ರಕ್ತದಲ್ಲಿ ಬರೆದ ಟಿಪ್ಪಣಿಗಳು.

ನಾನು ಪ್ರತಿ ತಿಂಗಳೂ
ನನ್ನ ದೇಹದಿಂದ ಸೋರಿ ಹೋಗುವ
ರಕ್ತ ಪ್ರವಾಹಕ್ಕೆ, ಒಗ್ಗಿಹೋಗಿದ್ದೇನೆ.
ಆದರೂ, ಮಗುವೊಂದು ಗಾಯಗೊಂಡು ರಕ್ತ
ಚಿಮ್ಮುತ್ತಿರುವ
ಬೆರಳು ಹಿಡಿದುಕೊಂಡು ಚೀರುತ್ತಾ ಬರುವಾಗ
ಗಾಬರಿ ಮತ್ತು ಸಂಕಟದಿಂದ
ತತ್ತರಿಸಿಹೋಗುತ್ತೇನೆ
ಮೊದಲ ಬಾರಿಗೆ ರಕ್ತದ ಹನಿಯನ್ನು
ನೋಡುತ್ತಿರುವವಳಂತೆ
ಮನಸ್ಸು ಅಯ್ಯೋ ಎನ್ನುತ್ತದೆ,
ಅಸಹಾಯಕಳಾಗಿ ನಿಂತುಬಿಡುತ್ತೇನೆ.

ಹೆಣ್ಣಿನ ದೇಹ ಹೊರನೂಕುವ ರಕ್ತ
ತಣ್ಣಗೆ, ಸತ್ತ ಜೇಡದ ಹೇವರಿಕೆ ಹುಟ್ಟಿಸುವ ನೆತ್ತರಿನಂತೆ
ಕಲೆ ಮೂಡಿಸಿ, ಜಿಗುಟಾಗಿ ಹೊರಬೀಳುತ್ತದೆ
ಸತ್ತ ಮಗುವಿನ ದೇಹದಿಂದ
ನೆತ್ತರಿನ ಹನಿ ತೊಟ್ಟಿಕ್ಕುತ್ತಿದೆ
ನಿಶ್ಯಬ್ದವಾಗಿ, ಅಮಾಯಕವಾಗಿ.

ಯುದ್ದರಂಗದಲ್ಲಿ ರಕ್ತ ಸುರಿಸಿದವರು
ಬೇರೆಯರ ದೇಹವನ್ನು ಇರಿದು
ರಕ್ತದ ಹೊಳೆ ಹರಿಸಿದವರು
ಗೌರವಿಸಲ್ಪಟ್ಟರು, ಉನ್ನತ ಪದವಿಗೇರಿದರು
ಯಾತನಾಶಿಬಿರಗಳ ರಕ್ತದ ಕಲೆ ತುಂಬಿದ ಗೋಡೆಗಳು
ಛಿದ್ರ ಮಾನವ ಆತ್ಮಗಳ ಹನಿಗಳ ಘಾತದಿಂದ
ತತ್ತರಿಸಿದವು
ಅವು ಆ ಯಾತನೆಯಲ್ಲೇ ಬೊಬ್ಬಿರಿಯುತ್ತಿವೆ
ಬಿಡುಗಡೆಗಾಗಿ ಮೊರೆಯಿಡುತ್ತಾ....

ಬರ್ಬರ ಕ್ರೌರ್ಯದ ಘಾಟು
ಶಿಕಾರಿಯ ಸಂಚಿನ ವಾಸನೆ
ದಯಾಹೀನ ರಕ್ತಪಿಪಾಸೆಯಿಂದ
ದಾರಿಯಲ್ಲಿ ಹೆಪ್ಪುಗಟ್ಟಿದ ರಕ್ತವೂ
ಕಟೋರವಾಗಿ, ಉನ್ಮತ್ತವಾಗಿದೆ
ಇದು ಗೋರಿಗಳ ಗೋಡೆಗಳ ಮೂಲಕ
ಎಲ್ಲವನ್ನೂ ಶುಷ್ಕಗೊಳಿಸುತ್ತಾ, ಕವಿಯುತ್ತಾ
ನಾನು ಎಲ್ಲೇ ಇರಲಿ,
ಯಮಪಾಶದಂತೆ
ನನ್ನ ಬೆನ್ನುಹತ್ತುತ್ತದೆ.

[b] ಮೂಲಃ ಅನಾರ್ (ಶ್ರೀಲಂಕಾದ ಕವಯಿತ್ರಿ) ಕನ್ನಡಕ್ಕೆ ಃ ಭಾರತಿ.[/b]

[b][b]ಒಳ್ಳೆಯದು ಎಲ್ಲೇ ಇದ್ದರೂ, ಹೇಗೇ ಇದ್ದರೂ ಅದನ್ನು ಗೌರವಿಸಬೇಕು ಎಂಬ ಮನಸ್ಥಿತಿಯ ನಾನು, ನನಗೆ ಇಷ್ಟವಾದ ಈ ಕವಿತೆಯನ್ನು ಇತರರೊಂದಿಗೆ ಹಂಚಿಕೊಳ್ಳುವ ಉದ್ದೇಶದಿಂದ , ವಿಸ್ಮಯ ನಗರಿಯಲ್ಲಿ ಇದನ್ನು ಕಾಣಿಸಿದ್ದೇನೆ. ಸ್ವೀಕರಿಸುವಿರೆಂಬ ನಂಬಿಕೆಯಲ್ಲಿb][/b]
ಧನ್ಯವಾದಗಳೊಂದಿಗೆ.
ಶೀನು.

ಈ ಲೇಖನ ಹೇಗಿದೆ?: 
ಅಂಕಗಳು: 5 (1 ಓಟು)

ಲೇಖನದ ಬಗೆ: 

Subscribe to Comments for "ರಕ್ತದಲ್ಲಿ ಬರೆದ ಟಿಪ್ಪಣಿಗಳು."