಕಾಲದಲ್ಲಿ ಇದು ಒಳ್ಳೇ ಸದಭಿರುಚಿಯುಳ್ಳ ಬ್ಲಾಗೆಂದು ಹೆಸರಾಗಿತ್ತು ಅಂತ ಬರೆದಿದಾರೆ. ತಗೋ ನಿನ್ನ ರಿಸರ್ಚಿಗೆ ಹೆಲ್ಪಾಗಬಹುದು.ಅದರ ಲಿಂಕನ್ನು ಮೇಸೇಜು ಮಾಡ್ತೀನಿ" ಅಂತಾ ಹೇಳಿ ಫೋನು ಕಟ್ಟು ಮಾಡಿದ ಮರುಕ್ಷಣವೇ ಮೆಸೇಜಿನ ರಿಂಗು ಪ್ರವಾಹೋತ್ಪಾದಿಯಲ್ಲಿ ಅಲ್ಲಿನ ಮೌನವನ್ನು ಮುರಿದು ಹಾಕಿ , ಪಂಪನ ಗಮನವನ್ನು ತನ್ನೆಡೆಗೆ ಸೆಳೆದು, ಅವನು ತಕ್ಷಣವೇ ಪಿಸಿ ಬಳಿ ಹೋಗಿ ಅದರ ಲಿಂಕನ್ನು ಕನೆಕ್ಟು ಮಾಡಿದ ಮರುಕ್ಷಣವೇ ಅವನ ತಲೆಯಲ್ಲಿ ತಾನು ಪಿ ಎಚ್ಡಿ ಮಾಡಲು ಕಲಿತ ಕನ್ನಡ ಲಿಪಿಗಳು ನೆನಪಾಗಿ.................
ಏನು ಸುಖವೋ ಎಂಥಾ ಸುಖವೋ, ಸುಲಿದ ಬಾಳೆಯ ಹಣ್ಣು ಕನ್ನಡ, ರಾಜೇಶು ಯಾರು? ರೇವಣ್ಣ ಯಾರು? ಎಲ್ಲರೂ ಬ್ಲಾಗಿಗರು, ಬ್ಲಾಗಿಗರ ಸಂಗ ಏನು ಸುಖವೋ ಎಂಥಾ ಸುಖವೋ, ಕೆ ಎಲ್ಕೆ ಮುಖ ಹೇಗಿರಬಹುದು? ಕೆ ಎಸ್ ಎಸ್ ಅವರಿಗೆ ಸುಮಾರು ಎಷ್ಟು ಗರ್ಲ್ ಫ್ರೆಂಡ್ಸು ಇರಬಹುದು. ಎಷ್ಟು ಚೆನ್ನಾಗಿ ಬರೆದಿದ್ದಾರೆ, ಪ್ರೀತಿ, ಪ್ರೇಮ, ಕಾಮ, ಬದುಕು, ಸ್ನೇಹ ಎಷ್ಟು ಸುಂದರ ಹಾಗೂ ಕ್ಲಿಷ್ಟ ಪದಗಳು, ಸುಂದರ ಸುಂದರ ಕವಿತೆಗಳು, ಸಂಪ್ರದಾಯದಂತೆ ನಿಂತಿದ್ದ ಪುರಾತನ ಹೆಣ್ಣುಮಗಳಾದ ಅಚ್ಚು ಹೆಗಡೆ ಫೋಟೋಗಳೂ, ಆಗಿನ ಕಾಲದ ಭ್ರಷ್ಟಾಚಾರದ ಬಗ್ಗೆ ನಿಷ್ಟುರವಾಗಿ ಕ್ರಾಂತಿ ಮಾಡಿದ್ದ ಮತ್ತು ತನ್ನ ಬ್ಲಾಗಿನ ಹೆಸರಿನಲ್ಲಿ ಆಗಿನ ಕಾಲದಲ್ಲೇ ಪಿಲ್ಸು ಮತ್ತು ಪಲ್ಸು ಎಂಬ ಎರಡು ಇಂಗ್ಲೀಷ ಪದಗಳನ್ನು ಹಾಕಿಕೊಂಡಿದ್ದ ಉಮಾಶಂಕರೂ, ತನ್ನ ಮದುವೆಯನ್ನು ಕನ್ನಡದ ನಾಡ ಹಬ್ಬದಂತೆ ಆಚರಿಸಿದ ಶ್ರೀನಿವಾಸೂ ಮತ್ತು ಅವರ ಪರ ಮತ್ತು ವಿರೋಧ ಕಮೆಂಟುಗಳು......ಇತ್ಯಾದಿ ಇತ್ಯಾದಿಗಳೂ ( ಇತ್ಯಾದಿ ಎಂದರೆ ಎಕ್ಸೆಟ್ರಾ ಎಂಬ ಪದದ ಕನ್ನಡ ರೂಪ-ಬೂಗಲ್ ವರ್ಡ್)
ಕನ್ನಡದ ಹುಚ್ಚು ಅನಿರ್ವಚನೀಯ
ಹೀಗಿರಲಾಗಿ ಪಂಪಾ ದಿನಗಟ್ಟಲೇ ವಿಸ್ಮಯನಗರಿಯಲ್ಲಿ ಕಳೆಯುತ್ತಿರಲು, ಒಂದು ದಿನ ಸ್ವರೂಪ ಎಂಬ ಸಣ್ಣಕಥೆಯೊಂದನ್ನು ನೋಡಿದ. ಸುಮಾರು ಚಿಕ್ಕದೇ ಆಗಿದ್ದರಿಂದ, ಸಾಕಷ್ಟು ಬಿಡುವೂ ಇದ್ದಿದ್ದರಿಂದ ಅದನ್ನು ತನ್ನ ಪಿಸಿಯಲ್ಲಿದ್ದ ಮೂರ್ನಾಲ್ಕು ಡಿಕ್ಷನರಿಗಳ ಸಹಾಯದೊಂದಿಗೆ ಓದಲು ( ಡೀ ಕೋಡ್ ಮಾಡಲು) ಪ್ರಯತ್ನಿಸಿದ
ಕಥೆಯ ಸಾರಾಂಶಃ-
ವಿಸ್ಮಯ ನಗರಿ ಎಂಬ ವಿಶಾಲವೂ ಸುಭಿಕ್ಷವೂ ಶ್ರೀಮಂತವೂ ಆದ ರಾಜ್ಯವೊಂದಿತ್ತು. ನದಿವನಗಳಿಂದ ಖಗಮಿಗಗಳಿಂದ ಶೋಭಿಸುತ್ತಿದ್ದ ಅರಣ್ಯಗಳು, ಚಿತ್ರಮಂದಿರಗಳೂ, ಪಾನಗೃಹಗಳಿಂದಲೂ ಸುತ್ತುವರೆದಿದ್ದ ನಾಲ್ಕೈದು ಯೋಜನಗಳಷ್ಟು ವಿಸ್ತಾರವುಳ್ಳ ಪಟ್ಟಣಗಳೂ ಇದ್ದವು, ಸಾಫ್ಟ್ ವೇರ್ ಇಂಜಿನಿಯರುಗಳೂ,ವಾಸ್ತುಶಿಲ್ಪಿಗಳೂ,ನಟರೂ,ವಿದೂಷಕರೂ,ವರ್ತಕರೂ,ಪಂಡಿತರೂ,ಶತಮೂರ್ಖರೂ ಇಲ್ಲಿ ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದರರು. ಹೀ
ಹೀಗಿರಲಾಗಿ ಇಲ್ಲಿನ ಆಸ್ಥಾನಕ್ಕೆ ಪಶ್ಚಿಮ ದೇಶದಿಂದ ಜೋಗಿಯೊಬ್ಬ ಆಗಮಿಸಿದ. ಚಿತ್ರ ವಿಚಿತ್ರ ವೇಷಗಳಿಂದ. ಮೈತುಂಬಾ ಹಚ್ಚಿಸಿಕೊಂಡಿದ್ದ
ಹಚ್ಚೆಯಿಂದ, ಮಾದಕ ದ್ರವ್ಯಗಳ ಅಮಲಿನಿಂದ ಕೆಂಪಾದ ಕಣ್ಗಳಿಂದ, ಹೆಗಲಲ್ಲಿ ಇಳಿದು ಬಿದ್ದಿದ್ದ ಗಿಟಾರೆಂಬ ವಾದ್ಯದಿಂದ, ಕೊರಳಸುತ್ತ ಹಾಕಿಕೊಂಡಿದ್ದ ರುಂಡಮಾಲೆಯಂಥ ಕಪ್ಪೆ ಚಿಪ್ಪು, ಕವಡೆಯ ಸರಗಳಿಂದ ಅಲಂಕೃತನಾಗಿದ್ದ.
ಬಂದವನೇ ನೇರವಾಗಿ ರಾಜನಾದ ರಾಜೇಂದ್ರ ವರ್ಮನ ಬಳಿ ಹೋಗಿ ಸೆಲ್ಯೂಟ್ ಹೊಡೆದು ಪಶ್ಚಿಮ ದೇಶದಿಂದ ಅದ್ಭುತವಾದ ಯಂತ್ರವನ್ನು ತಂದಿರುವೆನೆಂದೂ, ಅದರ ಪ್ರದರ್ಶನಕ್ಕೆ ಮತ್ತು ಮಾರಾಟಕ್ಕೆ ಅವಕಾಶ ಮಾಡಿ ಕೊಡಬೇಕೆಂದೂ ಕೇಳಿಕೊಂಡ. ಕಲಾಪ್ರೇಮಿಯೂ, ಸಂಗೀತರಸಿಕನೂ, ವಿದ್ವಜ್ಜನರಾಶ್ರಿತನಾದ, ಸ್ವತಃ ಕವಿಯಾದ ರಾಜೇಂದ್ರ ವರ್ಮ ಉದಾರವಾಗಿ ಅಪ್ಪಣೆ ನೀಡಿದ.
ಒಂದು ಶುಭ ಮಹೂರ್ತದಲ್ಲಿ ತುಂಬಿದ ಸಭೆಯಲ್ಲಿ ಜೋಗಿಯು ತನ್ನ ಯಂತ್ರದೊಂದಿಗೆ ಹಾಜರಾದ. ರಾಜನ ಮುಂದೆ ವಿನಮ್ರ ದನಿಯಲ್ಲಿ ತನ್ನ ಯಂತ್ರದ ಮಹಿಮೆಯನ್ನು ವಿವರಿಸಿದ.
" ರಾಜ ಈ ಯಂತ್ರವು ಸಾಮಾನ್ಯವಲ್ಲ, ಇದರೊಳಗೆ ಹೊಕ್ಕರೆ ಅದ್ಭುತವಾದ ನಟನಾ ಚಾತುರ್ಯದೊಂದಿಗೆ ಹೊರಬರಬಹುದು. ಯಾರು ಯಾರಂತೆ ಬೇಕಾದರೂ ನಟಿಸಬಹುದು. ಕೇವಲ ಅಭಿನಯ ಮಾತ್ರವಲ್ಲ ರೂಪವನ್ನೂ ಸಹ ಬದಲಿಸಿಕೊಳ್ಳಬಹುದು. ಅಷ್ಟೇ ಅಲ್ಲ ಒಬ್ಬ ವ್ಯಕ್ತಿ ಕನಿಷ್ಟ ಮೂರು ಜನರಂತೆ ತನ್ನನ್ನು ತಾನು ಬದಲಿಸಿಕೊಳ್ಳಬಹುದು" ಎಂದು ವಿಷದ ಪಡಿಸಿದ.
ರಾಜ ಆಶ್ಚರ್ಯ ಚಕಿತನಾಗಿ ಅದರ ಪ್ರಯೋಗಕ್ಕಾಗಿ ತಾನೇ ಸಿದ್ದವಾದ ಮೊದಲು ಪೆಟ್ಟಿಗೆ ಹೊಕ್ಕು ಬಂದಾಗ ಆತ ತನ್ನ ಆಸ್ಥಾನ ನರ್ತಕಿ ಹಾವಭಾವಗಳನ್ನು ನಟಿಸುತ್ತ ಗೆಜ್ಜೆಯ ಸದ್ದಿನೊಂದಿಗೆ ಹಾಜರಾದ, ಎರಡನೇ ಬಾರಿ ವಿದೂಷಕನಂತೆ ಲಾಗ ಹಾಕುತ್ತಾ ಜನರನ್ನು ರಂಜಿಸಿದ, ಮೂರನೇ ಬಾರಿ ಭಗವಾನ್ ಬುದ್ದನ ಅಪರಾವತಾರದಂತೆ ಬಂದು ಎಲ್ಲರನ್ನೂ ಚಕಿತಗೊಳಿಸಿದ.
ಸಂತೋಷಭರಿತನಾದ ರಾಜ ಆ ಜೋಗಿಗೆ ಸಾವಿರ ಗ್ರಾಮಗಳ ಉಂಬಳಿ ನೀಡಿ, ಅವನ ಯಂತ್ರಕ್ಕಾಗಿ ಎಲ್ಲ ಗ್ರಾಮಗಳಲ್ಲೂ ಪ್ರದರ್ಶನ ಮಂದಿರ ಏರ್ಪಡಿಸಿದನಷ್ಟೇ ಅಲ್ಲದೇ ಮಾರಟಕ್ಕೂ ಅನುಕೂಲ ಕಲ್ಪಿಸಿದ. ಲಕ್ಷಾಂತರ ಜನರು ಅವನ ಪೆಟ್ಟಿಗೆಯ ಮಹಾತ್ಮೆಯನ್ನು ಅರಿತು ಸಂತಸಭರಿತರಾದರು.ಗಂಡ ಗಂಡನಂತೆ ನಟಿಸಿದ, ಹೆಂಡತಿ ಗಂಡನಾಗಲು ಪ್ರಯತ್ನಿಸಿದಳು, ಎಂಥೆಂಥವರೋ ಏನೇನೋ ಆಗಿ ಹೋದರು (ಈ ವಾಕ್ಯವನ್ನು ಪಂಪ ಇಂಗ್ಲೀಷಿಗೆ ಟ್ರಾನ್ಸ್ ಲೇಟ್ ಮಾಡಲು ಪ್ರಯತ್ನಿಸಿ ಸೋತ ).
ಕಾಲ ಮಾತ್ರ ಕಾಲವಾಗಿಯೇ ಇತ್ತು.
ಸುಮಾರು ಒಂದೆರೆಡು ತಿಂಗಳುಗಳ ನಂತರ ಈ ಆಟ ಸಾಕೆಂದು ಮತ್ತೆ ಮೊದಲಿನಂತೆ ಅಂದರೆ ಸ್ವಂತ ತಮ್ಮಂತೆ ಆಗಲು ಆ ಜೋಗಿಯನ್ನು ಹುಡುಕಿದರು, ಆದರೆ ಆ ಜೋಗಿ ಮತ್ಯಾರೋ ಆಗಿ ಹೋಗಿದ್ದ. ಅವನ ಯಂತ್ರಗಳು ಮಾತ್ರ ಮನೆ ಮನೆಯಲ್ಲಿ ತನ್ನ ಸಂತಾನ ಮುಂದುವರೆಸಿತ್ತು..
ಇಲ್ಲಿಗೀ ಕಥೆ ಮುಗಿಯಿತು
ಹಾಗಾದರೆ ನಾನು ಪಂಪನಲ್ಲ. ಪಂಪಾ ಆದಿಕವಿಯಾದರೆ, ನಾನು ಯಾರು? ನನ್ನ ಪದವಿ,ಪಿಎಚ್ಡಿಗಳು ಕೇವಲ ನನ್ನ ವಿದ್ಯಾರ್ಹತೆ, ಪಂಪನೆಂಬುದು ನನ್ನ ಹೆಸರು, ಇನ್ಯಾವುದೋ ಒಂದು ನನ್ನ ವೃತ್ತಿ. ಮತ್ಯಾರೋ ಒಬ್ಬರು ನನ್ನ ಗೆಳತಿ, ನಾನು ಯಾರು?
ಸುಮಾರು ಅರವತ್ತು ವರ್ಷದ ಮುಂಚೆ ಜನ ನನ್ನ ಹಾಗೇ ಸಕಲೆಂಟು ವೃತ್ತಿ ಮಾಡುತ್ತಲೂ, ಲೋಕ ವ್ಯವಹಾರದಲ್ಲೂ ತಲ್ಲೀನರಾಗಿ ತಮ್ಮ ತನವನ್ನು ತಮ್ಮಂತೆಯೇ ಉಳಿಸಿಕೊಳ್ಳಲು ಸಮರ್ಥರಾಗಿದ್ದರು. ನಾವಿಂದು ಏನಾಗಿದ್ದೇವೆ.?
ನನ್ನ ಇಂದಿನ ತುಡಿತ, ಬಯಕೆ, ಅನಾಥ ಪ್ರಜ್ನೆ ಎಲ್ಲವೂ ಅರವತ್ತು ವರ್ಷ ಹಿಂದಿನ ಲೇಖಕರಿಗೆ ಹೇಗೆ ಗೊತ್ತಿತ್ತು? ಅವರು ಪಂಪನನ್ನೂ ಸಹ ನಿಜವಾಗಿ ಹೇಗೆ ಓದಿದ್ದರು?
ಹಾಗಾದರೆ ನಾನೂ ಕಾರ್ಮಿಕನೂ ಅಲ್ಲ, ಮಗನೂ ಅಲ್ಲ, ಸೋದರನೂ ಅಲ್ಲ, ಪ್ರೇಮಿಯೂ ಅಲ್ಲ, ಪಂಪನೂ ಅಲ್ಲ ಹಾಗಾದರೆ ನಾನ್ಯಾರು?
ಪಂಪಾ ಸುಮಾರು ದಿನ ಸ್ನಾನ ಮಾಡದೇ, ಶೇವ್ ಸಹ ಮಾಡಿಕೊಳ್ಳದೇ ಕನ್ನಡ ಪುಸ್ತಕಗಳನ್ನೇ ಓದುತ್ತಾ, ಹಳೇ ಭಾವಗೀತೆಗಳನ್ನೇ ಕೇಳುತ್ತಾ, ಬ್ಲಾಗಿನಲ್ಲೇ ಕಾಲ ಕಳೆಯುತ್ತಾ, ಏನೇನೋ ಬರೆಯುತ್ತಾ ಇದ್ದು ಬಿಟ್ಟ. ಸದಾ ಕನ್ನಡ ಜಪವೇ ಅವನ ಧ್ಯಾನವಾಯ್ತು. ಸಿಕ್ಕಿದೆಡೆಯೆಲ್ಲಾ ತನ್ನ ಲ್ಯಾಪ್ ಟಾಪಿನಲ್ಲೋ, ಅಥವಾ ಪುರಾತನ ಕಾದಂಬರಿಗಳಲ್ಲೋ, ಮುಳುಗಿರುತ್ತಿದ್ದ ಇವನು, ಪುರಾತನತೆಗೆ ಸಂಭಂಧ ಪಟ್ಟ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ. ಇವನ ಅಸಂಖ್ಯ ಪ್ರಶ್ನೆಗಳಿಗೆ ಉತ್ತರವಿಲ್ಲದ ಕನ್ನಡ ಪಂಡಿತರು, ಪ್ರಾಯೋಜಕರು ಇವನನ್ನು ದ್ವೇಷಿಸಲಾರಂಭಿಸಿದರು. ಇವನಿಗೆ ಕಾರ್ಯಕ್ರಮಗಳಲ್ಲಿ ಸೇರಿಸಬಾರದೆಂದು ಫರ್ಮಾನು ಹೊರಡಿಸಿದರು. ಇವನ ಬಗ್ಗೆ ಕರುಣೆ ಹೊಂದಿದ್ದ ಗೆಳೆಯರು ಇವನು ಕಂಡಾಗ ಗುಂಡು ಹಾಕಿಸಿ ಕಳುಹಿಸಿದರೆ, ಇವನ ಬಗ್ಗೆ ಭಯ ಹೊಂದಿದ್ದ ಕನ್ನಡ ಪಂಡಿತರು ಇವನು ಕಂಡಲ್ಲಿ ಗುಂಡು ಹಾರಿಸುವಂತೆ ತಮ್ಮ ಸೆಕ್ಯುರಿಟಿ ಬಳಗಕ್ಕೆ ಆದೇಶಿಸಿದ್ದರು.
ಪಂಪ ತನ್ನ ಪಾಡಿಗೆ ತಾನು ಅಜಿತ ತೀರ್ಥಂಕರ ಪುರಾಣವನ್ನು ತೀರ್ಥದೊಂದಿಗೆ ಆಸ್ವಾದಿಸುತ್ತಾ, ನೆಮ್ಮದಿಯಾಗಿದ್ದ.
ಒಂದು ಬೆಳಗ್ಗೆ ತರಾಸು ರವರ ಕಾದಂಬರಿಯೊಂದನ್ನು ಹಿಡಿದು ಕೊಂಡು ನಾಗರಹಾವು ಚಲನಚಿತ್ರದ ಸೀಡಿ ಕೇಳಿದಾಗ, ಆನಕೊಂಡ ಎಂಬ ಎಪ್ಪತ್ತು ವರ್ಷದ ಹಿಂದಿನ ಇಂಗ್ಲೀಷ್ ಸಿನಿಮಾ ಕೊಟ್ಟ- ಎಂಬ ಕಾರಣಕ್ಕೆ ಆಲ್ ಅಬೌಟ್ ಕನ್ನಡ ಮಳಿಗೆಯ ಮಾಲಿಕನನ್ನು ಕೊಂದು ಹಾಕಿದ ತಪ್ಪಿಗೆ ಅವನನ್ನು ಮಾನಸಿಕ ಖೈದಿಯೆಂದು ಪರಿಗಣಿಸಿ ಹುಚ್ಚಾಸ್ಪತ್ರೆಯಲ್ಲಿ ಹತ್ತು ವರ್ಷ ತಳ್ಳಲಾಯ್ತು.
ಸುಮಾರು ಹತ್ತು ವರ್ಷದ ನಂತರ ಃ-
ಮತ್ತೊಂದ್ಸಾರಿ ಫಸ್ಟ್ ಲೈನಿಗೆ ಬರುತ್ತಾ
ಎರಡು ಸಾವಿರದ ಎಂಬತ್ತಾರನೇ ಇಸವಿ ನವೆಂಬರ್ ಒಂದೋ ಅಥವಾ ಎರಡೋ ತಾರೀಖಿನ ಒಂದು
ಮುಂಜಾವಿನಲಿ ತುಂತುರಿನ ಸೋನೆ ಮಳೆ ಧೋ ಎಂದು ಶೃತಿ ಹಿಡಿದು ಸುರಿಯುತ್ತಿರುವಾಗ
ಜಟಾಜೂಟದಿಗಳಿಂದ, ಕಾಂತಿ ತುಂಬಿದ ಕಂಗಳಿಂದ, ಕರದಲ್ಲಿ ಕನ್ನಡದ ಆದಿಪುರಾಣವೆಂಬ ಪುಸ್ತಕದಿಂದ, ರಾರಾಜಿಸುತ್ತಿದ್ದ ಪಂಪನು ಜೈಲು ಕಮ್ ಹುಚ್ಚಾಸ್ಪತ್ರೆಯಿಂದ ಹೊರಬಂದಾಗ, ಎದುರಿಗೆ ಶಾಲ್ಮಾಲಾ ಎಂಬ ತರುಣಿಯು ಅವನನ್ನು ಸ್ವಾಗತಿಸಲು ಮೈಸೂರು ಮಲ್ಲಿಗೆ ಹೂವಿನ ಹಾರವನ್ನು ಹಿಡಿದು, ಮೈಸೂರು ಮಲ್ಲಿಗೆ ಪುಸ್ತಕವನ್ನು ಗಿಫ್ಟ ಪ್ಯಾಕ್ ಮಾಡಿಸಿಕೊಂಡು ಬಂದು ಅವನಿಗಾಗಿ ಕಾಯುತ್ತಿದ್ದಳು. ಅವರೆದುರಿಗೆ ಸೋನೆ ಮಳೆಯಲ್ಲಿ ಆದಿ ಕವಿ ಪಂಪ ಮಹಾಕವಿ ರೋಡ್ ಎಂಬ ಇಂಗ್ಲೀಷಿನ ಫಲಕವು ರಾರಾಜಿಸುತ್ತಿತ್ತು.
ಸಾಲುಗಳು
- Add new comment
- 2014 views
ಅನಿಸಿಕೆಗಳು
ಬಾಲೂ ನಿಮ್ಮ ಕಥೆ ಹೇಳುವ ಶೈಲಿಗೆ
ಬಾಲೂ ನಿಮ್ಮ ಕಥೆ ಹೇಳುವ ಶೈಲಿಗೆ ಬಹುಪರಾಕ್. ಕಥೆಯ ಅರ್ಥ ನನ್ನ ಪಾಲಿಗೆ ನಿಗೂಢ. ವಿವರಿಸಿದರೆ ಕಥೆಯ ಸೊಗಸು ಹೋಗುತ್ತೆ ಅಂತ ಹಳೇ ಡೈಲಾಗ್ ಹೊಡೀತೀರಿ... ಆದ್ದರಿಂದ ನಮಗೆ ಅರ್ಥವಾಗಿದ್ದೇ ಕಥೆಯ ಅರ್ಥ ಎಂದು ಕೊಳ್ಳಲಡ್ಡಿಯಿಲ್ಲ ತಾನೇ..!?
ಬಾಲಚಂದ್ರ ಅವರೇ, ತಮ್ಮ ಕನ್ನಡ
ಬಾಲಚಂದ್ರ ಅವರೇ, ತಮ್ಮ ಕನ್ನಡ ಶಬ್ಧಗಳು ಪದಪುಂಜಗಳ ಹಾಗೂ ವಾಕ್ಯಗಳ ಪ್ರಯೋಗ... ವರ್ಣನೆಯ ವಿನೂತನ ಶೈಲಿ ತುಂಬಾ ಮೆಚ್ಚುಗೆಯಾಯ್ತು. ನಿಮ್ಮ ಕಥೆಯಲ್ಲದ ಕಥೆ ಕುತೂಹಲ ಕೆದಕಿ ಓದಿಸಿಕೊಂಡು ಹೋಗುತ್ತಾ ಕೊನೆಗೆ ಮುಗಿದಾಗ ಓದುಗರು ಒಮ್ಮೆ ಮನದೊಳಗೇ ಮಂಥನಮಾಡಿ ನಾನು ಓದ್ದಿದ್ದೇನು ಅದರಲ್ಲೇನಾದರೂ ಅರ್ಥ ಇದೆಯೇ ಎಂದು ಅವಲೋಕನ ಮಾಡಿದಾಗ ಬಹುಷಃ ಸಿಗುವ ಉತ್ತರ ಒಂದೇ ಅದು ಓದುಗರಲ್ಲಿ ಚಿಂತನೆಗೀಡುಮಾಡಿ ಓದಿಸಿಕೊಂಡು ಹೋಗುವ ಎಲ್ಲಾಗುಣಗಳನ್ನೂ ಹೊಂದಿರುವ ಮನೋರಂಜನೆ ನೀಡಿ ಮತ್ತು ಕನ್ನಡದ ಸೊಗಡಿನ ಬಗ್ಗೆ ತಿಳಿಸಿಕೊಡುವಂತಾ ಒಂದು ಉತ್ತಮ ಲೇಖನ ಎಂದು....! ಶುಭವಾಗಲಿ, -ತ್ರಿನೇತ್ರ.
ಸಿಕ್ಕಾಪಟ್ಟೆ ಚಂದದ ಕಥೆ
ಸಿಕ್ಕಾಪಟ್ಟೆ ಚಂದದ ಕಥೆ ಬರೆದಿದ್ದೀರಿ ಬಾಲಚಂದ್ರ. ನಗರದ ಬೀದಿ ಬೀದಿಗಳಲ್ಲಿ ಕಳೆದು ಹೋದ ತಮ್ಮನ್ನು ತಾವೇ ಹುಡುಕುತ್ತಿರುವ ಸಹಸ್ರಾರು ಅತಂತ್ರ, ಅತ್ರಪ್ತ ಆತ್ಮಗಳ ಮೆದುಳಿಗೇ ಕೈ ಹಾಕಿ ಕದಲಿಸಿ ಬಿಟ್ಟಿದ್ದೀರಿ.
ನನ್ನ "ನಿರ್ವಾತ" ಎಂಬ ಒಂದು ( ಇನ್ನೂ ಅಪ್ರಕಟಿತ) ಕಥೆಯ ಥೀಮ್ ಕೂಡ ಹೆಚ್ಚು ಕಡಿಮೆ ಇದೇ. ಇದು ಇಂದಿನ ಅತಿ ಪ್ರಸ್ತುತ ಥೀಮ್ ಕೂಡ. ಕಾಡಿನ ಹುಚ್ಚು ಹಿಡಿಸಿಕೊಂಡ ಹುಡುಗನೊಬ್ಬ ಕೊನೆಯಲ್ಲಿ ಹುಚ್ಚನಂತೆ ಅಲೆದಾಡುವುದು...ಇತ್ಯಾದಿ. ಆದರೆ ನಿಮ್ಮ ಕಥೆ ಅದಕ್ಕೂ ಚೆನ್ನಾಗಿದೆ. ಕೆಥೆಯೊಳಗಿನ ಕಥೆ ( ಮಧ್ಯಮ) ಅಂತೂ ಅನನ್ಯ.ಆ ನಿಮ್ಮ ಮಾಯಾ ಯಂತ್ರ... ಈ ನಮ್ಮ ಗಣಕ ಯಂತ್ರವಾಗಿರಲಿಕ್ಕೂ ಸಾಕು.
ಆದರೆ, ಕೊನೆ ಮಾತ್ರ ...( ಕೊನೆಯ ಎರಡು ಸಾಲುಗಳು) ಕಥೆಯ ನಿಜವಾದ ಸಾರ ಪ್ರತಿಫಲಿಸುವಂತೆ ಕಾಣುತ್ತಿಲ್ಲ. ಯಾರೋ ಒಬ್ಬರನು ಮನದಲ್ಲಿ ಕಲ್ಪಿಸಿಕೊಂಡು, 'ಶಾಲ್ಮಲ" ಎಂಬ ರೂಪಕ ಕೊಟ್ಟಿದ್ದಿರಿ ಅನ್ನಿಸುತ್ತಿದೆ. ಯಾಕೆಂದರೆ ನಿಮಗೆ ಶಾಲ್ಮಲಳನ್ನೂ ಯಂತ್ರದೊಳಕ್ಕೆ ತೂರಿಸಿ ಕಳೆದು ಕೊಳ್ಳುವ ಮನಸ್ಸಿಲ್ಲ !!!!!
ಏನು ಸುಖವೋ ಎಂಥಾ ಸುಖವೋ, ಸುಲಿದ
ಬಾಲು ಅವ್ರೆ-
ವಿಸ್ಮಯನಗರಿಯ ಸದಸ್ಯರು-ಅದರ ನಿರ್ಮಾತೃ ರಾಜೇಶ್ ಅವರ ಭೇಟಿ ಬಗ್ಗೆ ನೀವ್ ಬರೆದಿದ ಹಿಂದಿನ ಬರಹ
http://www.vismayanagari.com/vismaya11/node/22064
ಓದಿದ್ದೆ-ಪ್ರತಿಕ್ರಿಯಿಸಿದ್ದೆ, ಆಗಲೇ ನಂಗೆ ನಿಮ್ಮ ಬಗ್ಗೆ ಬಲು ಅಚ್ಚರಿ ಆಗಿತ್ತು, ಅದಕ್ಕೆ ಕಾರಣ ಪುರಾಣದ ಕಥೆ ಸನ್ನ್ನಿವೇಶವನು ವರ್ಣಿಸುವ ಹಾಗೆ ಆ ಪದ ಪ್ರಯೋಗಗಳು-ವಾಕ್ಯಗಳು... ಆಗಲೇ ನನಗೆ ಅನ್ನಿಸಿತ್ತು ನೀವ್ ಅಸಾಮಾನ್ಯ ಪ್ರತಿಭಾವಂತರು ಅಂತ.... ನಿಮ್ಮ ಬರವಣಿಗೆಯ ಶೈಲಿಗೆ ನಾ ಫಿದ.... ನೋ ಲಾಜಿಕ್ ಓನ್ಲೀ ಮ್ಯಾಜಿಕ್ ಸಿನೆಮಾ ಅನ್ನುವರಲ್ಲ ಹಾಗೆಯೇ ಇದೆ ಈ ಬರಹ... ಆದರೆ ಮೋಡೀ ಮಾಡದೇ ಇರದು....!!
ಫ್ಯೂಚಾರ್ ಕಥೆಯನ್ ಸಖತ್ ಆಗಿ ಬರೆದಿರುವಿರಿ...
ಈ ಮಧ್ಯ ರಾತ್ರಿಯಲ್ಲಿ ಈ ಬರಹ ಓದಿ ಬಿದ್ದು ಬಿದ್ದು ನಕ್ಕೆ...:())) ನಿಮ್ಮ ಫೋಟೋ ಗಮನಿಸಿದಾಗ ಅನುಮಾನ ಬಂದು ನಿಮ್ಮ ವಿವರವನ್ನು ಮತ್ತೊಮ್ಮೆ ನೋಡಿದಾಗ ನೀವು ೨೬ ವರ್ಷದವರು ಅಂತ ಗೊತ್ತಾಯ್ತು(ನಾಯಕ ೨೭ ವರ್ಷದವನು..!!) ಬರಹದಲ್ಲಿ ವಿಸ್ಮಯ ನಗರಿ ಬಗ್ಗೆ ರಾಜೇಶ್- ಉಮಾ ಶಂಕರ್-ಶ್ರೀ ನಿವಾಸ್- ಕೇಲ್ಕೆ, ಎಚ್ ಡೀ ರೇ .. ಬಗ್ಗೆ ಬರೆದದ್ದು ಓದಿ ಹೊಟ್ಟೆ ಹುಣ್ಣಾಗುವಂತೆ ನಕ್ಕೆ..
ಬರಹದ ಒಂದು ಸನ್ನಿವೇಶ ಯಾಕೋ ನಂಗೆ ನೀವ್ ಎಚ್ ಡಿ ರೇ ಬಗ್ಗೆಯೇ ಬರೆದದ್ದು ಅನ್ನಿಸಿತು...!! ಹೆಚ್ಚು ಕಡಿಮೆ ನಾನನ್ ಸಮಾನ ವಯಸ್ಕರಾದ ನೀವು ಬರೆದ ಆ ಬರಹ(ವಿಸ್ಮಯ ನಗರಿ ಸಮ್ಮಿಲನ) ಹಾಗೂ ಈ ಬರಹ ಗಮನಿಸಿದ ಮೇಲೆ ನಿಮ್ಮದು ಮೂರ್ತಿ ಚಿಕ್ಕದು-ಕೀರ್ತಿ ದೊಡ್ಡದು ರೀತಿಯ....ಸೈ..
ಮಧ್ಯೆ ಬರಹ ಬರೆಯದೇ ಇದ್ದ ನೀವು ಈ ನಡುವೆ ಸಖತ್ ಬರಹಗಳನ್ನು ಜೋ ಶ್ ನಿಂದ ಬರೆಯುತ್ತಿರುವಿರಿ....ಬರಹದಲ್ಲಿ ಹಲವು ಸಾಲುಗಳು ಗಮನ ಸೆಳೆದವು, ಅವನ್ನು ಇಲ್ಲಿ ಹಾಕಿದರೆ ನಿಮ್ಮ ಬರಹದ ಮುಕ್ಕಾಲು ಭಾಗ ಆಗಬಹುದು...!!
ಸಖತ್ ಬರಹಕ್ಕಾಗಿ ನನ್ನಿ...
ಶುಭವಾಗಲಿ..
\|/..
ನಮಸ್ಕಾರ ಬಾಲಚಂದ್ರ
ನಮಸ್ಕಾರ ಬಾಲಚಂದ್ರ ಅವರೇ,
ಹಾಸ್ಯದ ಜೊತೆಗೆ ವ್ಯಂಗ್ಯ ಬೆರೆಸಿ ಎಡಬಿಡದೇ ಓದಿಸಿಕೊಂಡು ಹೋಗುವ ನಿಮ್ಮ ಶೈಲಿ ಅದ್ಭುತ. ನಿಮ್ಮ ಪ್ರತಿಭೆಗೆ ಒಂದು ಸಲ್ಯೂಟ್. ಕಥೆಯಲ್ಲಿ ಕನ್ನಡಕ್ಕೆ ಒದಗಲಿರುವ ಗತಿಯ ಸಾಧ್ಯತೆಯನ್ನು ಮಾರ್ಮಿಕವಾಗಿ ಹೇಳಿದ್ದೀರಾ. ಮರೆಯಲ್ಲಿರುವ ಈ ಸಂದೇಶ ಶ್ಲಾಘನೀಯ.
ಕನ್ನಡ ಭಾಷೆಯ ಸ್ಥಾನವನ್ನು ೨೦೫೦ರ ಸುಮಾರಿಗೆ ಆಂಗ್ಲ ಭಾಷೆ ಪಲ್ಲಟ ಮಾಡುತ್ತೆ ಎಂದು ಬರೆದಿದ್ದೀರಾ. ಬಹುಶಃ ಹಾಗಾಗದು. ನನ್ನ ವಿಶ್ಲೇಷಣೆ ಪ್ರಕಾರ ಇದೇ ಟ್ರೆಂಡ್ ಮುಂದುವರಿದರೆ ೩೦೧೦ - ೩೦೫೦ರ ಸುಮಾರಿಗೆ ಈ ಸಾಧ್ಯತೆ ಇದೆ.
ಹಾಗಾಗದಿರಲಿ ಎಂಬುದು ನನ್ನ ಬಯಕೆ. ಆದರೆ ಸರ್ವವ್ಯಾಪಿಯಾಗಿದ್ದ ಸಂಸ್ಕೃತ, ಹಳಗನ್ನಡವೇ ಎಲ್ಲೆಲ್ಲೋ ಹೋಯಿತು ಇನ್ನು ಕನ್ನಡದಲ್ಲಿ ಹಲವು ರಂಗದಲ್ಲಿ ಬೆಳೆಯಲು ಕಷ್ಟಪಡುತ್ತಿರುವದನ್ನು ಗಮನಿಸಿದಾಗ ಹೀಗೆ ಆದೀತೇನೋ ಅನ್ನಿಸುತ್ತಿದೆ. ಇಲ್ಲಾಂದ್ರೆ ಒಂದು ಕ್ರಾಂತಿಯೇ ಜರುಗಬೇಕು.
ಕಥೆಯೊಳಗೊಂದು ಕಥೆ, ಚೆನ್ನಾಗಿದೆ.
ಕಥೆಯೊಳಗೊಂದು ಕಥೆ, ಚೆನ್ನಾಗಿದೆ. ಓದುವಾಗ ನಗು ಬಂತು.
ಶಹಬ್ಬಾಷ್ !!! ಬಾಲಣ್ಣ, ನಿಜಕ್ಕೂ
ಶಹಬ್ಬಾಷ್ !!! ಬಾಲಣ್ಣ,
ನಿಜಕ್ಕೂ ಚಿಂತನೆಗೆ ಹಚ್ಚುವ ಕಥೆಯೇ ಸರಿ. ನಿರೂಪಣೆಯಲ್ಲಿ ಹೊಸತನವಿದೆ. ಹಾಗೆಯೇ ವಿಸ್ಮಯದಿಂದ ದೂರ ಉಳಿದವರ ಚುಚ್ಚುವುದು ಹೇಗೆಂದೂ ಸಹ ನಿಮಗೆ ಗೊತ್ತು ಏಕೆಂದರೆ ನಿಮ್ಮ ಚುಚ್ಚುವಿಕೆಯಲ್ಲಿ ನೋವಿಗಿಂತ ಕಾಳಜಿಯುಳ್ಳ ಪ್ರೀತಿಯಿದೆ.
ನಿಮ್ಮ
ಉಮಾಶಂಕರ
super sir
super sir