Skip to main content

ಕಗ್ಗಂಟು - ಪತ್ತೇದಾರಿ ಕಥೆ - ಭಾಗ 2

ಬರೆದಿದ್ದುFebruary 15, 2009
12ಅನಿಸಿಕೆಗಳು

ಈ ಕಥೆಯ ಹಿಂದಿನ ಭಾಗ ಕಗ್ಗಂಟು - ಪತ್ತೇದಾರಿ ಕಥೆ - ಭಾಗ 1

ಮುದುಕ ತನ್ನ ಹಿನ್ನೆಲೆ ಹೇಳಲಾರಂಭಿಸಿದ. "ನನ್ನ ಮೊಮ್ಮಗಳು ಎರಡು ವಾರಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಳು." ಹೀಗೆ ಹೇಳುವಾಗ ಸುತ್ತ ಕಪ್ಪಾಗಿದ್ದ ಆಗಲೇ ಗುಳಿಬಿದ್ದಿದ್ದ ಕಣ್ಣುಗಳು ತುಂಬಿಬಂದವು. "ನನ್ನ ವಂಶದ ಕೊನೆಯ ಕುಡಿಗೆ ಬಂದ ಈ ದುರ್ಗತಿ ನೋಡಲು ಯಾಕಾದರೂ ಬದುಕಿದ್ದೇನೋ" ಮರುಗಿತು ಮುದಿ ಜೀವ. ಆಗ ಏನು ಮಾಡಲಿ ತೋಚದ ವಿಕ್ರಂ "ಸಮಾಧಾನ ಮಾಡಿಕೊಳ್ಳಿ" ಎಂದು ಹೇಳಿದ. ಆಗ ನಿಟ್ಟುಸಿರು ಬಿಟ್ಟ ಮುದುಕ "ಆ ಪಾಪಿಗೆ ಶಿಕ್ಷೆ ಆಗಬೇಕು ಆಗಲೇ ನನಗೆ ಸಮಾಧಾನ. ಆದರೆ ಪೋಲೀಸರು ಸಹ ಇದು ಆತ್ಮಹತ್ಯೆ. ಮೊಮ್ಮಗಳ ಗಂಡ ಚಂದ್ರಹಾಸನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ."

"ಯಾಕೆ?" ಪ್ರಶ್ನಿಸಿದ ವಿಕ್ರಂ.
"ಯಾಕೆಂದರೆ ನನ್ನ ಮೊಮ್ಮಗಳು ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಪತ್ರ ಬರೆದಿಟ್ಟಿದ್ದಾಳೆ. ಚಂದ್ರಹಾಸನ ವಿರುದ್ಧ ಬಲವಾದ ಯಾವ ಸಾಕ್ಷ್ಯವೂ ಇಲ್ಲ. ಅದಕ್ಕೆ ಕಾರಣ ಅವಳ ಗಂಡ ಚಂದ್ರಹಾಸನೇ ಕಾರಣ ಎಂದು ನಾನು ಕೂಗಿ ಕೂಗಿ ಹೇಳಿದರೂ ಯಾರೂ ನಂಬುತ್ತಿಲ್ಲ. ಪೋಲಿಸರ ಪ್ರಕಾರ ಇದು ನೂರಕ್ಕೆ ನೂರು ಆತ್ಮಹತ್ಯೆ ಕೇಸು. ಈ ಆತ್ಮಹತ್ಯೆಯ ಹಿಂದೆ ಇರುವ ಸತ್ಯ ಬಯಲಾಗಬೇಕು. ಆತ್ಮಹತ್ಯೆಗೆ ಕಾರಣನಾದ ಚಂದ್ರಹಾಸನಿಗೆ ಶಿಕ್ಷೆ ಆಗಬೇಕು."

ವಿಕ್ರಂ ಏನು ಮಾಡಲಿ ಎಂದು ಯೋಚಿಸುತ್ತಿದ್ದ. ಹೌದು ಆತ್ಮಹತ್ಯೆಗೆ ಎಲ್ಲ ಬಾರಿ ಬಲವಾದ ಕಾರಣ ಇರಬೇಕೆಂದೇನಿಲ್ಲ. ಕೆಲವೊಮ್ಮೆ ದುರ್ಬಲ ಮನಸ್ಸಿನವರು ಗಂಡ ಮನೆಗೆ ಬೇಗ ಬರಲಿಲ್ಲ, ಸಿನಿಮಾಕ್ಕೆ ಕರೆದೊಯ್ಯಲಿಲ್ಲ, ತವರು ಮನೆಗೆ ಬಿಡಲಿಲ್ಲ ಅನ್ನುವ ಕ್ಷುಲ್ಲಕ ಕಾರಣಗಳಿಗೆ ಆತುರದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಈ ಕೇಸೂ ಹಾಗೇ ಇದ್ದರೆ? ಪಾಪ ಮುದುಕ. ಮೊಮ್ಮಗಳ ಮದುವೆ ನೋಡುವಷ್ಟು ಅದೃಷ್ಟವಂತ. ಆದರೆ ಅದರ ಬೆನ್ನಲ್ಲೇ ಆಕೆಯ ಸಾವು ನೋಡಿದ ದುರಾದೃಷ್ಟವಂತ ಕೂಡಾ.ಇದರ ಹಿಂದೆ ಇರುವ ಕಾರಣ ಗೊತ್ತಾದರೆ ಚಂದ್ರಹಾಸನಿಗೆ ಶಿಕ್ಷೆ ಆದರೆ ಆತನಿಗೆ ನೆಮ್ಮದಿ.

ಪಕ್ಕದಲ್ಲೇ ನಿಂತಿದ್ದ ಬಸವರಾಜು ಸುಮ್ಮನೆ ಇದ್ದ. ಅವನಿಗೆ ಇದು ಹೊಸತಲ್ಲ. ಈಗಾಗಲೇ ಸುಮಾರು ಈ ತರಾ ಕೇಸು ಸುಮಾರು ಬಂದಿವೆ. ಎಲ್ಲಕ್ಕೂ ವಿಕ್ರಂ ಉತ್ತರ ಒಂದೇ "ಸಿಲ್ಲಿ ಕೇಸ್" ಅಂತಾ ! ಈ ಕೇಸ್ ಅಂತೂ ಮುದುಕನೇ ಹೇಳುತಿದ್ದಾನೆ ಆತ್ಮಹತ್ಯೆ ಅಂತಾ ಇನ್ನು ಕೊಡುವ ಉತ್ತರ ಸ್ಪಷ್ಟ.

ಅಷ್ಟರಲ್ಲಿ ವಿಕ್ರಂ ಮೊಬೈಲ್ ರಿಂಗ್ ಆಗತೊಡಗಿತು. ಸ್ಕ್ರೀನ್ ಕಡೆಗೆ ನೋಡಿದ ವಿಕ್ರಂ ಎತ್ತಿ "ಹಲೋ ಅಪ್ಪಾ" ಅಂದ.
"ವಿಕ್ಕಿ ಶಾಂತಿಲಾಲ್ ಅನ್ನುವವರು ಬರ್ತಾರೆ. ಅವರಿಗೆ ಏನಾದ್ರೂ ಸಹಾಯ ಮಾಡೊಕ್ಕೆ ಆಗುತ್ತಾ ನೋಡು. ಪಾಪ ಮಗ, ಮೊಮ್ಮಗಳಿಬ್ಬರನ್ನು ಕಳೆದುಕೊಂಡು ಅವರು ದುಃಖದಲ್ಲಿದ್ದಾರೆ"
"ಅವರು ಈಗಾಗಲೇ ಬಂದಿದ್ದಾರೆ ಅಪ್ಪಾ. ಖಂಡಿತ ನನ್ನ ಹತ್ರ ಏನು ಸಾಧ್ಯವೋ ಅದನ್ನು ಮಾಡುತ್ತೇನೆ" ಎಂದ ವಿಕ್ರಂ.
"ಸರಿ ನಂತರ ಫೋನ್ ಮಾಡ್ತಿನಿ" ಎಂದು ಫೋನ್ ಇಟ್ಟ ವಿಕ್ರಂ.

ಇದಕ್ಕಿದ್ದಂತೆಯೇ ಗಂಭೀರವಾದ ವಿಕ್ರಂ ಹೇಳಿದ " ತಾವು ತಮ್ಮ ಹಿನ್ನೆಲೆ, ಈ ಆತ್ಮಹತ್ಯೆಯ ಬಗ್ಗೆ ವಿವರವಾಗಿ ಹೇಳುತ್ತೀರಾ? ಅದನ್ನು ಕೇಳಿ ಕೇಸು ತೆಗೆದುಕೊಳ್ಳುವದೋ ಬಿಡುವದೋ ಎಂದು ನಿರ್ಧರಿಸುತ್ತೇನೆ."

ಬಸವರಾಜುಗೆ ಆಶ್ಚರ್ಯ ಮೊಟ್ಟ ಮೊದಲ ಬಾರಿಗೆ ಹೀಗೆ ವಿವರ ಹೇಳಿ ಅಂತಾ ಹೇಳುತ್ತಿದ್ದಾನೆ.

ಮತ್ತೊಮ್ಮೆ ನೀರು ಕುಡಿದ ಮುದುಕ ಕೆಮ್ಮುತ್ತಾ ಆರಂಭಿಸಿದ "ನನ್ನ ಹೆಸರು ಶಾಂತಿ ಲಾಲ್ ಅಂತಾ. ನಮ್ಮ ತಂದೆ ಗುಜರಾತಿನಿಂದ ಮೈಸೂರಿಗೆ ಬ್ರಿಟಿಶರ ಕಾಲದಲ್ಲೇ ಮುತ್ತು ರತ್ನ ವ್ಯಾಪಾರಕ್ಕಾಗಿ ಬಂದವರು ಅಲ್ಲಿ ನೆಲೆಸಿದರಂತೆ. ಅವರ ಒಬ್ಬನೇ ಮಗನಾದ ನಾನು ಅವರ ಕುಲ ಕಸುಬನ್ನು ಮುಂದುವರಿಸಿದೆ. ಇಂಜನಿಯರಿಂಗ್ ಮುಗಿಸಿದ ನನ್ನ ಮಗ ಬಿಸಿನೆಸ್ ಮಾಡುತ್ತೇನೆಂದು ಬೆಂಗಳೂರಿನ ಕೋರಮಂಗಲದಲ್ಲಿ ಮನೆ ಮಾಡಿದ. ಆತನ ಮಗಳೇ ಅನುಷಾ. ಅನುಷಾ ೧ ವರ್ಷದ ಚಿಕ್ಕ ಮಗುವಾಗಿದ್ದಾಗ ನಡೆದ ಕಾರಿನ ಅಪಘಾತದಲ್ಲಿ ಮಗ-ಸೊಸೆ ಇಬ್ಬರೂ ಮೃತಪಟ್ತರು." ಬಹುಶಃ ಅವರ ನೆನಪಾಯಿತೋ ಏನೋ ಕಣ್ಣಲ್ಲಿ ಬಂದ ನೀರನ್ನು ಒರೆಸಿ ಶಾಂತಿ ಲಾಲರು ಮುಂದುವರಿಸಿದರು. "ನನ್ನ ಮೊಮ್ಮಗಳನ್ನು ಯಾವುದೇ ಕೊರತೆ ಇಲ್ಲದಂತೆ ಬೆಳೆಸಿದೆ. ಅವಳೂ ಸಹ ಇಂಜನಿಯರಿಂಗ್ ಮಾಡಿ ಸಾಫ್ಟ್ ವೇರ್ ಇಂಜನಿಯರ್ ಆದಳು. ನನ್ನ ಮಾತಿಗೆ ಬೆಲೆ ಕೊಡದೇ ಆಫೀಸಿನಲ್ಲೇ ಚಂದ್ರಹಾಸನನ್ನು ಪ್ರೇಮಿಸಿ ಮದುವೆ ಆದಳು"

ಇನ್ನು ಮದುವೆ ಆಗಿ ಬರೀ ಆರು ತಿಂಗಳೇ ಆಗಿತ್ತು. ಎರಡು ವಾರಗಳ ಹಿಂದೆ ಚಂದ್ರಹಾಸ ರಾತ್ರಿ ೯ ರ ಸುಮಾರಿಗೆ ಫೋನ್ ಮಾಡಿ ಅನುಷಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿಸಿದಾಗ ನನಗೆ ಹೃದಯ ಒಡೆದು ಚೂರಾದ ಹಾಗೆ ಆಯ್ತು. ಪೋಲಿಸರು ಬಂದು ತನಿಖೆ ನಡೆಸಿದರೂ ಇದು ಬರೀ ಆತ್ಮಹತ್ಯೆ ಎಂದು ಪರಿಗಣಿಸಿದರು. ಅನುಷಾ ಕೂಡಾ ತಾನು ಬರೆದ ಪತ್ರದಲ್ಲಿ ನನ್ನ ಸಾವಿಗೆ ಯಾರೂ ಕಾರಣರಲ್ಲ ನಾನು ಜೀವನದಲ್ಲಿ ಜಿಗುಪ್ಸೆ ಬಂದು ಸಾಯುತ್ತಿದ್ದೇನೆ ಎಂದು ಬರೆದಿದ್ದಳು." ಇಷ್ಟನ್ನು ಹೇಳಿದ ಶಾಂತಿ ಲಾಲರು "ಇನ್ನು ನನಗೆ ನ್ಯಾಯ ಸಿಗುವದೆಂಬ ನಂಬಿಕೆ ಉಳಿದಿಲ್ಲ. ಕೋರ್ಟಲ್ಲಿ ಕೇಸು ಹಾಕಿ ಗೆಲ್ಲುವಷ್ಟು ಚೈತನ್ಯ ಉಳಿದಿಲ್ಲ. ನಾನು ಇನ್ನು ಹೆಚ್ಚು ವರ್ಷ ಬದುಕುತ್ತೇನೆಂಬ ಆಸೆಯೂ ಇಲ್ಲ. ನಿಮ್ಮ ತಂದೆಯವರು ನನಗೆ ಪರಿಚಯ. ಒಮ್ಮೆ ನನ್ನ ಮಗನನ್ನು ಕಾಣಿರಿ. ಅವನು ಏನಾದ್ರೂ ಸಹಾಯ ಮಾಡಿಯಾನು ಎಂದು ಹೇಳಿದರು. ಅದಕ್ಕೆ ಕೊನೆಯ ಪ್ರಯತ್ನವೆಂದು ಇಲ್ಲಿಗೆ ಬಂದೆ"

"ಆಯ್ತು ನಿಮ್ಮ ಕೇಸು ತೆಗೆದುಕೊಳ್ಳುತ್ತೇನೆ. ನಿಮ್ಮ ವಿಳಾಸ, ಕೇಸು ನಡೆಯುತ್ತಿರುವ ಪೋಲಿಸ್ ಠಾಣೆ, ಚಂದ್ರಹಾಸನ ಮನೆ ಹಾಗೂ ಆಫೀಸಿನ ವಿವರ ನಮ್ಮ ಬಸವರಾಜುಗೆ ಕೊಡಿ" ಎಂದು ವಿಕ್ರಂ ಬಸವಾರಾಜು ಕಡೆ ಕೈ ತೋರಿದ.

"ತುಂಬಾ ಧನ್ಯವಾದಗಳು..." ಎಂದು ನಮಸ್ಕರಿಸಿದರು ಶಾಂತಿ ಲಾಲರು. ಶಾಂತಿ ಲಾಲರು ಬಸವಾರಾಜುಗೆ ಎಲ್ಲ ವಿವರ ನೀಡಿ ಹೊರಟು ಹೋದರು.

ನಂತರ ವಿಕ್ರಂ ಬಳಿ ಬಂದ ಬಸವರಾಜು " ಅಂತೂ ಇಂತೂ ಕೊನೆಗೂ ಒಂದು ಕೇಸನ್ನ ಒಪ್ಪಿಕೊಂಡೇ ಬಿಟ್ಟರಲ್ರಿ.ಬಾಳಾ ಖುಷಿಯಾಗ್ತಾ ಇದೇರಿ" ಅಂದ. ವಿಕ್ರಂ ಬಸವರಾಜು ಕಡೆ ನೋಡಿ ಒಮ್ಮೆ ಮುಗುಳ್ನಕ್ಕ.
ಇದರ ಮುಂದಿನ ಭಾಗ ಕಗ್ಗಂಟು - ಪತ್ತೇದಾರಿ ಕಥೆ - ಭಾಗ 3

[ಮುಂದುವರಿಯುವದು...]

ಲೇಖಕರು

ರಾಜೇಶ ಹೆಗಡೆ

ಕಂಡದ್ದು ಕಂಡ ಹಾಗೆ

ಸಾಫ್ಟವೇರ್ ಇಂಜನಿಯರ್. ಕನ್ನಡದಲ್ಲಿ ಸಾಫ್ಟವೇರ್ ತಯಾರಿಸುವದು ನನ್ನ ಹವ್ಯಾಸ. ಆಗಾಗ ಲೇಖನ ಬರೀತಿನಿ ಆದ್ರೆ ಅದರಲ್ಲಿ ಪಳಗಿದವನಲ್ಲ.

ಅನಿಸಿಕೆಗಳು

ವಿ.ಎಂ.ಶ್ರೀನಿವಾಸ ಸೋಮ, 02/16/2009 - 11:11

ಸೊಗಸಾದ ನಿರೂಪಣೆ. ಮುಂದಿನ ಭಾಗಕ್ಕಾಗಿ ನಿರೀಕ್ಷಿಸುತ್ತಿದ್ದೇವೆ.

ಮೊದಲ ಭಾಗ ನೋಡಿದ್ದೇ ಹಾಸ್ಯಮಯವಾಗಿತ್ತು.. ಭಾಗ-೨ ನೋಡಿದಮೇಲೆ ಮೌನಮಯ ಆವರಿಸಿದೆ... ಮುಂದಿನ ಭಾಗ ದುಃಖಮಯವೇನೋ ಕಾದು ನೋಡಬೇಕಿದೆ...
ನಿಮ್ಮ ಬರಹದ ಶೈಲಿ ಸುಂದರವಾಗಿದೆ, ವಿಸ್ಮಯ ನಗರಿಯಲ್ಲಿ ಎಲ್ಲವು ವಿಸ್ಮಯ ..

ಹೀಗೆ ಬರೆಯುತ್ತಲಿರಿ, ನೀವು ಒಳಿತು ಸಾಧಿಸಿ ...ಎಲ್ಲರಿಗು ಒಳಿತು ತಿಳಿಸಿ...
ವಂದನೆಗಳು..

narration ಚೆನ್ನಾಗಿದೆ.. next episodeಗೆ ಕಾಯುವೆ.. :

ಅಶ್ವಿನಿ ಸೋಮ, 02/16/2009 - 16:47

ತುಂಬಾ ಚೆನ್ನಾಗಿದೆ ಮುಂದಿನ ಭಾಗಕೆ ಕಾಯುತಿದೇನೆ

shankar878 (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 02/16/2009 - 16:47

:dance: ಸ್ವಾಮಿ ಮುಂದಿನ ಭಾಗ ಯಾವಾಗ????ಸ್ವಲ್ಪ ಬೆೀಗ......

ಯೋಗೇಶ್ ಸೋಮ, 02/16/2009 - 19:51

ನಾನೂ..ಕೂಡ ನಿರೀಕ್ಷೆಯೊಂದಿಗೆ........

ರಾಜೇಶ ಹೆಗಡೆ ಧ, 02/18/2009 - 21:34

ಎಲ್ಲರಿಗೂ ವಂದನೆಗಳು :) ಮುಂದಿನ ಭಾಗ ಬರೀ ಮೌನಮಯ ಅಥವಾ ದುಃಖಮಯವಾಗಿರದೇ ಕೌತುಕಮಯ ಹಾಗೂ ಹಾಸ್ಯಮಯವಾಗಿರುತ್ತದೆ ಎನ್ನುವದು ನನ್ನ ಭಾವನೆ. :D

ಸಮಾಜಮುಖಿ. (ಪ್ರಮಾಣಿಸಲ್ಪಟ್ಟಿಲ್ಲ.) ಧ, 02/25/2009 - 20:00

ಕೂಲ್.......

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 02/27/2009 - 15:04

ತುಂಬಾ ಇಂಟರೆಸ್ಫಿಂಗ ಆಗಿದೆ.

Gurudatta (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 03/02/2009 - 02:21

Interesting... waiting.

ಪೂನಾವಾಲ (ಪ್ರಮಾಣಿಸಲ್ಪಟ್ಟಿಲ್ಲ.) ಧ, 03/04/2009 - 13:10

:sleep: ಗುರುವೇ...
ಈ ಕಥೆಯ ಮುಂದಿನ ಭಾಗ ಯಾವಾಗ ತೋರುಸ್ತೀರಪ್ಪಾ...?

ಎಳ್ದು ವಾರದಿಂದಾ ಕಾದೂ ಕಾದೂ ಸಾಕಾಗೈತೆ. ನನಿಗನ್ನಿಸ್ದಂಗೆ ಈ ಕತೆ ಬರೀತಾಯಿರೋನಿಗೆ ಏನೋ ದ್ವಡ್ರೋಗ ಬಂದಿರಭೋದು. ಅದಿಕ್ಕೇ ಈ ಕತೆ ಮುಂದ್ವರೀತಾಯಿಲ್ಲ. :sleep:

ಶರಣ್ಯ (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 03/05/2009 - 16:55

:symapthy: ಹಾಯ್ ..............
ನಿಮ್ಮ ಕತೆ ತು0ಬಾ ಚೆನ್ನಾಗಿದೆ. ಆದ್ರೆ ಕೊನೆಯ ಭಾಗ ಬೆೀಗ ಬರೆದು ನಮ್ಮ ಕುತುಹಲ ಕಡಿಮೆ ಮಾಡಿ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.