Skip to main content

ಕಗ್ಗಂಟು - ಪತ್ತೇದಾರಿ ಕಥೆ - ಭಾಗ 1

ಬರೆದಿದ್ದುFebruary 7, 2009
6ಅನಿಸಿಕೆಗಳು

ಒಂದು ಪತ್ತೇದಾರಿ ಕಥೆ ವಿಸ್ಮಯದಲ್ಲಿ ಬರೆಯಬೇಕು ಅನ್ನುವದು ನನ್ನ ಬಹುದಿನದ ಕನಸು. ಆದರೆ ಸಮಯ ಸಿಕ್ಕಿರಲಿಲ್ಲ. ನಾನು ಪಳಗಿದ ಕಥೆಗಾರ ಅಲ್ಲ ! ತರ್ಕ ದೋಷ ಆದರೆ ನೀವು ಅದನ್ನು ಎತ್ತಿ ತೋರಿಸಿ ಸರಿದಾರಿಗೆ ತರುವ ಭರವಸೆಯೊಂದಿಗೆ ಆರಂಭಿಸುತ್ತಿದ್ದೇನೆ. ಈ ಕಥೆಯಲ್ಲಿ ಬರುವ ಸನ್ನಿವೇಶ, ಪಾತ್ರದಾರಿಗಳು ಎಲ್ಲ ಕಾಲ್ಪನಿಕ. ಅಕಸ್ಮಾತ್ ಯಾರನ್ನಾದರೂ ಹೋಲುತ್ತಿದ್ದರೆ ಅದು ಆಕಸ್ಮಿಕ ಮಾತ್ರ :)

ಬೆಂಗಳೂರಿನ ಕೋರಮಂಗಲದ ಫೋರಂನಿಂದ ಮಾರು ದೂರ ಇರುವ ಮೂರಂತಸ್ತಿನ ಬಿಲ್ಡಿಂಗ್. ಅದರಲ್ಲಿ ಮೂರನೆ ಅಂತಸ್ತಿನಲ್ಲಿ ಇದೆ ವಿಕ್ರಂನ ಕಂಪನಿ ಆಫೀಸು!
ವಿಕ್ರಂ ಆಸಕ್ತಿ ಇಲ್ಲದಿದ್ದರೂ ಅಪ್ಪ ಅಮ್ಮನ ಆಸೆಗೆ ಗಂಟು ಬಿದ್ದು ಮೆಕಾನಿಕಲ್ ಬಿಇ ಮಾಡಿದ್ದ. ಆದರೆ ನಾಲ್ಕು ವರ್ಷದ ಬಿಇ ಮುಗಿಸಲು ಐದು ವರ್ಷ ಬೇಕಾಯ್ತು! ಚಿಕ್ಕಂದಿನಿಂದಲೂ ಪತ್ತೆದಾರಿ ಕಥೆಗಳು, ಸಿನಿಮಾ ಅಂದ್ರೆ ಪಂಚಪ್ರಾಣ. ಅಪ್ಪ ದೊಡ್ಡ ಬ್ಯುಸಿನೆಸ್ ಮನ್. ಪತ್ತೇದಾರನಾಗಬೇಕು ಅನ್ನೋದು ಕನಸು. ಕೊನೆಗೂ ಹಠ ಮಾಡಿ ತೆಗೆದ ತನ್ನದೇ ಆದ ಕಂಪನಿ ರಹಸ್ಯ ಡಿಟೆಕ್ಟಿವ್ ಎಜೆನ್ಸಿ! ಆತ ಒಬ್ಬ ಬಸವರಾಜು ಎಂಬುವವನನ್ನು ಸಹಾಯಕನನ್ನಾಗಿ ನೇಮಿಸಿಕೊಂಡ. ಬಸವರಾಜು ಪಿಯುಸಿ ಫೇಲ್. ಅಪ್ಪ ಹೊಲ-ಗಿಲ ನೋಡಿಕೊಂಡು ಆರಾಮಾಗಿರು ಅಂದ್ರೆ ಬೆಂಗಳೂರಿನಲ್ಲಿ ಕೆಲಸ ಹುಡುಕುತ್ತೀನಿ ಅಂತಾ ಬಂದವನು. ತೀರಾ ಪ್ರಾಮಾಣಿಕ ವ್ಯಕ್ತಿ. ಸ್ವಲ್ಪ ಮುಗ್ದ ಕೂಡಾ!

ಒಂದೇ ಸಮನೆ ಫೋನ್ ಟ್ರಿಣ್ ಟ್ರಿಣ್ ಎಂದು ಬಡಿದುಕೊಳ್ಳುತ್ತಾ ಇತ್ತು.
ಕುಳ್ಳನೆಯ ವ್ಯಕ್ತಿಯೊಬ್ಬ ಬಂದು ಎತ್ತಿ ಹೇಳಿದ "ಹಲೋ, ರಹಸ್ಯ ಡಿಟೆಕ್ಟಿವ್ ಎಜೆನ್ಸಿ. ಬಸವರಾಜು ಸ್ಪೀಕಿಂಗ್".
"ನಾನು ರಮೇಶ್ ಅಂತಾ. ನಂಗೆ ಸಹಾಯ ಮಾಡಿ?" ಎಂದು ಕೇಳಿತು ಅತ್ತಲಿನ ದ್ವನಿ.
"ಲೈನಲ್ಲಿ ಇರಿ ಸಾರ್ ಸಾಹೆಬ್ರು ಬರ್ತಾರ" ಎಂದು ಫೋನ್ ಕೆಳಗಿಟ್ಟು ಆ ವ್ಯಕ್ತಿ "ಸಾರ್ ಸಾರ್ ಫೋನ್ ಬಂದೈತ್ರಿ" ಎಂದು ಕೂಗಿದ. ಅದನ್ನು ಕೇಳಿ ಒಬ್ಬ ಕಟ್ಟು ಮಸ್ತಾದ ಯುವಕ ಬಂದು ಫೋನ್ ಎತ್ತಿದ.
"ಹೇಳಿ? ನಾನು ವಿಕ್ರಂ"
"ಇವರೇ ನನ್ನ ಪ್ರಿಯಾ ಕಾಣಿಸ್ತಾ ಇಲ್ಲ. ಆಕೆಗೆ ನಿನ್ನೆ ಸಂಜೆಯಿಂದ ಕಾಲ್ ಮಾಡೋಕೆ ಪ್ರಯತ್ನ ಪಡ್ತಾ ಇದೀನಿ. ಕಾಲೇಜಿಗೂ ಬಂದಿರಲಿಲ್ಲ"
"ಪೋಲಿಸರಿಗೆ ಕಂಪ್ಲೇಂಟ್ ಕೊಟ್ಟಿದೀರಾ?"
"ಹುಂ ಆದ್ರೆ ನೀವು ಸಹ ಪ್ಲೀಸ್ ಹುಡ್ಕೋಕೆ ಸಹಾಯ ಮಾಡ್ತೀರಾ?"
"ಪ್ರಿಯಾ ನಿಮಗೇನಾಗಬೇಕು?"
"ಅವಳು ನನ್ನ ಗರ್ಲ್ ಫ್ರೆಂಡ್ ಸಾರ್. ಮನೆಯವರಿಗೆ ನಮ್ಮ ಪ್ರೀತಿ ಬಗ್ಗೆ ಹೇಳಿದ್ವಿ ಒಪ್ಪಲಿಲ್ಲ. ನಾವು ಓಡಿ ಹೋಗೋ ಪ್ಲಾನ್ ಮಾಡ್ತಾ ಇದ್ವಿ ಆದ್ರೆ ನಿನ್ನೆಯಿಂದ ಕಾಣ್ತಾ ಇಲ್ಲ."
"ಓ ಬರೀ ಗರ್ಲ್ ಫ್ರೆಂಡಾ ಅಯ್ಯ ಮಡಗಯ್ಯ ಫೋನು. ಅವಳಿಗೆ ಮನೆಯಲ್ಲಿ ಮದುವೆ ಮಾಡೋಕೆ ರೆಡಿ ಮಾಡ್ತಾ ಇರಬೇಕು ಅಥವಾ ಹೊಸ ಬಾಯ್ ಫ್ರೆಂಡ್ ಹುಡ್ಕೊಂಡಿರಬೇಕು. ನೀನು ಬೇರೆ ಯಾವುದಾದ್ರು ಹೊಸ ಗರ್ಲ್ ಫ್ರೆಂಡ್ ಹುಡ್ಕೋ" ಎಂದು ಫೋನ್ ಕುಕ್ಕಿದ.
ಅಲ್ಲೇ ಇದ್ದ ಅಸಿಸ್ಟಂಟ್ ಬಸವರಾಜುಗೆ ತುಂಬಾ ಬೇಸರ ಆಗಿತ್ತು. ರಹಸ್ಯ ಡಿಟೆಕ್ಟಿವ್ ಎಜೆನ್ಸಿ ಓಪನ್ ಆಗಿ 2 ತಿಂಗಳಾಯ್ತು. ವಿಕ್ರಂ ಒಂದಾದ ಮೇಲೆ ಒಂದು ಕೇಸ್ ಹೀಗೆ ರಿಜೆಕ್ಟ್ ಮಾಡ್ತಾ ಇದ್ರೆ ಕಥೆ ಏನು? ಪ್ರತಿಯೊಂದರಲ್ಲಿ ಎನಾದ್ರು ಒಂದು ಇಷ್ಟ ಆಗಲ್ಲ ಈ ಬಾಸ್ ಗೆ. ನಿಧಾನವಾಗಿ "ಸರsss.. ಈ ಕೇಸು ಬೇಡ್ವೇನ್ರಿ?" ಎಂದು ಕೇಳಿದ.
ವಿಕ್ರಂ ನಗುತ್ತಾ ಹೇಳಿದ "ಕೇಸು ಚ್ಯಾಲೆಂಜಿಂಗ್ ಆಗಿರಬೇಕು. ಈ ತರಹ ಸಿಲ್ಲಿ ಸಿಲ್ಲಿ ಆಗಿದ್ರೆ ಕೇಸ್ ಹ್ಯಾಂಡಲ್ ಮಾಡೋಕೆ ಇಂಟರೆಸ್ಟಿಂಗ್ ಆಗಿರಲ್ಲ"
"ಅಲ್ರಿ ಸರsss.. ನೀವು ಹಿಂಗ ಮಾಡ್ಕೊಂತ ಇದ್ರ ನಿಮ್ಮಪ್ಪಾರು ಕೂಡಿಟ್ಟ ಗಂಟss... ನೀರ್ ಹಂಗss.. ಹರದ ಹೊಕ್ಕತಿ."

ನಿಜ ಬಸವರಾಜು ಹೇಳುವದು ಸತ್ಯ. ಕೋರಮಂಗಲದ ಆಫೀಸಿನ ಮತ್ತು ಮನೆಯ ಬಾಡಿಗೆ, ಬಸವರಾಜುವಿನ ಸಂಬಳ ಎಲ್ಲ ವಿಕ್ರಂ ಕೊಡುತ್ತಿದ್ದಾನೆ. ಇದಕ್ಕೆ ಅಪ್ಪನ ದುಡಿಮೆಯೇ ಕಾರಣ.ಹೀಗೆ ಎಷ್ಟು ದಿನ ಕಳೆಯಲು ಸಾಧ್ಯ. ಕೇಸು ಬರುತ್ತಿಲ್ಲ ಅಂತಿಲ್ಲ. ಬರ್ತಾ ಇದೆ. ನಮ್ಮ ಕೆಲಸಗಾರರ ಡಿಟೈಲ್ಸ್ ಸರಿ ಇದೆಯಾ? ನಾನು ಮದುವೆ ಆಗೋ ಹುಡುಗ/ಗಿ ಒಳ್ಳೆಯವಳಾ? ನನ್ನ ಗಂಡ ಮೋಸ ಮಾಡ್ತಾ ಇದಾನಾ? ಇತ್ಯಾದಿ ಇತ್ಯಾದಿ ಆದ್ರೆ ವಿಕ್ರಂ ಪ್ರತಿಯೊಂದನ್ನು ರಿಜೆಕ್ಟ್ ಮಾಡ್ತಾ ಇದಾನೆ!

ಮತ್ತೆ ಫೋನ್ ರಿಂಗ್ ಆಗತೊಡಗಿತು.
"ಸರsss.. ಒಂದ ಅವಕಾಶ ಕೊಡ್ರಿ, ನಾನು ಕೇಳಿ ನೋಡ್ತಿನ್ರಿ. ಕೇಸು ಓಕೆ ಆದ್ರ ಮಾಡೋಣು"
ವಿಕ್ರಂ ನಗುತ್ತಾ ಹೇಳಿದ " ಸರಿ ಅಟೆಂಡ್ ಮಾಡಿ"
ಬಸವರಾಜು ಫೋನ್ ಎತ್ತಿ ಹೇಳಿದ "ಹಲೋ ರಹಸ್ಯ ಡಿಟೆಕ್ಟಿವ್ ಎಜೆನ್ಸಿ"
"ಸಾರ್ ನಮ್ಮ ಮನೆ ಪಿಂಕಿ ಕಾಣಿಸ್ತಾ ಇಲ್ಲ"
"ಯಾವಾಗಿಂದ್ರಿ ?"
"ನಿನ್ನೆ ಸಂಜೆಯಿಂದ, ನಿನ್ನೆ ರಾತ್ರಿ ಇವಿನಿಂಗ್ ವಾಕಿಂಗ್ ಗೆ ಕರೆದುಕೊಂಡು ಹೋಗಿದ್ವಿ. ಆಗ ತಪ್ಪಿಸಿಕೊಂಡು ಹೋಯ್ತು. "
"ಪಿಂಕಿ ವಯಸ್ಸು ಎಷ್ಟ್ರಿ?"
"ಎಷ್ಟು ಅಂತಾ ಗೊತ್ತಿಲ್ಲ, ನಾವು ಒಂದು ಆರು ತಿಂಗಳಿಂದ ಸಾಕಿಕೊಂಡಿದೀವಿ. ಎಲ್ಲೋ ದಾರಿಯಲ್ಲಿ ಸಿಕ್ಕಿತ್ತು"
"ನೀವು ಮನುಷ್ಯರಲ್ರಿ ದೇವರ್ರಿ! ಒಂದು ಅನಾಥ ಮಗುವಿಗೆ ಬಾಳು ಕೊಟ್ಟಿರಲ್ರಿ"
"ಕ್ಷಮಿಸಿ, ಪಿಂಕಿ ಅನ್ನುವದು ನಮ್ಮ ನಾಯಿ ಹೆಸರು!"
"ಮಡಗ್ರಿ ಫೋನು ಏನಂಥಾ ಅಂದು ಕೊಂಡಿದೀರಿ ನಮ್ಮನ್ನ, ನಾಯಿ ಹುಡುಕೋರು ಅಂತೇನ್ರಿ?" ಸಿಟ್ಟಿನಿಂದ ಕುಕ್ಕಿದ ಬಸವರಾಜು ಫೋನನ್ನು. ವಿಕ್ರಂ ಜೋರಾಗಿ ನಗುತ್ತಿದ್ದ.
ಬಸವರಾಜುಗೆ ಮುನಿಸು.

ಅಷ್ಟರಲ್ಲಿ ವಯಸ್ಸಾದ ವ್ಯಕ್ತಿಯೊಬ್ಬರು ಒಳಗೆ ಬಂದರು. ಅವರು ತುಂಬಾ ದಣಿದಂತಿತ್ತು.
ಅವರಿಗೆ ವಿಕ್ರಂ "ಬನ್ನಿ, ಕುಳಿತುಕೊಳ್ಳಿ" ಎಂದು ಕುರ್ಚಿ ತೋರಿಸಿದ ನೀರು ತರುವಂತೆ ಬಸವರಾಜುಗೆ ಕೈ ಸನ್ನೆ ಮಾಡಿದ.
ಬಸವರಾಜು ತಂದ ನೀರು ಕುಡಿದ ನಂತರ ಸ್ವಲ್ಪ ಆರಾಮವಾದಂತೆ ಕಂಡ ಮುದುಕ ನಿಧಾನವಾಗಿ ತನ್ನ ಹಿನ್ನೆಲೆ ಹೇಳಲಾರಂಭಿಸಿದ.

ಈ ಕಥೆಯ ಮುಂದಿನ ಭಾಗ ಕಗ್ಗಂಟು - ಪತ್ತೇದಾರಿ ಕಥೆ - ಭಾಗ 2

ಲೇಖಕರು

ರಾಜೇಶ ಹೆಗಡೆ

ಕಂಡದ್ದು ಕಂಡ ಹಾಗೆ

ಸಾಫ್ಟವೇರ್ ಇಂಜನಿಯರ್. ಕನ್ನಡದಲ್ಲಿ ಸಾಫ್ಟವೇರ್ ತಯಾರಿಸುವದು ನನ್ನ ಹವ್ಯಾಸ. ಆಗಾಗ ಲೇಖನ ಬರೀತಿನಿ ಆದ್ರೆ ಅದರಲ್ಲಿ ಪಳಗಿದವನಲ್ಲ.

ಅನಿಸಿಕೆಗಳು

Muttige ಸೋಮ, 02/09/2009 - 21:25

keep it up .. ಚೆನ್ನಗಿದೆ. ಮುಂದಿನ ಭಾಗ ಬೇಗ ಬರಲಿ...

ವಿ.ಎಂ.ಶ್ರೀನಿವಾಸ ಮಂಗಳ, 02/10/2009 - 13:31

ವಿಷಯದ ಆಯ್ಕೆ ತುಂಬಾ ಚೆನ್ನಾಗಿದೆ. ನಿರೂಪಣೆಯಲ್ಲಿ ಅಗತ್ಯವಾದ ವೇಗ ಕಾಯ್ದುಕೊಂಡಿದ್ದೀರಿ. ಮುಂದಿನ ಭಾಗಕ್ಕಾಗಿ ಕಾಯುತ್ತಿದ್ದೇನೆ.

hema (ಪ್ರಮಾಣಿಸಲ್ಪಟ್ಟಿಲ್ಲ.) ಧ, 02/11/2009 - 12:00

ನಿಮ್ಮ ಕತೆಯ ಬರವಣಿಗೆ ಚೆನ್ನಾಗಿದೆ... ಮುಂದುವರೆಸಿ...

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಧ, 02/11/2009 - 14:02

roopesh

narasimha Murthy (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 02/12/2009 - 10:34

ಕಥೆ ಇನ್ಫ್ನೂ ಸ್ವಲ್ಪ ಬೇಗ ಬೇಗ ಬರೆಯಿರಿ ................... ನಾನು ಮುಂದಿನ ಬಾಗದ ಬಗ್ಫ್ಗೆ ಮೇಲ್ ಮಾಡಿ :dance:

ಯೋಗೇಶ್ ಸೋಮ, 02/16/2009 - 19:30

ಮೊದಲಲ್ಲೆ.. ಹಾಸ್ಯ ಹಾಗು ಪ್ರಾಸಬದ್ಧಗಳಲ್ಲಿ ಬಹಳ ಅಚ್ಚು ಕಟ್ಟಾಗಿ ಬರೆದಿದ್ದೀರ...

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.